ಕರೋನಾಗೆ ಸಂಗೀತ ಧೃವತಾರೆ ಪಂಡಿತ ಗೋವಿಂದರಾಜ ಬೊಮ್ಮಲಾಪುರ ಬಲಿ

ಗಂಗಾವತಿ : ಕೊರೊನಾ ಮಹಾಮಾರಿ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ. ೦೨೦ ಅಕ್ಷರಶಹ ಘನಘೋರ ವರ್ಷವಾಗಿಬಿಟ್ಟಿದೆ. ಬದುಕು ಕಟ್ಟಿಕೊಳ್ಳುತ್ತಿದ್ದ ಹಾಗೂ ಬದುಕು ಕಟ್ಟಿಕೊಳ್ಳಲು ಅನೇಕ ಆಶಯಗಳ ಕಾರ್ಯರೂಪುರೇಷಗಳನ್ನು ರೂಪಿಸಿಕೊಳ್ಳುತ್ತಿದ್ದ, ಅದೆಷ್ಟೋ ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದ ಕರೋನಾಗೆ ಸಂಗೀತ ಧೃವತಾರೆ ಪಂಡಿತ ಗೋವಿಂದರಾಜ ಬೊಮ್ಮಲಾಪುರ ಬಲಿಯಾಗಿದ್ದಾರೆ.
ನೂರಾರು ವಿದ್ಯಾರ್ಥಿಗಳ ಪಾಲಿನ ದಾರಿದೀಪವಾಗಿ ಉನ್ನತ ಸಂಗೀತ ಮಾರ್ಗದರ್ಶನ ಮಾಡುವ ಈ ಭಾಗದ ಅತ್ಯಂತ ಬೆರಳಣಿಕೆಯ ಸಂಗೀತಗಾರರಲ್ಲಿ ಪಂಡಿತ ಗೋವಿಂದರಾಜ ಬೊಮ್ಮಲಾಪುರರು ಮೇರು ವ್ಯಕ್ತಿಯಾಗಿದ್ದರು. ಸರಳ ವ್ಯಕ್ತಿತ್ವ ಆಡಂಬರವಿಲ್ಲದ ಜೀವನ ೭೦ರ ಇಳಿವಯಸ್ಸಿನಲ್ಲೂ ಕುಂದದ ಉತ್ಸಾಹ ಇನ್ನೂ ಚಿರಯುವಕನಂತೆ ಎಲ್ಲರದಲ್ಲೂ ಮುನ್ನುಗ್ಗುತ್ತಿದ್ದ ಇವರನ್ನು ಕಂಡ ವಿಧಿಗೆ ಸಹಿಸಲಾರದಷ್ಟು ಅಸೂಯೆಯಾಗಿರಬೇಕು ಎನಿಸುತ್ತದೆ.
ಬಾಲ್ಯಜೀವನ: ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಶಿಷ್ಯರನ್ನು ತಯಾರಿಸಿದ ಬೊಮ್ಮಲಾಪುರರು ಹುಟ್ಟಿದ್ದು ೦೧-೦೬-೧೯೫೫ರಲ್ಲಿ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲ್ಲೂಕಿನ ಬೊಮ್ಮಲಾಪುರದಲ್ಲಿ ತಂದೆ ನಾರಾಯಣಪ್ಪ ತಾಯಿ ಹನುಮಂತಮ್ಮರವರ ಮಗನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಪಡೆದು ಗದುಗಿನ ವಿರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಕಲಿಯಲು ಪ್ರವೇಶ ಪಡೆದರು. ಆಗಿನ ಕಾಲದಲ್ಲಿ ಸಂಗೀತ ಕಲಿಯಲು ಈಗಿರುವಷ್ಟು ಅನುಕೂಲತೆಗಳು ಇರಲಿಲ್ಲ ಕಷ್ಟಕರವಾದ ಅಭ್ಯಾಸ ಶಿಸ್ತಿನ ಸಿಪಾಯಿಗಳಂಥಹ ಶಿಕ್ಷಕರು ಬೆಳಗಿನ ಜಾವ ೪ ಗಂಟೆಗೆ ಎದ್ದು ಅಭ್ಯಾಸ ಮಾಡಿಸುವ ಪದ್ಧತಿಗಳು. ಇವೆಲ್ಲಾ ಬೊಮ್ಮಲಾಪುರರಿಗೆ ಒಂದು ಶಿಸ್ತಿನ ಕಠಿಣ ಪರಿಶ್ರಮದ ಅರಿವನ್ನು ಮೂಡಿಸಿದವು.
