ಕಲ್ಯಾಣ ಕರ್ನಾಟಕ ಭಾಗದ ಜನತೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು: ಬಿ.ಸಿ.ಪಾಟೀಲ್

73ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಜನತೆ ಪ್ರತಿಭಾವಂತರಾಗಿದ್ದು, ಹಿಂದುಳಿದಿದ್ದೇವೆ ಎಂಬ ಕೀಳರಿಮೆ ಬಿಟ್ಟು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಹೇಳಿದರು.
 ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ 73ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ರಾಷ್ಟç ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
 ಕಲ್ಯಾಣ ಕರ್ನಾಟಕ ಭಾಗದಿಂದ ಶೈಕ್ಷಣಿಕ ಫಲಿತಾಂಶಗಳಲ್ಲಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ದೇಶದ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಅವರನ್ನೆಲ್ಲ ಸ್ಫೂರ್ತಿಯಾಗಿಟ್ಟುಕೊಂಡು, ಹಿಂದುಳಿದ ಪ್ರದೇಶದವರು ಎಂಬ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಸ್ವಯಂ ಬೆಳೆಯಬೇಕು. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಐಟಿ ಕ್ಷೇತ್ರವನ್ನು ವಿಸ್ತರಿಸುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿದ್ದು, ಈ ಹಿನ್ನೆಲೆ ಈ ಭಾಗಕ್ಕೆ ಅನೇಕ ಕಾರ್ಖಾನೆಗಳು, ಕೈಗಾರಿಕೆಗಳು ಬರುತ್ತಿವೆ ಎಂದರು.
 ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 5300 ಕೋಟಿ ವೆಚ್ಚದಲ್ಲಿ ಗೊಂಬೆ ಕ್ಲಸ್ಟರ್ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ. ಇದರಿಂದ ಈ ಭಾಗದಲ್ಲಿ 40 ಸಾವಿರ ಉದ್ಯೋಗಗಳು ದೊರೆಯಲಿದ್ದು, ಇದರಿಂದ ಜಿಲ್ಲೆಯ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದಾಗಿದೆ. ನಮ್ಮ ಜಿಲ್ಲೆ ಇನ್ನೂ ಉನ್ನತ ಮಟ್ಟಕ್ಕೆ ಹೋಗಬೇಕು ಎಂಬ ಆಸೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಸಿಗುವ ಅನುದಾನವನ್ನು ಸಮರ್ಪಕವಾಗಿ ಬಳಸಿ, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಆಡಳಿತ ವರ್ಗ, ಅಧಿಕಾರಿ ವರ್ಗದವರೆಲ್ಲರೂ ಸೇರಿ ಒಟ್ಟಾಗಿ ಶ್ರಮಿಸೋಣ ಎಂದು ಅವರು ಹೇಳಿದರು.
 2013 ರಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಶೈಕ್ಷಣಿಕ ಹಾಗೂ ಉದ್ಯೋಗದ ಅನುಕೂಲಕ್ಕಾಗಿ ಸಂವಿಧಾನದ ಕಲಂ 371(ಜೆ) ಯನ್ನು ಜಾರಿಗೆ ತಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗಿದೆ. ಈ ಭಾಗದ ಜನರು ಅದರ ಸದುಪಯೋಗಪಡೆದುಕೊಳ್ಳಬೇಕು. ಪ್ರಸ್ತುತ ಕೋವಿಡ್‌ನಿಂದ ಉಂಟಾದ ಲಾಕ್‌ಡೌನ್ ನಿಂದ ಆರ್ಥಿಕವಾಗಿ ಎಲ್ಲ ವರ್ಗದರಿಗೂ ತೊಂದರೆ ಉಂಟಾಯಿತು. ಅದರಲ್ಲೂ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲಾಗದೆ ನಷ್ಟ ಅನುಭವಿಸಬೇಕಾಯಿತು. ಅದಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ 1 ಲಕ್ಷ ಕೋಟಿಯನ್ನು ಕೃಷಿಗಾಗಿ ಹಾಗೂ 10 ಸಾವಿರ ಕೋಟಿಗಳನ್ನು ಆಹಾರ ಸಂಸ್ಕರಣೆ ಮತ್ತು ಉತ್ಪಾದನೆಗಾಗಿ ಮೀಸಲಿಡಲಾಗಿದೆ. ದೇಶದ ಜಿ.ಡಿ.ಪಿ ಯಲ್ಲಿ ಕೃಷಿಯಿಂದಲೇ ಶೇ.3.4 ರಷ್ಟು ಆದಾಯವಿರುತ್ತದೆ. ಆದ್ದರಿಂದ ಕೃಷಿಗೆ ಮೊದಲ ಆದ್ಯತೆ ನೀಡಿ ರೈತರ ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಅನೇಕ ಪ್ರಗತಿಪರ ರೈತರಿದ್ದಾರೆ. ಸಾವಯವ ಕೃಷಿಕರಿದ್ದಾರೆ. ಅವರಿಂದ ಸ್ಫೂರ್ತಿ, ಸಲಹೆಗಳನ್ನು ಪಡೆದು ಇನ್ನುಳಿದ ರೈತರು ತಮ್ಮ ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು. ರೈತರೇ ರೈತರನ್ನು ಉಳಿಸಲು, ಬೆಳೆಸಲು ಸಾಧ್ಯ ಎಂದು ಅವರು ಹೇಳಿದರು.
