ಕಾಂಗ್ರೆಸ್ ಗೆ ನೈತಿಕತೆ ಇದ್ದರೆ ಸಭಾಪತಿಗೆ ರಾಜೀನಾಮೆ ಕೊಡಲು ಸೂಚಿಸಬೇಕು: ಸಿಎಂ ಯಡಿಯೂರಪ್ಪ

ಬೆಂಗಳೂರು, : ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಸದಸ್ಯರು ಬೆಂಬಲಿಸಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕಿತ್ತು. ಸಭಾಪತಿ ಪೀಠದಲ್ಲಿ ಉಪಸಭಾಪತಿ ಅವರನ್ನು ಕೂರಿಸುತ್ತೇವೆಂದು ನಾವು ಪ್ರಕಟಿಸಿದ್ದೆವು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ಉಪಸಭಾಪತಿ ಅವರೇ ಮುಂದುವರಿಯುತ್ತಾರೆ. ‘ಬೆಲ್’ ಚಾಲನೆಯಲ್ಲಿರುವ ವೇಳೆ ಪೀಠಕ್ಕೆ ಬಂದರು ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ನೈತಿಕತೆ ಇದ್ದರೆ ಸಭಾಪತಿಗೆ ರಾಜೀನಾಮೆ ಕೊಡಲು ಸೂಚಿಸಬೇಕು. ಘಟನೆಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ’ ಎಂದು ತಿಳಿಸಿದರು.

ಬಿಜೆಪಿಯೇ ನೇರ ಕಾರಣ: ”ವಿಧಾನ ಪರಿಷತ್ತಿನಲ್ಲಿ ನಡೆದ ಜಟಾಪಟಿಗೆ ಬಿಜೆಪಿಯೇ ನೇರ ಕಾರಣ. ಚರ್ಚೆಗೆ ಪ್ರತಿಪಕ್ಷ ಕಾಂಗ್ರೆಸ್ ತಯಾರಾಗಿತ್ತು. ಆದರೆ, ನಿಯಮಾವಳಿಯನ್ವಯ ಕಲಾಪ ನಡೆಸಬೇಕೆಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು” ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಆರೋಪ ಮಾಡಿದ್ದಾರೆ.

ಬಿಜೆಪಿ ಸದಸ್ಯರು ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಭಾಪತಿ ಪೀಠದ ಮುಂದೆ ರಂಪಾಟ ಮಾಡಿದರು. 2009ರಲ್ಲಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ವಿಧಾನಸಭೆಯೊಳಗೆ ಬಿಡದೇ ಬಿಜೆಪಿ ಪ್ರಜಾಪ್ರಭುತ್ವವನ್ನು ಅಣುಕಿಸಿತ್ತು. ಈಗಲೂ ವಿಧಾನ ಪರಿಷತ್‍ನಲ್ಲಿ ಗದ್ದಲ ಎಬ್ಬಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಿಜೆಪಿ ಅವಮಾನ ಮಾಡಿದೆ ಎಂದು ದೂರಿದರು.

ಸಭಾಪತಿ ಪೀಠದ ಮುಂದೆ ಯಾರು ಗದ್ದಲ ಮಾಡಿದರು ಎಂಬುದನ್ನು ಇಡೀ ದೇಶ ನೋಡಿದೆ. ಆದರೆ, ಸಚಿವ ಸ್ಥಾನದಲ್ಲಿರುವವರು ಆಲೋಚಿಸಿ ಮಾತನಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಸ್ಥಾನದ ಘನತೆಯನ್ನು ಅರಿತು ಮಾತನಾಡಬೇಕು ಎಂದ ಅವರು, ಪರಿಷತ್ ಕಲಾಪ ಕರೆಯಬೇಕಾದರೆ ಸಚಿವ ಸಂಪುಟದ ಅನುಮೋದನೆ ಅಗತ್ಯ ಎಂದರು.

ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ನಡೆದ ಅಹಿತಕರ ಘಟನೆ ನಡೆಯಬಾರದಿತ್ತು. ಇಂತಹ ಅಗೌರವ ಸೂಚಿಸಿದ ಘಟನೆ ಯಾವತ್ತು ಆಗಿರಲಿಲ್ಲ. ಉಪ ಸಭಾಪತಿಯವರು ಸಭಾಪತಿ ಸೂಚನೆ ಬಳಿಕ ಪೀಠದಲ್ಲಿ ಕೂರಬೇಕು. ಆದರೆ, ಅವರ ಸೂಚನೆ ಇಲ್ಲದೆಯೆ ಸಭಾಪತಿ ಪೀಠದಲ್ಲಿ ಕೂತಿದ್ದು ತಪ್ಪು ಎಂದು ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ರಾಜಭವನದ ಗೌರವವನ್ನು ಬಿಜೆಪಿ ಗಾಳಿಗೆ ತೂರಿದ್ದು, ಅದನ್ನು ಬಿಜೆಪಿ ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡಿದೆ. ರಾಜ್ಯಪಾಲರು ಸೂಚನೆ ಕೊಟ್ಟರೆ ಸಭಾಪತಿ ವಿರುದ್ಧದ ಅವಿಶ್ವಾಸ ಎದುರಿಸಲು ತಯಾರಾಗಿದ್ದೇವೆ. ಎಲ್ಲಿಯವರೆಗೂ ಸಭಾಪತಿ ಇರುತ್ತಾರೋ ಅಲ್ಲಿಯವರೆಗೆ ಅವರೇ ಸುಪ್ರೀಂ. ಸದನದ ನಿಯಮ ಪಾಲನೆ ಮಾಡಲಿ ನಮ್ಮ ಅಭ್ಯಂತರವಿಲ್ಲ ಎಂದು ಹರಿಪ್ರಸಾದ್ ಸ್ಪಷ್ಟನೆ ನೀಡಿದರು.

Please follow and like us:
error