ಸಂಗೀತ ಶಿಕ್ಷಣ: ಕಣ್ಣಿಲ್ಲದಿದ್ದರೂ ನಾಡಿನ ಅನೇಕ ಅಂಧ-ಅನಾಥರ ಪಾಲಿಗೆ ನಂದಾದೀಪವಾಗಿ ಬಾಳು ಬೆಳಗಿದ ಪೂಜ್ಯ ಪುಟ್ಟಯ್ಯಜ್ಜನವರು ಗೋವಿಂದರಾಜರಿಗೂ ಬೆಳಕಾದರು. ಗೋವಿಂದರಾಜರಿಗೆ ಏಕಾಗ್ರತೆ ತುಂಬಿತುಳುಕುತ್ತಿತ್ತು ಪೂಜ್ಯರ ಪ್ರೀತಿಪಾತ್ರರಾಗಿ ಪ್ರಿಯ ಶಿಷ್ಯರಾಗಿಯೂ ಬೆಳೆಯತೊಡಗಿದರು. ಮರದ ಎಲೆಮರೆಯ ಕಾಯಿಯಂತೆ ಬೊಮ್ಮಲಾಪುರರು ಪುಟ್ಟಯ್ಯಜ್ಜ ಗರಡಿಯಲ್ಲಿ ಪಳಗಿದ ಅದೆಷ್ಟೋ ಮೇರುಶಿಷ್ಯ ವೃಂದದಲ್ಲಿ ಪಂಡಿತ ವೆಂಕಟೇಶಕುಮಾರ, ಪೋಡಿತ ಕುಮಾರದಾಸರಂತಹ ಅದ್ಭುತ ಶಿಷ್ಯರ ಜೊತೆ ಸಹಪಾಠಿಗಳಾಗಿ ಕಲಿತವರು ಬೊಮ್ಮಲಾಪುರರು. ಒಂದು ವಿಷಯವನ್ನು ತಿಳಿಯಬೇಕೆಂದರೆ ಪಟ್ಟು ಬಿಡದೆ ಅದರ ಸಂಪೂರ್ಣ ಮಾಹಿತಿಯನ್ನು ಮಡೆದುಕೊಳ್ಳುವ ತನಕ ನಿದ್ರಿಸಿದ ಇವರ ವ್ಯಕ್ತಿತ್ವವನ್ನು ಕಂಡ ಪಂಡಿತ ವೆಂಕಟೇಶಕುಮಾರರು ಹಾಗೂ ಪಂಡಿತ ಕುಮಾರದಾಸರು ಬೊಮ್ಮಲಾಪುರರನ್ನು ಪ್ರೀತಿಯಿಂದ ಯೋಗಿ ಎಂದು ಕರೆಯುತ್ತಿದ್ದರು. ಹತ್ತಾರು ವರ್ಷಗಳ ಕಠಿಣ ವಿದ್ಯಾಭ್ಯಾಸ ಪೂಜ್ಯ ಪುಟ್ಟಯ್ಯಜ್ಜನವರ ಸಂಗೀತ ಪಾಠ ಬೊಮ್ಮಲಾಪುರರು ಸಂಗೀತವನ್ನು ಕರಗತ ಮಾಡಿಕೊಳ್ಳುವಲ್ಲಿ ಸಹಕಾರಿಯಾಯಿತು. ಪುಣ್ಯಾಶ್ರಮದ ಆಶ್ರಯದಲ್ಲಿ ಕಲಿತ ಎಷ್ಟೋ ಸಂಗೀತಗಾರರ ಮೇರುಪಟ್ಟಿಯಲ್ಲಿ ಬೊಮ್ಮಲಾಪುರರು ಸೇರುತ್ತಾರೆ.
