ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನನ್ನ ಜೂನಿಯರ್: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ

ಬೆಳಗಾವಿ, ನ. 15: ಹಿರಿಯ ಮುಖಂಡ ಎಚ್.ವಿಶ್ವನಾಥ್ ಅವರು ನನ್ನ ಗುರು. ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಜೂನಿಯರ್ ಎಂದು ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಶುಕ್ರವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸಲಿರುವ ಲಖನ್ ಜಾರಕಿಹೊಳಿ ನನ್ನ ಸಹೋದರನಲ್ಲ, ಆತ ನನ್ನ ವಿರೋಧಿ. ಡಿ.5ರ ವರೆಗೆ ಆತ ನನ್ನ ತಮ್ಮನಲ್ಲ. ಆ ನಂತರ ಆತ ನನ್ನ ತಮ್ಮ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

‘ರಮೇಶ್ ಜಾರಕಿಹೊಳಿ ನನ್ನ ಶಿಷ್ಯನಲ್ಲ’ ಎಂಬ ಸಿದ್ದರಾಮಯ್ಯನವರ ಮಾತು ಸತ್ಯ. ವಿಶ್ವನಾಥ್ ನನ್ನ ಗುರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್. ಬ್ರಿಟಿಷರು ಕುತಂತ್ರ ಮಾಡಿದ ಹಾಗೆ ಕಾಂಗ್ರೆಸ್‌ನವರು ಕುತಂತ್ರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಒಂದೇ ವಿಮಾನದಲ್ಲಿ ಬಂದರೂ ಸಹೋದರರಿಬ್ಬರು ಯಾಕೆ ಮಾತನಾಡಲಿಲ್ಲ ಎಂಬ ಬಗ್ಗೆ ಪತ್ರಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಇಬ್ಬರು ವಿಮಾನದಲ್ಲಿ ಬಂದಿರುವುದು ಸಹಜ. ಆದರೆ, ಸತೀಶ್ ಜೊತೆಗೆ ನಾನು ಮಾತನಾಡುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಸತೀಶ್ ಜಾರಕಿಹೊಳಿ ಜೊತೆ ನಾನು 40 ವರ್ಷದಿಂದ ಮಾತಾಡಿಲ್ಲ. ಮುಂದೆಯೂ ಮಾತನಾಡುವುದಿಲ್ಲ. ಲಖನ್ ಜಾರಕಿಹೊಳಿ ನನಗೆ ಬೆನ್ನಿಗೆ ಚೂರಿ ಹಾಕಿದ್ದಾನೆ. ಆದರೆ, ನಾನು ಸತೀಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ರಮೇಶ್ ಸ್ಪಷ್ಟಪಡಿಸಿದರು.

Please follow and like us:
error