ಕಡಿಮೆ ಬೆಲೆಗೆ ಮರಳು ಒದಗಿಸಲು ಹೊಸ ನೀತಿ : ಸಚಿವ ಮುರುಗೇಶ ನಿರಾಣಿ

ಕೊಪ್ಪಳ,  : ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಕಡಿಮೆ ಬೆಲೆಗೆ ಮರಳು ಮತ್ತು ಜಲ್ಲಿಕಲ್ಲು ದೊರಕಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಹೊಸ ಗಣಿಕಾರಿಕೆ ನೀತಿಯನ್ನು ಜಾರಿಗೊಳಿಸಲಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ ನಿರಾಣಿ ಹೇಳಿದರು.
ಶನಿವಾರದಂದು (ಫೆ.೨೭) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನೆ ಕಟ್ಟುವ ಕನಸು ಹೊಂದಿರುವ ಪ್ರತಿಯೊಬ್ಬರಿಗೂ ಮರಳು ಮತ್ತು ಜಲ್ಲಿಕಲ್ಲು ಕಡಿಮೆ ಬೆಲೆಗೆ ಸಿಗಬೇಕು. ಈ ದೃಷ್ಟಿಯಿಂದ ರಾಜ್ಯದಲ್ಲಿ ಹೊಸ ಗಣಿ ನೀತಿಯನ್ನು ತರಲಾಗುತ್ತಿದೆ. ಹೊಸ ನೀತಿಯನ್ವಯ ಟ್ರ್ಯಾಕ್ಟರ್, ಎತ್ತಿನ ಬಂಡಿ, ದ್ವಿಚಕ್ರ ವಾಹನಗಳಲ್ಲಿ ಮರಳು ಸಾಗಣೆ ಮಾಡಿದರೆ ಎಫ್‌ಐಆರ್ ದಾಖಲಿಸುವುದಿಲ್ಲ. ಬದಲಿಗೆ ಮರಳು ಸಂಗ್ರಹಿಸಿ ಬೇರೆ ಬೇರೆ ಜಿಲ್ಲೆಗಳಿಗೆ ಸಾಗಾಣಿಕೆ ಮಾಡಿದರೆ ಮಾತ್ರ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲೆಡೆ ಅನಧಿಕೃತವಾಗಿ ಮರಳು ಹಾಗೂ ಜಲ್ಲಿಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರದ ಆದಾಯ ಪೋಲಾಗುತ್ತಿದೆ. ನಿಯಂತ್ರಣ ಮಾಡಿದಷ್ಟೂ ಅನಧಿಕೃತ ಗಣಿಗಾರಿಕೆ ಹೆಚ್ಚಾಗುತ್ತದೆ. ಹಾಗಾಗಿ ಎಲ್ಲಿ ಬೇಕಾದರೂ ಉಚಿತವಾಗಿ ಮರಳು ಪಡೆಯಬಹುದಾದ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸುವವರಿಗೆ ಅನುಕೂಲ ಆಗಲಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವವರಿಗೆ ಇದು ವರದಾನ ಆಗಲಿದೆ ಎಂದರು.
ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವತಿಯಿಂದ ಕಲ್ಲು ಗಣಿಗಾರಿಕೆ ಮಾಡುವ ಕ್ರಷರ್‌ಗಳ ಮಾಲೀಕರಿಗೆ ಕಾರ್ಯಾಗಾರ ಆಯೋಜಿಲಾಗುತ್ತದೆ. ಕಲ್ಲು ಗಣಿಗಾರಿಕೆ ಮಾಡುವ ರೀತಿ, ಗಣಿಗಾರಿಕೆ ಸಮಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಜ್ಞರಿಂದ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಕ್ರಷರ್ ಮಾಲೀಕರಿಗೆ ತರಬೇತಿ ನೀಡಲು ಶೀಘ್ರ ಕಾರ್ಯಾಗಾರ ಆಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಗಂಗಾವತಿ ಭಾಗದಲ್ಲಿ ಕೈಗಳಿಂದ ಕಲ್ಲು ಒಡೆದು ಮಾರಾಟ ಮಾಡುವ ಮೂಲಕ ಜೀವನ ಕಟ್ಟಿಕೊಂಡ ಭೋವಿ ಜನಾಂಗದವರಿಗೆ ಅಧಿಕಾರಿಗಳು ಅನಗತ್ಯವಾಗಿ ಸಮಸ್ಯೆ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ ಅವರಿಗೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಪುರಾತತ್ವ ಇಲಾಖೆಯವರು ಐತಿಹಾಸಿಕ ಶಿಲೆಗಳಿರುವ ಪ್ರದೇಶಗಳಲ್ಲಿ ಗ್ರಾಮಗಳನ್ನು ಉಲ್ಲೇಖಿಸಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಅಲ್ಲಿನ ಕೆಲ ಜನರಿಗೆ ಕಲ್ಲು ಗಣಿಗಾರಿಕೆ ಮಾಡದಂತೆ ಸೂಚಿಸಿದ್ದೇವೆ ಎಂದರು.
ಈ ಕುರಿತು ಮಾತನಾಡಿದ ಸಚಿವರು, ಸಮಸ್ಯೆ ಆಗದ ರೀತಿಯಲ್ಲಿ ಗಣಿಗಾರಿಕೆ ಮಾಡುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿ, ಅಧಿಕಾರಿಗಳು ಕೂಡಾ ಸಣ್ಣ ಸಣ್ಣ ಕೂಲಿಕಾರರಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯ ಕನಕಗಿರಿ ಶಾಸಕರಾದ ಬಸವರಾಜ್ ದಢೇಸೂಗೂರು, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಕೆ.ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮುತ್ತಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error