ಗಾಯನದಲ್ಲಿ ವಿದ್ವತ ಪರಿಕ್ಷೆ ಮುಗಿಸಿದ ಬೊಮ್ಮಲಾಪುರರು ಹಾರ್ಮೋನಿಯಂ ಕೂಡ ವಿಶೇಷವಾಗಿ ನುಡಿಸುತ್ತಿದ್ದು ಉಂಟು. ಅದೇನೋ ಬೊಮ್ಮಲಾಪುರರಿಗೆ ಇನ್ನೂ ಕಲಿಯುವ ಆಸಕ್ತಿ. ಆ ಆಸಕ್ತಿಯೇ ಅವರನ್ನು ಕೊಳಲಿನತ್ತ ಕರೆದುಕೊಂಡು ಬಂದಿತು. ಕೊಳಲ ನಾದಕ್ಕೆ ಮನಸೋತ ಬೊಮ್ಮಲಾಪುರರು ಕೊಳಲು ಕಲಿಯುವ ಮಹಾದಾಸೆಯನ್ನು ಬೆಳಸಿಕೊಂಡರು. ಕಣ್ಣಿಲ್ಲದವರು ಕೊಳಲು ಕಲಿಯುವುದು ಕಠಿಣ ಅದರಲ್ಲೂ ಕೊಳಲು ಕಲಿಸುವವರಂತು ಇನ್ನೂ ವಿರಳ. ಕೊಳಲನ್ನು ಹಿಡಿದುಕೊಳ್ಳಲು ಕಲಿವುಯುದೇ ಒಂದು ಮಹಾಯಾಗ ಅಂತಹ ಕಠಿಣ ವಾದ್ಯವನ್ನು ಸಹ ಹಠಯೋಗಿಯಂತೆ ಹಿಂಬಾಲಿಸಿ ಕೊಳಲು ವಾದವನ್ನು ಕಲಿತು ಪುಟ್ಟಯ್ಯಜ್ಜನವರ ಪ್ರಶಂಸೆಗೆ ಪಾತ್ರರಾಗಿದ್ದು ವಿಶೇಷ. ಹೀಗೆ ಗಾಯನ, ಹಾರ್ಮೋನಿಯಂ ಹಾಗೂ ಕೊಳಲು ಮೂರು ಕ್ಷೇತ್ರದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಪರಿಕ್ಷೆಗಳಲ್ಲಿ ರಾಜ್ಯಕ್ಕೆ ರ್‍ಯಾಂಕಿಂಗ್ ಪಡೆದರು.
ವೃತ್ತಿ ಜೀವನ: ಪೂಜ್ಯರ ಅಪ್ಪಣೆಯ ಮೇರೆಗೆ ಗಂಗಾವತಿಯ ಕೊಟ್ಟುರೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ನಂತರ ಹೈಸ್ಕೂಲ್ ಶಿಕ್ಷಕರಾಗಿ ನೇಮಕಗೊಂಡು ಗುಲ್ಬರ್ಗಾದಲ್ಲಿ ತಮ್ಮ ಸಂಗೀತ ಸೇವೆಯನ್ನು ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೆಂಭಾವಿಗೆ ವರ್ಗಾವಣೆಗೊಂಡು ಅಲ್ಲಿಯೂ ೧೩ ವರ್ಷಗಳ ಕಾಲ ಸೇವೆ ಸಲ್ಲಿಸಿ ಗುಲ್ಬರ್ಗಾದಲ್ಲಿ ಹೆಸರುವಾಸಿಯಾದರು. ತದನಂತರ ಗಂಗಾವತಿಯ ಹುಲಿಹೈದರಗೆ ವರ್ಗಾವಣೆಗೊಂಡು ೩ ವರ್ಷಗಳ ಸೇವೆ ಸಲ್ಲಿಸಿದರು. ಬೊಮ್ಮಲಾಪುರರಿಗೆ ಅದೇನೋ ನಂಟಿತ್ತು ಎನಿಸುತ್ತದೆ ಅದಕ್ಕೆ ಗಂಗಾವತಿಗೆ ವರ್ಗಾವಣೆಯಾದ ಬೊಮ್ಮಲಾಪುರರು ಎಮ್.ಎನ್.ಎಮ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಅಲ್ಲಿಯೇ ನಿವೃತ್ತಗೊಂಡು ಗಂಗಾವತಿಯಲ್ಲಿ ನೆಲೆಯೂರಿದರು.
