ಕಳಪೆ ಬೀಜ ಕಂಪನಿ ಹಾಗೂ ಮಾರಾಟ ಮಾಡಿದ ಅಂಗಡಿ ವಿರುದ್ಧ ಕ್ರಮಕ್ಕೆ ಶಿಫಾರಸು: ಬಿ.ಸಿ‌ ಪಾಟೀಲ

bc_patil_koppal_district_minister
bc_patil_koppal_district_minister

ಕೊಪ್ಪಳ: ಕೊಪ್ಪಳದಲ್ಲಿ ಇತ್ತಿಚೆಗೆ ರೈತರಿಗೆ ಕಳಪೆ ಬೀಜ, ಗೊಬ್ಬರ‌ ವಿತರಿಸಿದ ಪ್ರಕರಣ ಗಮನಕ್ಕೆ ಬಂದಿದ್ದು, ಪೂರೈಕೆಯಾದ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದೀಗ ಪ್ರಯೋಗಾಲಯದ ವರದಿ ಬಂದಿದ್ದು ಕಳಪೆ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿರುವುದು ಸಾಬೀತಾಗಿದೆ. ಮಾರಾಟವಾದ ಗೊಬ್ಬರ ಕಂಪನಿ ಹಾಗೂ ಮಾರಾಟ ಮಾಡಿದ ಅಂಗಡಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಕಳಪೆ ಗೊಬ್ಬರ ಪತ್ತೆಯಾಗಿದ್ದು, ಪೆರಿಗ್ರಿನ್ ಕಂಪನಿಯ ಗೊಬ್ಬರ ಕಳಪೆ ಎಂಬುದು ಗೊತ್ತಾಗಿದೆ. ಪ್ರಯೋಗಾಲಯದ ವರದಿ ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು. ಈ ಕಂಪನಿ ಕಲಬುರಗಿಯಲ್ಲಿ ಇದ್ದು, ಸೀಜ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊಪ್ಪಳದ ಶಾಂತಿ ಆಗ್ರೋದಲ್ಲಿ ಈರುಳ್ಳಿ ಬೀಜ ಕಳಪೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ‌ ನೀಡಿದ ಅವರು, ಈ ಬಗ್ಗೆ ತೋಟಗಾರಿಕೆ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಪರಿಶೀಲಿಸಿ ವರದಿ ನೀಡಲಿದೆ ಎಂದು ವಿವರಿಸಿದರು.

ಪೊಲೀಸ್ ಇಲಾಖೆಯ ಆಂತರಿಕ ಕಲಹ ಕುರಿತು ಸಾಕಷ್ಟು ಪರಸ್ಪರ ಪರ-ವಿರೋಧ ದೂರುಗಳು ಬಂದಿದ್ದು, ಅವುಗಳನ್ನು ಗೃಹಮಂತ್ರಿಗಳ ಗಮನಕ್ಕೆ ತರಲಾಗಿದೆ. ಪೊಲೀಸ್ ಇಲಾಖೆಯ ವರ್ಗಾವಣೆ ತಮಗೆ ಸಂಬಂಧಿಸಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಕೊಪ್ಪಳ ಜಿಪಂ ಸಿಇಒ ರಘುನಂದನ್ ಮೂರ್ತಿ ಸೇರಿದಂತೆ ಇತರರು ಇದ್ದರು.

Please follow and like us:
error