ಓ ಬಾಲ್ಯವೆ ಮತ್ತೆ ಬರುವಿಯಾ?– ಮೆಹಬೂಬಹುಸೇನ ಕನಕಗಿರಿ

ನನ್ನ ಬಾಲ್ಯ ಜೀವನ ನೆನಸಿಕೊಂಡರೆ ಮೈ ಜುಮ್ಮು‌ಎನ್ನುತ್ತದೆ, ಪಕ್ಕ ಜವಾರಿ ಹುಡುಗ ನಾನು, ನನ್ನ ತಂದೆ ಆಗಿನ ಕಾಲದಲ್ಲಿ ಮುಲ್ಕಿ ಪರೀಕ್ಷೆ ಬರೆದು ಉತ್ತೀರ್ಣರಾದವರು , ಗೆಳೆಯರ ಬಳಗದಲ್ಲಿ ತುಂಬಾ ಜಾಣ ಅಂತ ಕರೆಸಿಕೊಂಡವರು. ವೃತ್ತಿಯಲ್ಲಿಯೂ ಕೂಡ ಈಗಲೂ ನಮ್ಮ ತಂದೆಗೆ ಸಮಾನರು ಯಾರಿಲ್ಲ.
ನಮ್ಮ ತಂದೆ ಶ್ರೀಮಂತ ವ್ಯಕ್ತಿಯಾಗಿದ್ದರೂ ಮನೆಯಲ್ಲಿ ಬಡತನ ಮೆರೆಸಿದವರು.
ಜೀವನವನ್ನು ತುಂಬಾ ಜಾಲಿಯಾಗಿ ಕಳೆದವರು. ಈಗಲೂ ನಮ್ಮ ತಂದೆ ಫಕೀರಸಾಬ( ಫಕೀರಪ್ಪ) ಅಂದರೆ ಗಾರೆ ಕೆಲಸದಲ್ಲಿ ನಂಬರ್ ಒನ್ ಹೆಸರು ಇದೆ, ನೂರಾರು ಯುವಕರ ಬಾಳಿಗೆ ಬೆಳಕು ತೋರಿಸಿದ ಮಹಾನ್ ವ್ಯಕ್ತಿ.
ಒಟ್ಟು ಏಳು ಜನ ಮಕ್ಕಳಲ್ಲಿ ನಾನು ಎರಡನೇಯವನು, ನಮ್ಮಕ್ಕನಿಗೆ ಏಕೆ ಶಿಕ್ಷಣ ಕೊಡಿಸಲಿಲ್ಲ ಎಂಬ ಕೊರಗು ನನಗೆ ಈಗಲೂ ಕಾಡುತ್ತಿದೆ, ಬಹುಶಃ ಆಗ ಆಚರಣೆಯಲ್ಲಿದ್ದ ಸಂಪ್ರದಾಯ ಇರಬೇಕೆಂದು ಭಾವಿಸಿರುವೆ. ತುಂಬಾ ತುಂಟ ಹುಡುಗರು ಎಂದು‌ ಕರೆಸಿಕೊಂಡ ನಾನು ಮತ್ತು ನಮ್ಮಣ್ಣನಿಗೆ
ಉತ್ತಮ‌ ಶಿಕ್ಷಣ ಕೊಡಿಸಲು ಶ್ರಮ‌ಪಟ್ಟರು ನಮ್ಮ‌ ತಂದೆ.
ಆದರೆ ಬಾಲ್ಯದ ಜೀವನ ವಿಚಿತ್ರ ಅಲ್ಲವೆ? ಗೋಲಿ, ಬುಗುರಿ, ಸೀಗರೇಟ್ ಪ್ಯಾಕ್, ಪಿದ್ದಿ ಆಟ, ಈಜುವುದು, ಚಿಣ್ಣಿ ದಾಂಡು, ತೂರ ಬಿಲ್ಲಿ, ರೇಸ್,‌ಕಬಡ್ಡಿ ಇತರೆ ಗ್ರಾಮೀಣ ಕ್ರೀಡಾಕೂಟಗಳನ್ನು ಮೈಗೂಡಿಸಿಕೊಂಡಿದ್ದ ನಮಗೆ ಕಲಿಕೆಗಿಂತ ಆಟಗಳೆ ಜೀವಾಳ ವಾಗಿದ್ದವು. ಓಣಿ ಹುಡುಗರ ಸಹವಾಸ, ಸಿನಿಮಾ ಹುಚ್ಚು ನಮ್ಮ ಓದಿಗೆ ಅಡ್ಡಿಯಾಗಿದ್ದವು. ಆದರೂ ಶಾಲೆಗೆ ಚಕ್ಕರ್ ಹೊಡೆಯುವುದು ನನ್ನ ಜಾಯಮಾನವಾಗಿರಲಿಲ್ಲ.
