ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧೋರಣೆ ಖಂಡಿಸಿ ಕಲಾವಿದರ ಪ್ರತಿಭಟನೆ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಬಹುತೇಕ ಕಲಾವಿದರು ಇಂದು ಅಶೋಕ ವೃತ್ತದಲ್ಲಿ ಜಮಾಯಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಬ್ಬಗೆಯ ನೀತಿಯನ್ನು ಧೋರಣೆಯನ್ನು ಖಂಡಿಸಿ ತಮಗಾದ ಸಂಕಷ್ಟಗಳನ್ನು ಕುರಿತು ಪರಿಪರಿಯಾಗಿ ಪ್ರತಿಭಟನೆಯಲ್ಲಿ ಜೋರಾಗಿ ಕೂಗುವುದರ ಮೂಲಕ ಇಲಾಖೆಗೆ ಹಿಡೀ ಶಾಪ ಹಾಕಿದರು.
ಕಳೆದ ೯ ತಿಂಗಳನಿಂದಲೂ ಬಾರದ ಮಾಶಾಸನ ದೂರು ಕೊಟ್ಟರೂ ಖ್ಯಾರೆ ಅನ್ನದ ಇಲಾಖೆಯ ನಿರ್ದೇಶಕರು ಅಸಮರ್ಥ ಜಂಟಿ ನಿರ್ದೇಶಕರು ಇದ್ದರೂ ಇಲ್ಲದಂತಹ ಸಹಾಯಕ ನಿರ್ದೇಶಕರ ವರ್ತನೆಗಳನ್ನು ಖಂಡಿಸಿ ಇಂದು ಕಲಾವಿದರ ಜಯಘೋಷಗಳು ಮುಗಿಲು ಮುಟ್ಟಿದ್ದವು.
ಕರೋನಾ ಮಹಾಮಾರಿಯ ಸಮಯದಲ್ಲಿ ಕಾರ್ಯಕ್ರಮಗಳಿಲ್ಲದೇ ಆರ್ಥಿಕ ಮುಗ್ಗಟ್ಟಿನಲ್ಲಿರುವ ಕಲಾವಿದರು ಹಾಗೂ ಸಂಘ ಸಂಸ್ಥೆಗಳು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ವರ್ತನೆಗೆ ರೋಸಿ ಹೋಗಿ ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೂ ಪ್ರತಿಭಟನೆಯನ್ನು ನಡೆಸಿದರು. ಜಿಲ್ಲಾಧಿಕಾರಿಗಳ ಮುಂಭಾಗದಲ್ಲಿ ಪ್ರತಿಭಟನಕಾರರು ಇಲಾಖೆಯಲ್ಲಿರುವ ನಿರ್ಲಕ್ಷ್ಯ ತೋರಿಸುತ್ತಿರುವ ಅಧಿಕಾರಿಗಳ ವಿರುದ್ಧ ಖಂಡನ ಹೇಳಿಕೆಗಳ ಮೂಲಕ ಬೃಹತ್ ಪ್ರತಿಭಟಿಸಿದರು.
ಈ ಪ್ರತಿಭಟನೆಯಲ್ಲಿ ರಾಜ್ಯೋತ್ಸವ ಪುರಸ್ಕೃತರಾದ ಹನುಮಂತಕುಮಾರ ಮದೋಳ, ಜಿ.ವಂದನಾ, ಕಲಾವಿದರಾದ ಲಚ್ಚಣ್ಣ ಕಿನ್ನಾಳ, ಶ್ರೀಮತಿ ಅನ್ನಪೂರ್ಣ ಮನ್ನಾಪೂರ, ವೆಂಕಪ್ಪ ಸಿಳ್ಳಿಕ್ಯಾತರ, ಶಿವಲಿಂಗಪ್ಪ ಗುದ್ದುಮುರಗಿ, ರಂಗಕರ್ಮಿ ಸುಭಾಶ ಹುಲಿಗಿ, ಇಮಾಮಸಾಬ ಹಿರೇಮನ್ನಾಪೂರ, ಪತ್ರಕರ್ತರಾದ ಜಿ.ಎಸ್.ಗೋನಾಳ, ಸಾಂಸ್ಕೃತಿಕ ಸಂಘಟಕ ಮಹೇಶಬಾಬು ಸುವೇ, ಹಿರಿಯ ಕಲಾವಿದರಾದ ಈರಪ್ಪ ಮಾಸ್ತರ ಮುಂಡರಗಿ, ರಾಮಪ್ಪ , ಬಸವರಾಜ ಕರಡಕಲ್, ಬೀರಪ್ಪ ಹುಣಸಿಹಾಳ, ಸಂಗಪ್ಪ ಕುಂಬಾರ, ಹುಚ್ಚಯ್ಯ ಕಲ್ಮಠ, ಶಿವಪುತ್ರಪ್ಪ ಬಡಿಗೇರ, ಕೆ.ಲಿಂಗರಾಜ ಮಾಸ್ತರ, ಕೃಷ್ಣಪ್ಪ ಬಡಿಗೇರ, ಸಣ್ಣ ಹನುಮಪ್ಪ ಕುಣಕೇರಿ, ದೊಡ್ಡ ಯಮನೂರಪ್ಪ ಕುಣಕೇರಿ, ಚಂದ್ರಶೇಖರ ಲಿಂಗದಹಳ್ಳಿ, ಜಾರವ್ವ ಸಿಳ್ಳಿಕ್ಯಾತರ, ನಿಂಗಪ್ಪ ಲೇಬಗೇರಿ ಇನ್ನೂ ಮುಂತಾದ ಜಿಲ್ಲೆಯ ಹಿರಿಯ ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರತಿಭಟನೆಕಾರರ ಅಹವಾಲನ್ನು ಸ್ವೀಕರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಿಲಕಂ ಠಪ್ಪ ಕಂಬಳಿಯವರು ನಿರ್ದೇಶಕರ ಗಮನಕ್ಕೆ ತಂದು ಕಲಾವಿದರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಅಶ್ವಾಸನೆ ನೀಡಿದರು. ನಂತರ ನಿಯೋಗದಲ್ಲಿ ಜಿಲ್ಲಾಧಿಕಾರಿಗಳ ಬಳಿ ತೆರಳಿ ಇಲಾಖೆಗೆ ಖಾಯಂ ಸಹಾಯಕ ನಿರ್ದೇಶಕರನ್ನು ನೇಮಿಸುವಂತೆ ಮನವಿಯನ್ನು ಸಲ್ಲಿಸಲಾಯಿತು.

Please follow and like us:
error