ಕಾಂಗ್ರೆಸ್ ಮಾಡ್ತಿರೋದು ಸಂಕಲ್ಪ ಯಾತ್ರೆಯಲ್ಲ, ಅಂತಿಮಯಾತ್ರೆ -ಶೆಟ್ಟರ್

ಬಿಜೆಪಿ ಜನಸೇವಕ್ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಶೆಟ್ಟರ್ ವಾಗ್ದಾಳಿ

ಕೊಪ್ಪಳ: ಚಮಚಾಗಿರಿ ಮಾಡೋರಿಗೆ ಕಿಮ್ಮತ್ತು ನೀಡೋದು ಕಾಂಗ್ರೆಸ್. ಹೊಗಳುಭಟ್ಟರನ್ನ, ಬಾಲಬಡುಕರನ್ನು ಅಟ್ಟಕೇರಿಸುವ ಚಾಳಿ ಕಾಂಗ್ರೆಸ್‌ನಲ್ಲಿದೆ. ಇದು ಕಾಂಗ್ರೆಸ್‌ನಲ್ಲಿರುವ ಶಿಸ್ತು. ಬಿಜೆಪಿಯಲ್ಲಿ ಇದು ನಡೆಯೋದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗುಡುಗಿದರು.

ಕೊಪ್ಪಳದ ಶಿವಶಾಂತ ಮಂಗಲಭವನದ ಆವರಣದಲ್ಲಿ ಬುಧವಾರ ನಡೆದ ಬಿಜೆಪಿಯ ಜನಸೇವಕ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಜಗಳ ಆರಂಭವಾಗಿದೆ. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರು ಮಾತನಾಡುತ್ತಿರುವ ವೇಳೆ ಸಿದ್ದರಾಮಯ್ಯ ಗಡದ್ದಾಗಿ ನಿದ್ದೆ ಮಾಡ್ತಾರೆ. ಇದು ಕಾಂಗ್ರೆಸ್‌ನಲ್ಲಿರುವ ಶಿಸ್ತು. ಕಾರ್ಯಕರ್ತರಿಗೆ ಕಿಮ್ಮತ್ತು ಕೊಡದ ಕಾಂಗ್ರೆಸ್ ಅಧೋಗತಿಯಲ್ಲಿದೆ.‌ ಬಿಜೆಪಿ ಆಕಾಶದೆತ್ತರಕ್ಕೆ ಬೆಳೆಯುತ್ತಾ ಹೊರಟಿದ್ದರೆ, ಕಾಂಗ್ರೆಸ್ ಪಾತಾಳದತ್ತ ಕುಸಿಯುತ್ತಿದೆ. ಅದಕ್ಕೆ ಮಾಲೀಕಯ್ಯ ಗುತ್ತೆದಾರ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ ಎಂದರು.

ಗೋಮಾತೆಗೆ ಅವಮಾನಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು. ಪಶು ಸಂಗೋಪನಾ ಸಚಿವ ಪ್ರಭು ಚಹ್ವಾಣ ಅವರು ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿ ದೊಡ್ಡ ಕೆಲಸ ಮಾಡಿದ್ದಾರೆ. ಗೋಹತ್ಯೆ ಮಾಡಿದರೆ 3 ಲಕ್ಷ ರೂಪಾಯಿ ದಂಡ, 3 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಗೋಮಾಂಸ ತಿನ್ನುತ್ತೇನೆ ಎನ್ನುವ ಹಿಂದೂಗಳ ಭಾವನೆಗೆ ಧಕ್ಕೆ ತರುವಂಥವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಕಾಂಗ್ರೆಸ್‌ನವರು ಎಂದಿಗೂ ಭಾರತ್ ಮಾತಾ‌ ಕೀ ಜೈ ಎನ್ನುವುದನ್ನು ಕಲಿಸಲೇ ಇಲ್ಲ. ಅಲ್ಲೇನಿದ್ದರೂ ಇಂದಿರಾ ಗಾಂಧಿ ಕೀ ಜೈ, ಈಗ ಪ್ರಿಯಾಂಕಾ ಗಾಂಧಿ‌ ಕೀ ಜೈ ಎನ್ನುವ ಹೊಗಳುಭಟ್ಟರ ದಂಡಿದೆ. ಕಾಂಗ್ರೆಸ್ ಬಕೆಟ್ ಹಿಡಿಯೋರಿಗೆ, ಡೋರ್ ತೆಗೆಯೋರಿಗೆ ಮಣೆ ಹಾಕ್ತಾರೆ ಎಂದು ಕಿಡಿ ಕಾರಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ ಬಿಜೆಪಿ ಪಾರ್ಟಿ ವಿತ್ ಡಿಫರೆನ್ಸ್ ಅನ್ನೋದಕ್ಕೆ ಇಲ್ಲಿನ ಕಾರ್ಯಕ್ರಮ ಸಾಕ್ಷಿ. ಬೆಂಗಳೂರಿನಲ್ಲಿ ನೂತನ ಸಚಿವರ ಪ್ರಮಾಣ ವಚನ ನಡೆದಿದೆ. ಇಲ್ಲಿ ಸಮಾವೇಶ ನಡೆದಿದೆ. 11ನೇ ತಾರೀಖಿನಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಸೇವಕದ ಸಮಾವೇಶ ಆರಂಭವಾಗಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಇದು ಬಿಜೆಪಿ ನಡೆದು ಬಂದಿರುವ ಹಾದಿ. 45 ಸಾವಿರಕ್ಕಿಂತ ಹೆಚ್ಚು ಜನ ಬಿಜೆಪಿ ಬೆಂಬಲಿತರು‌ ಗ್ರಾಪಂ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಪ್ರಧಾನಿಯಂತೆ ಮುಂದಿನ 6 ವರ್ಷಗಳ ಕಾಲ ಕಪ್ಪುಚುಕ್ಕೆ ಇಲ್ಲದಂತೆ ಗ್ರಾಪಂ ನೂತನ ಸದಸ್ಯರು ಕೆಲಸ ಮಾಡಬೇಕಿದೆ. ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಶಪಥ ಮಾಡಬೇಕು ಎಂದರು.

ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಸ್ಥಾನಮಾನ ಇದೆ. ಸಾಮಾನ್ಯ ಕಾರ್ಯಕರ್ತನೂ ದುಡಿಯುವ ಪಕ್ಷ ಎಂದರೆ ಬಿಜೆಪಿ. ಗ್ರಾಪಂನ ಬಿಜೆಪಿ ಬೆಂಬಲಿತ ನೂತನ ಸದಸ್ಯರು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಕೆಲಸ ಮಾಡಿ, ಪಕ್ಷ ಬೆಳೆಸಿ ಎಂದು ಅವರು ಕರೆ ನೀಡಿದರು.

ಪಶು ಸಂಗೋಪನಾ ಸಚಿವ ಪ್ರಭು ಚಹ್ವಾಣ್ ಮಾತನಾಡಿ, ಗೋಹತ್ಯೆ ನಿಷೇಧ ಮಾಡಿದ್ರೆ ಕಾಂಗ್ರೆಸ್‌ನವರಿಗೆ ಸಹಿಸಲು ಆಗುತ್ತೆ. ಬಿಜೆಪಿಯವರಿಗೆ ಗೋವು ತಾಯಿ ಸಮಾನ. ಕಾಂಗ್ರೆಸ್‌ನವರಿಗೆ ಗೋವಿನ ಹಾಲು, ಮೊಸರು ಬೇಡ ಅನಿಸುತ್ತೆ. ಅದಕ್ಕೆ ಗೋವಧೆಗೆ ಪ್ರಚೋದನೆ ನೀಡ್ತಾರೆ. ಗೋಮಾತೆಯ ರಕ್ಷಣೆ ಆಗಬೇಕು. ಗೋಮಾತೆಯನ್ನು ನಾವೆಲ್ಲ ರಕ್ಷಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಕಸಾಯಿಖಾನೆ‌ ಬಂದ್ ಆಗ್ತವೆ. ಗೋವಧೆ ಮಾಡಿದ್ರೆ ಸುಮ್ಮನಿರಲ್ಲ ಎಂದ ಅವರು, ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ನಾಗರಿಕನ ಕೊಡುಗೆ ಇರಬೇಕೆಂಬ ಕಾರಣಕ್ಕಾಗಿ ಜನವರಿ 15ರಿಂದ ಹಣಸಂಗ್ರಹ ಅಭಿಯಾನ ಶುರುವಾಗುತ್ತೆ. ಸಾರ್ವಜನಿಕರು ಸಹಾಯ ಮಾಡಿ ಸಹಕರಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಹಿಳೆಯರು ಸರಕಾರದ ಯೋಜನೆಗಳನ್ನು ಅರಿತುಕೊಳ್ಳಬೇಕು. ಆಡಳಿತ, ಅಧಿಕಾರದಲ್ಲಿ ಗಂಡಂದಿರ ಸಹಾಯ, ಸಹಕಾರ ಪಡೆಯಬೇಕೇ ಹೊರತು ಅವರನ್ನೇ ಅಧಿಕಾರ ನಡೆಸುವಂತೆ ಮಾಡಬಾರದು ಎಂದರು.

ಸಂಸದ ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ ಮತ್ತಿತರರು ಮಾತನಾಡಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಬಿಜೆಪಿ ಬೆಂಬಲಿತ ನೂತನ ಸದಸ್ಯರಿಗೆ ಗಣ್ಯರಿಂದ ಪುಷ್ಪಮಳೆ ಸುರಿಸುವ ಮೂಲಕ ಅಭಿನಂದಿಸಲಾಯಿತು.

ಈ ವೇಳೆ ಶಾಸಕರಾದ ಬಸವರಾಜ ದಢೇಸೂಗೂರು, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಗಿರಿಗೌಡ, ಅಮರೇಶ ಕರಡಿ,  ಎಂ‌.ಬಿ.ಪಾಟೀಲ, ಮಹಾಂತೇಶ ಮಾಲೀಪಾಟೀಲ್, ಸಿಂಗನಾಳ ವಿರೂಪಾಕ್ಷಪ್ಪ ಮತ್ತಿತರರು ಇದ್ದರು. ಚಂದ್ರಶೇಖರ ಪಾಟೀಲ, ಹಲಗೇರಿ ನಿರೂಪಿಸಿದರು. ರಮೇಶ್ ನಾಡಿಗೇರ ಸ್ವಾಗತಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ ವಂದಿಸಿದರು.

Please follow and like us:
error