ಕನ್ನಡ ಬೆಳಸದ ಮಾಧ್ಯಮಗಳು-ಪುರುಷೋತ್ತಮ ಬಿಳಿಮಲೆ

ಕರ್ನಾಟಕ ರಾಜ್ಯೋತ್ಸವ ೨೦೨೦
ಕವಿಗಳು ಕಂಡ ಕರ್ನಾಟಕ ೧೯

ಕಳೆದ ಸುಮಾರು ಒಂದು ಸಾವಿರ ವರ್ಷಗಳ ಕಾಲಾವಧಿಯಲ್ಲಿ ರಚಿತವಾದ ಕನ್ನಡವನ್ನು ಓದಿದಾಗ ಆ ಕನ್ನಡವನ್ನು ಬರೆದವರಿಗೆ ಕನ್ನಡ ಭಾಷೆಯ ಬಗ್ಗೆ ಯಾವುದೇ ಆತಂಕಗಳು ಇದ್ದಂತೆ ಭಾಸವಾಗುವುದಿಲ್ಲ. ʼ ಇದು ಪಾತಾಳ ಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾಡಿದ ಕೂಪಂʼ ಎಂದ ಪಂಪನಿಗಾಗಲೀ, ʼ ಮೇಘದ ಮರೆಯ ಹೊಕ್ಕರೆ ರಾಹು ಬಿಡುವನೇ ಉರಿವ ರವಿ ಮಂಡಲವʼ ಎಂದ ಕುಮಾರವ್ಯಾಸನಿಗಾಗಲೀ, ʼಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡʼ ಎಂದ ಬಸವನಿಗಾಗಲೀ ಕನ್ನಡವನ್ನು ಬಳಸುವಾಗ ಯಾವುದೇ ಭಯ ಇರಲಿಲ್ಲ, ಬದಲು ಅವರ ಭಾಷಾ ಬಳಕೆಯಲ್ಲಿ ಅತೀವ ಆತ್ಮವಿಶ್ವಾಸವಿತ್ತು. ಅದು ಕನ್ನಡವನ್ನು ಬೆಳೆಸಿತು.
ಆದರೆ ಈ ಆತ್ಮವಿಶ್ವಾಸ ಕನ್ನಡದ ಮಾಧ್ಯಮಗಳಿಗೆ ಇವತ್ತು ಇಲ್ಲ. ಮಾಧ್ಯಮಗಳು ಹಿಂದೆ ಜನ ಭಾಷೆಯಲ್ಲಿ ಮಾತಾಡುತ್ತಾ, ಜನರನ್ನು ಮುಟ್ಟುವ, ಸಂಘಟಿಸುವ ಮತ್ತು ಅವರನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವ ಕೆಲಸ ಮಾಡಿದ್ದುವು. ವಸಾಹತು ಕಾಲದಲ್ಲಿ ಬ್ರಿಟಿಷರ ವಿರುದ್ಧ ಜನ ಸಂಘಟನೆ ಮಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮತ್ತು ಕರ್ನಾಟಕದ ಏಕೀಕರಣ ಸಾಧ್ಯವಾಗುವಲ್ಲಿ ಕನ್ನಡ ಪತ್ರಿಕಾ ಮಾಧ್ಯಮಗಳ ಕೊಡುಗೆ ಅಪಾರವಾದುದು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ( ೧೮೪೩), ಗಳಗನಾಥರು ಸಂಪಾದಿಸುತ್ತಿದ್ದ ಕನ್ನಡ ಜ್ಞಾನ ಬೋಧಕ ( ೧೮೬೧) ಹಾಗೂ ಬಿ ಎಚ್ ರೈಸ್ ಅವರು ಸಂಪಾದಿಸುತ್ತಿದ್ದ ಅರುಣೋದಯ ( ೧೮೬೨) ಪತ್ರಿಕೆಗಳು ಆಧುನಿಕ ಕನ್ನಡಕ್ಕೆ ಬುನಾದಿ ಹಾಕಿದ ಪ್ರಸಿದ್ಧ ಪತ್ರಿಕೆಗಳು. ಮುಂದೆ ಡೆಪ್ಯುಟಿ ಚೆನ್ನಬಸಪ್ಪ ಅವರ ಬೆಂಬಲದ ಜೀವನ ಶಿಕ್ಷಣ, ಎಂ ವೆಂಕಟಕೃಷ್ಣಯ್ಯನವರ ಹಿತಬೋಧಿನಿ ( ೧೮೮೩), ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ ( ೧೮೯೬), ಡಿ.ವಿ. ಗುಂಡಪ್ಪ ಅವರ ಭಾರತಿ ( ೧೯೦೭) ತಿರುಮಲೆ ತಾತಾಚಾರ್ಯ ಶರ್ಮರ ವಿಶ್ವಕರ್ನಾಟಕ (೧೯೨೫), ಬಿ.ಎನ್. ಗುಪ್ತರ ಪ್ರಜಾಮತ (೧೯೩೧), ರಂಗನಾಥ ದಿವಾಕರರ ಕರ್ಮವೀರ ( ೧೯೨೧). ಆಲೂರು ವೆಂಕಟರಾಯರ ಜಯಕರ್ನಾಟಕ ( ೧೯೨೨), ಕಡೆಂಗೋಡ್ಲು ಶಂಕರ ಭಟ್ಟರ ರಾಷ್ಟ್ರಬಂಧು (೧೯೨೮), ಮೊದಲಾದ ಪತ್ರಿಕೆಗಳು ಕನ್ನಡ ಭಾಷೆಯನ್ನು ೨೦ನೇ ಶತಮಾನದ ಅಗತ್ಯಗಳಿಗನುಗುಣವಾಗಿ ಅತ್ಯಂತ ಜವಾಬ್ದಾರಿಯಿಂದ ಬೆಳೆಸಿದುವು. ದೇಶಾಭಿಮಾನಿ (೧೮೯೮), ತಾಯಿನಾಡು (೧೯೨೬), ಶುಭೋದಯ (೧೯೧೪), ನವಜೀವನ (೧೯೨೯), ಸತ್ಯಾಗ್ರಹ (೧೯೨೧), ಉದಯ ಭಾರತ (೧೯೨೭), ದೇಶಬಂಧು (೧೯೨೬) ಸಂಯುಕ್ತ ಕರ್ನಾಟಕ (೧೯೨೯), ಪ್ರಜಾವಾಣಿ (೧೯೪೮) ಮೊದಲಾದ ಪತ್ರಿಕೆಗಳು ಕನ್ನಡಕ್ಕೆ ಅನೇಕ ಹೊಸ ಪದಗಳನ್ನು ತಂದು ಕೊಟ್ಟವು. ಮುದ್ರಣ ಮಾಧ್ಯಮಗಳು ಇವತ್ತು ಕೂಡಾ ಭಾಷೆಯನ್ನು ಎಚ್ಚರದಿಂದ ಬಳಸುತ್ತಿವೆ.

