ಕಾಂಗ್ರೆಸ್ ಜತೆ ಮೈತ್ರಿ ವಿರೋಧಿಸಿ ರಾಜೀನಾಮೆ ನೀಡಿದ ಶಿವಸೇನೆ ನಾಯಕ

ಮುಂಬೈ, ನ.27: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಲಿದ್ದಾರೆಂದು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಘೋಷಿಸಿದ ಬೆನ್ನಿಗೇ ಕಾಂಗ್ರೆಸ್ ಜತೆಗೆ ಶಿವಸೇನೆಯ ಮೈತ್ರಿ ವಿರೋಧಿಸಿ ಶಿವಸೇನೆಯ ನಾಯಕ ರಮೇಶ್ ಸೋಳಂಕಿ ತಾವು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಟ್ವಿಟ್ಟರ್‌ನಲ್ಲಿ ಘೋಷಿಸಿದ್ದಾರೆ. ತಾವು ತಮ್ಮ ಜೀವನದ ಅತ್ಯಂತ ಕಷ್ಟಕರ ತೀರ್ಮಾನವನ್ನು ಭಾರವಾದ ಹೃದಯದಿಂದ ಮಾಡುತ್ತಿರುವುದಾಗಿಯೂ ಅವರು ಬರೆದಿದ್ದಾರೆ.

‘‘ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವುದಕ್ಕೆ ಹಾಗೂ ಶಿವಸೇನೆಯ ಸೀಎಂ ಹೊಂದುವುದಕ್ಕೆ ಅಭಿನಂದನೆಗಳು. ಆದರೆ ಕಾಂಗ್ರೆಸ್ ಜತೆಗೆ ಕೆಲಸ ಮಾಡಲು ನನ್ನ ಆತ್ಮಸಾಕ್ಷಿ ಹಾಗೂ ಸಿದ್ಧಾಂತ ನನಗೆ ಒಪ್ಪಿಗೆ ನೀಡುವುದಿಲ್ಲ. ಅರೆ ಮನಸ್ಸಿನಿಂದ ಕೆಲಸ ಮಾಡಲು ನನಗೆ ಸರಿಯಾಗದು ಹಾಗೂ ಅದು ನನ್ನ ಹುದ್ದೆಗೆ, ನನ್ನ ಪಕ್ಷಕ್ಕೆ, ನನ್ನ ಸಹ ಶಿವಸೈನಿಕರಿಗೆ ಹಾಗೂ ನಾಯಕರಿಗೆ ನ್ಯಾಯವನ್ನೂ ಒದಗಿಸಿದಂತಾಗುವದಿಲ್ಲ’’ ಎಂದು ಅವರು ಬರೆದಿದ್ದಾರೆ.

ಆದರೆ ತಾವು ಯಾವತ್ತೂ ಬಾಳಾ ಸಾಹೇಬ್ ಅವರ ಶಿವಸೈನಿಕನಾಗಿ ಉಳಿಯುವುದಾಗಿಯೂ ಅವರು ಬರೆದಿದ್ದಾರೆ.

ತಾವು ಶಿವಸೇನೆಯಲ್ಲಿ 21 ವರ್ಷಗಳಿಂದ ಇದ್ದುದಾಗಿ ಹೇಳಿರುವ ಸೋಳಂಕಿ ಇತ್ತೀಚೆಗೆ ನೆಟ್‌ಫ್ಲಿಕ್ಸ್ ವಿರುದ್ಧ ದೂರು ನೀಡಿ ಅದನ್ನು ಸೆನ್ಸಾರ್‌ಗೆ ಒಳಪಡಿಸಬೇಕೆಂದು ಆಗ್ರಹಿಸಿ ಸುದ್ದಿಯಲ್ಲಿದ್ದರು.

Please follow and like us:
error