ಕನ್ನಡಕ್ಕೆ ಡಬ್ ಆಗಿ ಬರಲಿದೆ ‘ದಬಾಂಗ್ 3’

ಡಬ್ಬಿಂಗ್ ಚಿತ್ರಗಳ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಪ್ರಬಲವಾದ ವಿರೋಧಗಳ ಹೊರತಾಗಿಯೂ ಇತ್ತೀಚಿನ ವರ್ಷಗಳಲ್ಲಿ ಕೆಲವು ತಮಿಳು, ತೆಲುಗು ಚಿತ್ರಗಳು ಕನ್ನಡಕ್ಕೆ ಡಬ್ ಆಗಿವೆ. ಅಜಿತ್ ಅಭಿನಯದ ಭಾರೀ ವೆಚ್ಚದ ತಮಿಳು ಚಿತ್ರಗಳಾದ ವಿಶ್ವಾಸಂ, ವಿವೇಗಂ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿದ್ದವು. ಮಲಯಾಳಂನ ‘ಒರು ಅಡರ್ ಲವ್’ ಕೂಡಾ ಕಿರಿಕ್ ಲವ್‌ಸೊ್ಟೀರಿ ಎಂಬ ಹೆಸರಿನಲ್ಲಿ ತೆರೆಕಂಡಿತ್ತು.

ಆದರೆ ನಿರೀಕ್ಷಿತ ಯಶಸ್ಸನ್ನು ಕಾಣುವಲ್ಲಿ ಅವು ವಿಫಲವಾಗಿವೆ. ಇದನ್ನು ಗಮನಿಸಿದಾಗ ಡಬ್ಬಿಂಗ್ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಈವರೆಗೆ ಮಣೆ ಹಾಕಿಲ್ಲವೆಂದೇ ಹೇಳಬಹುದು.

ಆದರೆ ಬಾಲಿವುಡ್‌ನ ಸುಲ್ತಾನ್ ಸಲ್ಮಾನ್‌ಖಾನ್ ಅಭಿನಯದ ಭಾರೀ ವೆಚ್ಚದ ಚಿತ್ರ ದಬಾಂಗ್ ಕನ್ನಡಕ್ಕೆ ಡಬ್ ಆಗುತ್ತಿರುವುದು ಕನ್ನಡ ಚಿತ್ರರಂಗ ದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ.

ಕನ್ನಡದ ದಬಾಂಗ್3ನ ವಿಶೇಷವೇನೆಂದರೆ ಸ್ವತಃ ಸಲ್ಮಾನ್‌ಖಾನ್ ತನ್ನ ಪಾತ್ರಕ್ಕೆ ತಾನೇ ಕಂಠದಾನ ನೀಡುವ ಸಾಧ್ಯತೆಯಿದೆ. ಅಂದಹಾಗೆ ಸಲ್ಮಾನ್‌ಗೆ ತಾನಾಗಿಯೇ ಕನ್ನಡದಲ್ಲಿ ಕಂಠದಾನ ನೀಡುವುದಕ್ಕೆ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ಕಿಚ್ಚ ಸುದೀಪ್ ನೆರವಾಗುತ್ತಿದ್ದಾರೆ.

ದಬಾಂಗ್ ಸರಣಿಯ ಚಿತ್ರಗಳಲ್ಲಿ ಸಲ್ಮಾನ್ ಅವರ ಜನಪ್ರಿಯ ಪಾತ್ರವಾದ ಚುಲ್‌ಬುಲ್ ಪಾಂಡೆಯ ಪಂಚಿಂಗ್ ಡೈಲಾಗ್‌ಗಳು ಕನ್ನಡ ಪ್ರೇಕ್ಷಕರನ್ನು ಮೋಡಿ ಮಾಡಲಿದೆಯೆಂದು ಚಿತ್ರತಂಡ ಭರವಸೆಯಿಟ್ಟುಕೊಂಡಿದೆ.ಕನ್ನಡದಲ್ಲಿ ಡಬ್ ಆಗುತ್ತಿರುವುದು ಮೊದಲ ಬಾಲಿವುಡ್ ಚಿತ್ರವೆಂಬ ಹೆಗ್ಗಳಿಕೆಯನ್ನು ಕೂಡಾ ದಬಾಂಗ್ 3 ಹೊಂದಿದೆ.

Please follow and like us:
error