ಸಮಸ್ಯೆ ಇರುವುದು ಟಿ ವಿ ಗಳು ಬಳಸುವ ಕನ್ನಡದಲ್ಲಿ. ೧೯೯೦ರ ದಶಕದ ಜಾಗತೀಕರಣದ ಆನಂತರ ಕಾಣಿಸಿಕೊಂಡ ಕರ್ನಾಟಕದ ಟಿ ವಿ ಮಾಧ್ಯಮಗಳು ಕನ್ನಡಿಗರನ್ನೇ ಗಮನದಲ್ಲಿರಿಸಿಕೊಂಡು ಬೆಳೆದವಾದರೂ ಅವುಗಳ ನೋಟ ಇದ್ದದ್ದು ಉದ್ಯಮಿಗಳ ಕಡೆಗೆ. ಬಂಡವಾಳಶಾಹಿಗಳು ದೊಡ್ಡ ಮಟ್ಟದಲ್ಲಿ ಇಲೆಕ್ಟ್ರಾನಿಕ್‌ ಮಾಧ್ಯಮಗಳ ಮೇಲೆ ಹಣ ಸುರಿಯಲು ಆರಂಭಿಸಿದಾಗ, ಮಾಧ್ಯಮಗಳು ಅವರ ಮುಂದೆ ಮಂಡಿಯೂರಿ ಕುಳಿತವು. ದೊಗಳೆ ಅಂಗಿ ಮತ್ತು ಜೋಳಿಗೆ ಹಾಕಿಕೊಂಡು, ಲಾಭವೋ ನಷ್ಟವೋ ಯೋಚಿಸದೆ, ನಾಡು ನುಡಿಗೆ ಸೇವೆ ಸಲ್ಲಿಸುತ್ತಿದ್ದ ಪತ್ರಿಕೆಗಳ ಜಾಗದಲ್ಲಿ ಕಾರ್ಪೋರೇಟ್ ಸಂಸ್ಕೃತಿಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆಕ್ರಮಣಕಾರಿಯಾಗಿ ಮಾತಾಡುವ ಟಿ ವಿ ನಿರೂಪಕರು ಕಾಣಿಸಿಕೊಂಡರು. ಕನ್ನಡದ ನಡುವೆ ಬೇಕಾದಷ್ಟು ಇಂಗ್ಲಿಷ್ ಪದಗಳನ್ನೂ ಸೇರಿಸುತ್ತಾ, ನೋಡುವವರ ನಡುವೆ ತಾನು ಮಹಾ ಬುದ್ಧಿವಂತನೆಂದು ಕೃತಕವಾಗಿ ಬಿಂಬಿಸುತ್ತಾ, ಬಗೆ ಬಗೆಯ ಆದೇಶಗಳನ್ನೂ, ನ್ಯಾಯ ತೀರ್ಮಾನಗಳನ್ನೂ ಕೊಡುತ್ತಾ, ಬೆಳೆಯುತ್ತಿರುವ ಮಾಧ್ಯಮಗಳು ನಾಡು ನುಡಿಗಳನ್ನು ಬೆಳಸುವ ತನ್ನ ಜವಾಬ್ದಾರಿಗಳಿಂದ ದೂರ ಸರಿಯುತ್ತಲೇ ಹೋದುವು. ೧೦ ನಿಮಿಷ ಟಿ ವಿ ನೋಡಿದರೆ, ನಿಮಗೆ ಕಣ್ಣಿಗೆ ರಾಚುವ ವಾಹಿನಿಗಳ ಇಂಗ್ಲಿಷ್‌ ಹೆಸರುಗಳು, ಬ್ರೇಕಿಂಗ್ ನ್ಯೂಸ್, ನೇಶನ್ @9, ಟ್ರಂಪ್ ಕಾರ್ಡ್, ಸುಪ್ರಿಂ ಕೋರ್ಟ್, ವೋಟಿಂಗ್, ಸ್ಟಾರ್ಸ್, ಕಟ್, ಬ್ಲಾಸ್ಟ್ ಅಂಡ್ ಟ್ವಿಸ್ಟ್ , ಎಕ್ಸಕ್ಲೂಸಿವ್, ರೆಡ್ ಅಲರ್ಟ್, ಸೆಕ್ಸ್ ಕಹಾನಿ, ಸ್ಟಾರ್ ಪತ್ರಕರ್ತ, ಕಮಿಂಗ್ ಅಪ್, ಫೈಟ್ ಜಲಕ್, ಬಿಗ್ ಸ್ಟೋರಿ, ಏಕ್ಷನ್, ಕನ್ನಡ ಡೈಲಾಗ್ಸ್, ಟೋಪ್ ನ್ಯೂಸ್, ಲಾಂಚ್, ಬ್ಲಾಸ್ಟ್, ಖದರ್, ಪವರ್ ಸೆಂಟರ್, ರೈಟಿಂಗ್ ರಾಕ್ಷಸ, ಬೋಟ್, ಓಪನ್, ಎಂಗೇಜ್‍ಮೆಂಟ್, ಸಮನ್ಸ್, ರಿಪೋರ್ಟ್, ಸ್ಟಾರ್ ಹೋಟೆಲ್, ಕ್ಯೂಟ್ ಜೋಡಿ, ಗ್ರೀನ್ ಸ್ಯಾರಿ, ಮೊದಲಾದ ಪದಗಳು ನೀವು ಕನ್ನಡ ಟಿ ವಿಯೊಂದರ ಮುಂದೆ ಕುಳಿತಿದ್ದೀರಿ ಎಂಬುದನ್ನೇ ಮರೆಸುತ್ತವೆ.ಈ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಅತ್ಯುತ್ತಮ ಪದಗಳು ಇದ್ದಾಗಲೂ ಇವರೆಲ್ಲ ಯಾಕೆ, ಯಾರಿಗಾಗಿ ಈ ಪದಗಳನ್ನು ಬಳಸಿ ಕನ್ನಡವನ್ನು ಹಾಳುಮಾಡುತ್ತಾರೋ ತಿಳಿಯದು. ಇದು ಭಾಷಾ ಮಡಿವಂತಿಕೆಯ ಪ್ರಶ್ನೆಯಲ್ಲ, ಔಚಿತ್ಯದ ಪ್ರಶ್ನೆ ಅಷ್ಟೆ.

