ಕರವೇ ಪ್ರವೀಣಕುಮಾರ ಶೆಟ್ಟಿ ಬಣ ಸಂಘಟನೆ ಪ್ರತಿಭಟನೆ

ಗಂಗಾವತಿ;   ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಆದೇಶ ಹೊರಡಿಸಿ ಐವತ್ತು ಕೋಟಿ ಹಣವನ್ನು ಮೀಸಲಿಟ್ಟಿರುವುದು ಇಡೀ ನಾಡಿನ ಕನ್ನಡಿಗರಿಗೆ ಮಾಡಿರುವ ವಂಚನೆ ಹಾಗೂ ಅವಮಾನವಾಗಿದೆ ಎಂದು ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಕೊಪ್ಪಳ ಜಿಲ್ಲಾಧ್ಯಕ್ಷ  ಪಂಪಣ್ಣ ನಾಯಕ   ಕಿಡಿಕಾರಿದರು.
ಕರ್ನಾಟಕದಾಧ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಯಾವುದೇ ಬಂದ್‌ಗೆ ಬೆಂಬಲ ನೀಡದೆ, ವಿನೂತನವಾಗಿ ಯೋಗಭಂಗಿಯಲ್ಲಿ ಪ್ರತಿಭಟನೆ ನಡೆಸಿ, ಭೂತ ದಹನ ಮಾಡುವ ಮೂಲಕ ಮಾತನಾಡುತ್ತಿದ್ದರು. ಬೆಳಗಾವಿಯಲ್ಲಿ ಎಂ.ಇ.ಎಸ್ ಸಂಘಟನೆಯನ್ನು ಕಟ್ಟಿಕೊಂಡು ಸದಾ ಒಂದಿಲ್ಲೊಂದು ತಂಟೆ ವ ತಕರಾರು ಮಾಡುತ್ತಾ ಪ್ರತಿ ಕನ್ನಡ ನಾಡಿನ ಅಭಿವೃದ್ಧಿ ಕೆಲಸಗಳಿಗೂ ಅಡ್ಡಗಾಲು ಹಾಕುತ್ತಾ, ಕನ್ನಡ ವಿರೋಧಿತನವನ್ನೇ ಮೈಗೂಡಿಸಿಕೊಂಡು ಇಡೀ ನಾಡೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಗಡಿ ನಾಡಲ್ಲಿ ಅದೇ ನವೆಂಬರ್ ಒಂದನೇ ತಾರೀಖು ಕರಾಳ ದಿನ ಎಂದು ಕಪ್ಪು ಪಟ್ಟಿ ಧರಿಸಿ ಕನ್ನಡ ನಾಡಿನ ಜನರ ಭಾವನೆಗಳನ್ನು ಕೆರಳಿಸುತ್ತ ವಿಧಾನಸಭೆಯಲ್ಲಿ ನಮ್ಮ ಕರ್ನಾಟಕ ಸರ್ಕಾರದ ಶವ ಯಾತ್ರೆ ಮಾಡುತ್ತ ನಮ್ಮದೇ ನಾಡಿನಲ್ಲಿ ನಮ್ಮದೆ ಹೆಮ್ಮೆಯ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅಡ್ಡಿಪಡಿಸಿದ ಮರಾಠಿಗರಿಗೆ ಕರ್ನಾಟಕ ರಾಜ್ಯ ಸರ್ಕಾರ ಪ್ರಾಧಿಕಾರ ಸ್ಥಾಪಿಸಿ ಎಂತಹ ಸಂದೇಶ ನೀಡಲು ಹೊರಟಿದೆ, ಸರ್ಕಾರದ ಈ ನಿಲುವು ಪರೋಕ್ಷವಾಗಿ ಎಂ.ಇ.ಎಸ್. ಪುಂಡರಿಗೆ ಬೆಂಬಲ ನೀಡಿದಂತಲ್ಲವೇ? ನಾಡ ವಿಭಜಿಸುವ ಬಗ್ಗೆ ಮಾತನ್ನಾಡುವ ನಾಡದ್ರೋಹಿಗಳಿಗೆ ನಮ್ಮ ಸರ್ಕಾರದ ಸಹಕಾರದಿಂದ ಬಲ ಬಂದಂತಾಗುವುದಿಲ್ಲವೇ? ಯಾವ ಪುರುಷಾರ್ಥಕ್ಕಾಗಿ ಈಗ ಮರಾಠ ಪ್ರಾಧಿಕಾರ ಸ್ಥಾಪಿಸಬೇಕಿದೆ, ಸರ್ಕಾರ ಸ್ಪಷ್ಟನೆ ನೀಡಬೇಕಿದೆ. ಆದರೆ ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ ಐದು ಕೋಟಿ, ಆದರೆ ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಐವತ್ತು ಕೋಟಿ ಏಕೆ? ನಮ್ಮ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಲಹೆಗಳನ್ನು ಎಷ್ಟು ಅನುಷ್ಠಾನಗೊಳಿಸಿದೆ? ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ!!! ಪ್ರವಾಹ ಪೀಡಿತರಿಗೆ ಎಷ್ಟು ಹಣ ಬಿಡುಗಡೆಗೊಳಿಸಿದೆ? ಆದರೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಮ್ಮ ಕರ್ನಾಟಕದ ಬೆಳಗಾವಿ, ಕಾರವಾರ್, ಬೀದರ್ ಜಿಲ್ಲೆಯ ೮೧೬ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಉದ್ಧಟನದ ಹೇಳಿಕೆ ನೀಡಿರುತ್ತಾರೆ. ಇದನ್ನು ನಮ್ಮ ಕರವೇ ತೀವ್ರವಾಗಿ ಖಂಡಿಸುತ್ತದೆ. ಈ ಎಲ್ಲಾ ಪ್ರಶ್ನೆಗಳು ನೈಜ ಕನ್ನಡಿಗರನ್ನ ಕಾಡುತ್ತಿವೆ. ಆದ್ದರಿಂದ ಈ ಕೂಡಲೇ ನಾಡಿನ ಸಮಸ್ತ ಜನರ ಅನುಮಾನಗಳನ್ನು ಬಗೆಹರಿಸಿ ಕೂಡಲೇ ನಾಡಿನ ಹಿತಕ್ಕೆ ಧಕ್ಕೆ ತರುವ ಸರ್ಕಾರದ ಈ ಆದೇಶವನ್ನು ಹಿಂಪಡೆದುಕೊಳ್ಳಬೇಕೆಂದು ಹಾಗೂ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಇದುವರೆಗೂ ಯಾವುದೇ ಸರ್ಕಾರಗಳು ಕಲ್ಯಾಣ ಕರ್ನಾಟಕ ಭಾಗವನ್ನು ತೀವ್ರವಾಗಿ ನಿರ್ಲಕ್ಷಿಸುತ್ತಾ ಬಂದಿವೆ. ಅದರಲ್ಲಿಯೂ ಕೊಪ್ಪಳ ಜಿಲ್ಲೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರ ಹಿಂದುಳಿದ ಜಿಲ್ಲೆಯಾಗಿದೆ. ಇಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಬಜೆಟ್‌ನ ಅನಿವಾರ್ಯತೆ ಇದೆ. ತುಂಗಭದ್ರಾ ನದಿ ಹೂಳೆತ್ತುವುದು. ರೈತರಿಗೆ ಭತ್ತದ ಬೆಲೆಗೆ ಬೆಂಬಲ ಬೆಲೆ ಘೋಷಿಸುವುದು. ನವಲಿ ಸಮಾನಾಂತರ ಜಲಾಶಯ ಯೋಜನೆ. ಯುವಕರ ನಿರುದ್ಯೋಗದ ಸಮಸ್ಯೆ, ಸ್ಥಳೀಯ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಅನ್ಯಾಯ. ಕನ್ನಡ ಶಾಲೆಯ ಅಭಿವೃದ್ಧಿಯಲ್ಲಿ ಕುಂಠಿತ. ನಾಡಿನ ಐತಿಹಾಸಿಕ ಸ್ಮಾರಕಗಳ ರಕ್ಷಣೆಯಲ್ಲಿ ಬೇಜವಾಬ್ದಾರಿತನ. ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಸರ್ಕಾರದ ಸೌಲಭ್ಯಗಳು ತ್ವರಿತಗತಿಯಲ್ಲಿ ಸಿಗದಿರುವುದು. ಕೊರೋನಾ ವಾರಿಯರ್‍ಸ್‌ಗಳಿಗೆ ರಕ್ಷಣೆ ನೀಡುವುದು ಹಾಗೂ ಪರಿಹಾರಕ್ಕೆ ವಿಶೇಷ ಅನುದಾನ ಮೀಸಲಿರಿಸುವುದು. ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗವನ್ನು ಪ್ರವಾಸಿ ತಾಣವನ್ನಾಗಿ ಮಾಡುವುದು. ಮೇಲಿನ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೂಡಲೇ ಬಗೆಹರಿಸಲು ಕ್ರಮ ಕೈಗೊಳಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು  ರಾಜ್ಯಪಾಲರಿಗೆ ಕೊಪ್ಪಳದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಹಾಗೂ ಗಂಗಾವತಿಯಲ್ಲಿ ತಹಶೀಲ್ದಾರರ ಮುಖಾಂತರ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರುಗಳಾದ ಖಾಜಾವಲಿ, ಶಂಕರ ಪೂಜಾರಿ, ಹನುಮಂತಪ್ಪ ಎಸ್., ಶರಣಪ್ಪ ಪಲ್ಲವಿ, ಶರಣಪ್ಪ ಏಳುಗುಡ್ಡ, ಬೀರಪ್ಪ ಬಂಡಿ, ಅಂಜಿ ಪೂಜಾರಿ, ಹಸೇನಸಾಬ್ ಮುದುಗಲ್ ಸೇರಿದಂತೆ ಇನ್ನಿತರ ನೂರಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error