ಸ್ವಾಭಿಮಾನದ ಬಲಿಷ್ಠ ರೆಕ್ಕೆ ಪುಕ್ಕಗಳನ್ನು ಹೊಂದಿದ್ದ ಬೊಮ್ಮಲಾಪುರರು ಎಂದೂ ಕೀರ್ತಿ ಪ್ರತಿಷ್ಠೆಯನ್ನು ಬೆನ್ನತ್ತಿ ಹೋದವರಲ್ಲ ತಾವು ಕಾರ್ಯಕ್ರಮಗಳನ್ನು ನೀಡಲು ಹಪಹಪಿಸಿದವರೂ ಅಲ್ಲ. ಬದಲಾಗಿ ಶಿಷ್ಯರನ್ನು ತಯಾರಿಸಿ ನಾಡಿಗೆ ಸಂಗೀತ ಕ್ಷೇತ್ರಕ್ಕೆ ಮುಂದಿನ ಪೀಳಿಗೆಗೆ ಸಂಗೀತ ದೊರಕಿಸಿಕೊಡಬೇಕೆಂಬ ಮಹಾದಾಸೆಯ ಮಹತ್ವಾಕಾಂಕ್ಷಿಯಾಗಿದ್ದರು.
ಅವರ ಮಹಾತ್ವಾಕಾಂಕ್ಷೆಯ ಹೆಮ್ಮರದ ಫಲವಾಗಿಯೇ ಅದೆಷ್ಟೋ ಜನ ಸಂಗೀತಗಾರರೂ ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿದರ್ಶನವಾಗಿ ರಾಜ್ಯ ರಾಷ್ಟ್ರ ಮಟ್ಟದ ಕಲಾವಿದ ನಾಗರಾಜ ಶ್ಯಾವಿ ಬಾನ್ಸುರಿ ವಾದನದಲ್ಲಿ ಬೆಳೆದುನಿಂತಿದ್ದಾರೆ. ಹೀಗೆ ಚಂದ್ರಶೇಖರ ಗೋಗಿ, ರಮೇಶ, ಹಳ್ಳೇರಾವ್ ಹೀಗೆ ಪಟ್ಟೀಯೇ ಆಗುತ್ತದೆ.
ಬೊಮ್ಮಲಾಪುರ ಆಕಾಶವಾಣಿಯ ಬಿ ಗ್ರೇಡ್ ಕಲಾವಿದರಾಗಿ ದೂರದರ್ಶನ ಚಂದನ ಇನ್ನೂ ಅನೇಕ ವಾಹಿನಿಗಳಲ್ಲಿಯೂ ಬಾನ್ಸುರಿ ಕಾರ್ಯಕ್ರಮ ದಿಗ್ಗಜ ಸಂಗೀತಗಾರರಿಗೆ ಹಾರ್ಮೋನಿಯಂ ಸಾಥ ನೀಡಿದ್ದಾರೆ. ಸಂಗೀತ ಕಟ್ಟಿ, ಫಯಾಜ್ ಖಾನ್, ಗಣಪತಿ ಭಟ, ವೆಂಕಟೇಶ ಕುಮಾರ, ಕುಮಾರದಾಸ ಸದಾಶಿವ ಪಾಟೀಲ್‌ವ, ಅಂಬಯ್ಯ ನುಲಿ ಇನ್ನೂ ಅನೇಕ ಹಿರಿಯ ಸಂಗೀತ ಗಾಯಕರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದಾರೆ.