ಈ ಬಗೆಯ ಬೇಜವಾಬ್ದಾರೀ ಭಾಷಾ ಬಳಕೆಯ ಪರಿಣಾಮವೆಂದರೆ, ಕನ್ನಡದಂಥ ಭಾಷೆ ನಿಧಾನವಾಗಿ ಪತನಮುಖಿಯಾಗುವುದು. ೧೯೭೧ ಮತ್ತು ೨೦೧೧ರ ನಡುವೆ ಭಾರತೀಯ ಭಾಷೆಗಳಲ್ಲಿಯೇ ಅತಿ ಕಡಿಮೆ ಬೆಳವಣಿಗೆ ತೋರಿಸಿದ್ದು ನಮ್ಮ ಕನ್ನಡ. ಹಿಂದಿ 45% ಬೆಳವಣಿಗೆ ತೋರಿಸಿದರೆ, ಕನ್ನಡ ಕೇವಲ ೩.೭೫% ಏರಿಕೆ ತೋರಿಸಿದೆ. ರಾಜ್ಯೋತ್ಸವ ಸಂದರ್ಭದಲ್ಲಿಯಾದರೂ ಇದು ನಮ್ಮ ಚಿಂತೆಗೆ ಕಾರಣವಾಗಬೇಕು.

Please follow and like us:
error