ಕಮ್ಯುನಿಸ್ಟರು ಅಂಬೇಡ್ಕರ್‌ರನ್ನು ಒಪ್ಪದೆ ತಪ್ಪೆಸೆಗಿದರು: ದಿನೇಶ್ ಅಮೀನ್‌ ಮಟ್ಟು

ಮಂಗಳೂರು, ಆ.10: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಒಪ್ಪದೆ ಕಮ್ಯುನಿಸ್ಟರು ತಪ್ಪೆಸೆಗಿದರು ಎಂದು ನನಗೆ ಅನಿಸುತ್ತಿದೆ. ಒಂದೋ ಕಮ್ಯುನಿಸ್ಟರಿಗೆ ಅಂಬೇಡ್ಕರ್‌ರಂತಹ ನಾಯಕರು ಸಿಗಬೇಕಿತ್ತು ಅಥವಾ ಅಂಬೇಡ್ಕರ್ ಕಮ್ಯುನಿಷ್ಟರ ನಾಯಕರಾಗಿ ಬೆಳೆಯಬೇಕಿತ್ತು. ಹಾಗೇ ಆಗಿದ್ದರೆ ಕಮ್ಯುನಿಸ್ಟರು ಇಂದಿಗೂ ಭಾರತ ದೇಶವನ್ನು ಆಳುತ್ತಿದ್ದರು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ಸ್ವಾತಂತ್ರ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ಧುರೀಣ ಬಿ.ವಿ. ಕಕ್ಕಿಲ್ಲಾಯರ ಜನ್ಮ ಶತಾಬ್ದಿಯ ಪ್ರಯುಕ್ತ ನಗರದ ಬಲ್ಮಠದ ಸಹೋದಯ ಸಭಾಂಗಣದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಶನಿವಾರ ನಡೆದ ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿ’ಎಂಬ ವಿಷಯದಲ್ಲಿ ಅವರು ಮಾತನಾಡಿದರು.

ಎಡಪಕ್ಷಗಳಲ್ಲಿ ಪ್ರಾಮಾಣಿಕರು, ಸಜ್ಜನರು, ಸರಳ ವ್ಯಕ್ತಿತ್ವವುಳ್ಳವರು, ಅಕ್ಷರಸ್ಥರು, ಬುದ್ಧಿವಂತರು ಇದ್ದಾರೆ. ಎಲ್ಲಿ ಅನ್ಯಾಯ, ದೌರ್ಜನ್ಯ ನಡೆಯುತ್ತದೆಯೋ ಅಲ್ಲಿ ಎಡಪಕ್ಷಗಳ ಧ್ವನಿ ಇದ್ದೇ ಇದೆ. ಆದಾಗ್ಯೂ ದೇಶದ ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ಎಡಪಕ್ಷಗಳ ಬಲ ತುಂಬಾ ಕ್ಷೀಣಿಸುತ್ತಿವೆ. ಇದಕ್ಕೆ ಎಡಪಕ್ಷಗಳು ಕಾಲಕಾಲಕ್ಕೆ ಅಪ್‌ಡೇಟ್ ಆಗದಿರುವುದೇ ಕಾರಣವಾಗಿದೆ. ಈ ಬಗ್ಗೆ ಎಡಪಕ್ಷಗಳ ನಾಯಕರು, ಕಾರ್ಯಕರ್ತರು ಆತ್ಮಾವಲೋಕನ ಮಾಡಬೇಕಿದೆ ಎಂದು ದಿನೇಶ್ ಅಮೀನ್ ಮಟ್ಟು ನುಡಿದರು.

ದೇಶದ ಐಕ್ಯತೆ, ಅಖಂಡತೆಗೆ ಮಾರಕವಾಗಿರುವ ಕೋಮುವಾದವನ್ನು ಎದುರಿಸುವಲ್ಲಿಯೂ ಎಡಪಕ್ಷಗಳು ವಿಫಲವಾಗಿದೆ. ಅಂದರೆ 1990ರಲ್ಲಿ ಜಾಗತೀಕರಣದ ವಿರುದ್ಧ ಪ್ರಬಲ ಹೋರಾಟ ನಡೆಸಿದ್ದ ಎಡಪಕ್ಷಗಳು 1992ರ ಬಾಬರಿ ಮಸೀದಿ ದ್ವಂಸದ ಬಳಿಕ ನಡೆದ ಕೋಮುವಾದವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದ ದಿನೇಶ್ ಅಮೀನ್ ಮಟ್ಟು ಈ ದೇಶದಲ್ಲಿ ಜಾತಿ ಎಂದೂ ನಾಶವಾಗದು, ಯಾಕೆಂದರೆ ಆ ಮಟ್ಟಿಗೆ ಜಾತಿ ಇಲ್ಲಿ ಬೇರೂರಿದೆ. ಕಮ್ಯುನಿಸ್ಟರು ‘ಜಾತಿ’ಯ ವಾಸ್ತವತೆಯನ್ನು ನಿರ್ಲಕ್ಷಿಸಿದರಲ್ಲದೆ ಅದರ ವಿರುದ್ಧ ಧ್ವನಿ ಎತ್ತುವಲ್ಲಿಯೂ ವಿಫಲರಾಗಿದ್ದಾರೆ. ಜಾತಿ ವ್ಯವಸ್ಥೆಯು ಕೇವಲ ಶ್ರಮಿಕರ ವಿಭಜನೆ ಅಲ್ಲ, ಶ್ರಮದ ವಿಭಜನೆಯೂ ಆಗಿದೆ. ಜಾತಿ ವ್ಯವಸ್ಥೆಯನ್ನು ಎದುರಿಸಲು ಕಮ್ಯುನಿಸ್ಟರ ಸಿದ್ಧಾಂತಗಳಲ್ಲಿ ಅಸ್ತ್ರ ಇಲ್ಲ ಎಂದರು.

ಕಳಲೆ ಪಾರ್ಥ ಸಾರಥಿ ಮಾತನಾಡಿ ಕ್ರಾಂತಿಯು ಪ್ರಜಾಸತ್ತಾತ್ಮಕವಾಗಿರಬೇಕು. ಆದರೆ, ಇಂದು ಪ್ರಜಾಪ್ರಭುತ್ವದಲ್ಲಿ ಕೊಲೆಗಾರ, ಲೂಟಿಕೋರರು ಆಯ್ಕೆಯಾಗಿ ಆಳ್ವಿಕೆ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ. ಇದರಿಂದ ಸರ್ವಾಧಿಕಾರ ಆಗಲಿದೆಯೇ ವಿನಃ ಪ್ರಜಾಡಳಿತ ಆಗದು. ಎಡಪಂಥೀಯ ಮಾರ್ಗದಿಂದ ಮಾತ್ರ ಪ್ರಜಾಡಳಿತ ಸಾಧ್ಯ ಎಂದರು.

Please follow and like us:
error