 ಕಲ್ಯಾಣ ಕರ್ನಾಟಕವನ್ನು ಈ ಮೊದಲು ಹೈದ್ರಾಬಾದ್ ಕರ್ನಾಟಕವೆಂದು ಕರೆಯಲಾಗುತ್ತಿತ್ತು. ಅಂದಿನ ನಿಜಾಮ ಮೀರ್ ಉಸ್ಮಾನ್ ಅಲಿಯವರ ಹಿಡಿತದಲ್ಲಿದ್ದ ಈ ಪ್ರದೇಶವನ್ನು ಬೀದರ್‌ನ ರಾಮಚಂದ್ರಪ್ಪ ವೀರಪ್ಪನವರ ನೇತೃತ್ವದಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟ ಮಾಡಿ, ನಮ್ಮ ಜಿಲ್ಲೆಯ ಶಿವಮೂರ್ತಿ ಸ್ವಾಮಿ ಅಳವಂಡಿಯವರು, ಪುಂಡಲೀಕಪ್ಪ ಜ್ಞಾನಮೋಠೆಯವರು, ವೀರಭದ್ರಪ್ಪ ಶಿರೂರು ರವರು ಮುಂತಾದವರ ಹೋರಾಟದಿಂದ ಸೆಪ್ಟೆಂಬರ್.17, 1948 ರಂದು ಹೈದ್ರಾಬಾದ್ ಕನಾಟಕ ವಿಮೋಚನೆ ಹೊಂದಿ ಸ್ವತಂತ್ರವಾಯಿತು. 2019 ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಪ್ರದೇಶವೆಂದು ಮರುನಾಮಕರಣ ಮಾಡಿದರು. ಪ್ರಸಕ್ತ ವರ್ಷ ಈ ದಿನವನ್ನು ಕಲ್ಯಾಣ ಕನಾಟಕ ಉತ್ಸವ ದಿನವನ್ನಾಗಿ ಆಚರಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಅವರು ಹೇಳಿದರು.
 ಈ ಸಂದರ್ಭ ಕೃಷಿ ಇಲಾಖೆಯ ಆರೋಗ್ಯ ಸಿರಿಗಾಗಿ ಸಿರಿಧಾನ್ಯಗಳು ಎಂಬ ಭಿತ್ತಿಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು. ನಂತರ ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಉತ್ಸವ-2020 ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೋಷಣ್ ಮಾಸಾಚರಣೆ ಅಂಗವಾಗಿ ನಮ್ಮ ಸಂಕಲ್ಪ ಪೌಷ್ಠಿಕ ಕರ್ನಾಟಕ ಎಂಬ ಶೀರ್ಷಿಕೆಯಡಿ ಮ್ಕಕಳಿಗೆ ಪೌಷ್ಠಿಕ ಆಹಾರದ ಮಹತ್ವ ಬಿಂಬಿಸುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು.
 ಇದಕ್ಕೂ ಮೊದಲು ಪೊಲೀಸ್ ಇಲಾಖೆ, ಸಶಸ್ತç ಮೀಸಲುದಳ, ಅರಣ್ಯ ಇಲಾಖೆ, ಗೃಹ ರಕ್ಷಕದಳ, ಭಾರತ ಸೇವಾದಳ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ಭಾಗ್ಯನಗರದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡಗಳಿAದ ಪಥಸಂಚಲನ ನಡೆಸಿ, ಸಚಿವರಿಗೆ ಗೌರವ ವಂದನೆ ಸಲ್ಲಿಸಲಾಯಿತು.
 ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ಸಿ.ವಿ.ಜಡಿಯವರ ನಿರೂಪಿಸಿದರು. ಸಂಗೀತ ಶಿಕ್ಷಕರಾದ ಸದಾಶಿವ ಪಾಟೀಲ್ ಅವರ ತಂಡ ನಾಡಗೀತೆ ಹಾಗೂ ರೈತಗೀತೆಯನ್ನು ಪ್ರಸ್ತುತ ಪಡಿಸಿದರು.
 ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್.ವಿಶ್ವನಾಥ ರೆಡ್ಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ.ಸಿ.ಇ.ಒ ರಘುನಂದನ್ ಮೂರ್ತಿ, ಪೊಲೀಸ್ ಅಧೀಕ್ಷಕಿ ಜಿ.ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್. ಪಾಟೀಲ್, ಸೇರಿದಂತೆ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Please follow and like us:
error