೨೦೧೪ ರಲ್ಲಿ ತಮ್ಮದೇ ಆದ ಶ್ರೀ ಗುರುಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಎಂಬ ಸಂಸ್ಥೆಯನ್ನು ಕಟ್ಟಿ ಅನೇಕ ಕಲಾವಿದರನ್ನು ಕರೆಸಿ ಸನ್ಮಾನಿಸಿ ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದರು. ಬೊಮ್ಮಲಾಪುರರ ಪುತ್ರ ಪಂಚಾಕ್ಷರ ಬೊಮ್ಮಲಾಪುರ ಸ್ವತಃ ಗಾಯಕನಾಗಿ ತಬಲಾ ವಾದಕನಾಗಿ ಇವರಿಗೆ ಸಾಥ ನೀಡುತ್ತಿದ್ದನು. ಈ ಸಂಸ್ಥೆಯ ಕಾರ್ಯದರ್ಶಿ ಹಾಗೂ ತಬಲಾ ವಾದಕ ಸ್ವತಃ ಬೊಮ್ಮಲಾಪುರರ ಅಳಿಯ ರಾಘವೇಂದ್ರ ಗಂಗಾವತಿಯ ಪರಿಶ್ರಮದಿಂದ ಸಂಸ್ಥೆಯು ತಲೆ ಎತ್ತಿ ನಿಂತಿದೆ.

ಪ್ರಶಸ್ತಿ ಪುರಸ್ಕಾರ: ಬರೆದರೆ ಪುಟಗಳೇ ಸಾಲದು ಎನ್ನುವಷ್ಟರ ಮಟ್ಟಿಗೆ ವ್ಯಕ್ತಿತ್ವಹೊಂದಿದ ಬೊಮ್ಮಲಾಪುರರಿಗೆ ನಾಡಿನ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದುಂಟು. ಹಾನಗಲ್ಲ ಕುಮಾರಶ್ರೀ ಪ್ರಶಸ್ತಿ, ನಾದ ಚತುರ, ಕರ್ನಾಟಕ ಕಲಾರತ್ನ, ಸ್ವರ ಸೌರಭ ಸಂಗೀತ ಸಿರಿ, ನಮ್ಮ ಸಾಧಕರು ಹೀಗೆ ಅನೇಕ ಬಿರುದುಗಳು ಇವರ ಮುಡಿಗೇರಿವೆ.
ಹೀಗೆ ನಾಡಿನಾದ್ಯಂತ ಸಂಗೀತ ಪಸರಿಸುವ ಮಹಾತ್ವಾಕಾಂಕ್ಷೆಯ ಬೊಮ್ಮಲಾಪುರರ ಮೇಲೆ ವಿಧಿಯು ತನ್ನ ಅಟ್ಟಹಾಸಗೈದು ಕೋರೋನಾ ಎಂಬ ರಾಕ್ಷಸದ ಮೂಲಕ ದಿನಾಂಕ ೩೧-೦೮-೨೦೨೦ರಂದು ತನ್ನೊಡನೆ ಸೆಳೆದುಕೊಂಡುಬಿಟ್ಟಿದೆ.
ಅಪಾರ ಬಂಧು ಬಳಗವನ್ನು ಅನೇಕ ಶಿಷ್ಯ ವೃದವನ್ನು ಅಗಲಿದ ಬೊಮ್ಮಲಾಪುರರ ನೆನಪು ಮಾತ್ರ ಅವಿಸ್ಮರಣೀಯ ಇಂತಹ ಮಹಾ ಚೇತನವನ್ನು ಕಳೆದುಕೊಂಡ ಕೊಪ್ಪಳದ ಸಂಗೀತ ಕ್ಷೇತ್ರ ಮಂಕಾಗಿದೆ. ನಾಡಿನ ಗಾಯಕ ಸದಾಶಿವ ಪಾಟೀಲ್, ಮಾರುತಿ ದೊಡ್ಡಮನಿ, ರಾಮಚಂದ್ರಪ್ಪ ಉಪ್ಪಾರ, ಡಿ.ವೈ.ಎಸ್.ಪಿ ರುದ್ರೇಶ ಉಜ್ಜನಕೊಪ್ಪ ಇನ್ನೂ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದಾರೆ.

 

Please follow and like us:
error