ಈಗಿನ ನಂದಿ ಟಾಕೀಸ್ ನಡೆಸುವವರೆ ಆಗ ಸೂರಜ್ ಟಾಕೀಸ್ ನಡೆಸುತ್ತಿದ್ದರು, ಹೊಸ ಚಲನ ಚಿತ್ರ ಯಾವುದೇ ಬರಲಿ ನನ್ನ ಹಾಜರಿ ಇರುತ್ತಿತ್ತು, ಬಂಗಾರದ ಮನುಷ್ಯ, ಎಸ್ ಪಿ ಸಾಂಗ್ಲಿಯಾನ, ಆನಂದ, ರಥ ಸಪ್ತಮಿ,‌ಗುರಿ, ಧೃವತಾರೆ, ಇಂದ್ರಜಿತ್, ರೌಡಿ ಎಂಎಲ್‌ಎ, ಎರಡು ನಕ್ಷತ್ರ, ರಾಮಾಚಾರಿ ಹೀಗೆ ಒಂದೆ? ಎರಡೆ? ನೂರಾರು ಚಲನ ಚಿತ್ರ ನೋಡಿದ ಅನುಭವ ನನಗೆ,
ಒಂದು ಸಿನಿಮಾ ಏನೆಂದರೂ ಹತ್ತಾರು ಸಲ ನೋಡಿರುವೆ, ಆರಂಭದಿಂದ ಕೊನೆಯ ವರೆಗೂ ಇಡೀ ಚಿತ್ರದ ಚಿತ್ರಣ ತೆರೆದಿಡುತ್ತಿದ್ದೆ, ಎಸ್ ಪಿ ಸಾಂಗ್ಲಿಯಾನ್ ಬಂಗಾರದ ಮನುಷ್ಯ ಚಿತ್ರದ ದೃಶ್ಯ ಹಾಗೂ ಡೈಲಾಗ್ ಕನಸಿನಲ್ಲಿ ಕೇಳಿದರೂ ತೀರ ಸರಳವಾಗಿ ಹೇಳುತ್ತಿದ್ದೆ.
ಏಳನೇಯ ತರಗತಿ ಓದಿಸಿ ನನ್ನನ್ನು ಸಿವಿಲ್ ಗುತ್ರಿಗೆದಾರ ಮಾಡಬೇಕೆಂಬುದು ನನ್ನ ತಂದೆಯ ಆಸೆಯಾಗಿತ್ತು. ಹೀಗಾಗಿ ನಾನು ೧೯೯೨-೯೩ರಲ್ಲಿ ಏಳನೇಯ ತರಗತಿ ಪಾಸ್ ಆದರೂ ಶಿಕ್ಷಣಕ್ಕೆ ಬ್ರೇಕ್ ಹಾಕಿದರು ನಮ್ಮ ತಂದೆ. ಎಷ್ಟೆ ತುಂಟನಾದರೂ ಓದುವ ಗೀಳು ಕಡಿಮೆ ಇರಲಿಲ್ಲ, ಕಂದೀಲಿನ‌ ಬೆಳಕಿನಲ್ಲಿ ಓದಿ ಪರೀಕ್ಷೆ ಬರೆದ ದಿನಗಳು ನೆನಪಿನಲ್ಲಿ ಉಳಿದಿವೆ.
ಎಂಟನೇಯ ತರಗತಿಯ ಪ್ರವೇಶ ಪಡೆಯದ ಕಾರಣ
ಒಂದು ವರ್ಷ ಗಾರೆ ಕೆಲಸದಲ್ಲಿ ತಂದೆಯ ಸಹಾಯಕನಾಗಿ ಕೆಲಸ ಮಾಡಿದೆ, ಗುತ್ತಿಗೆದಾರ ಹುದ್ದೆಗಿಂತ‌ ಕಡೆಗೆ ಹೆಚ್ಚು ಆಸಕ್ತಿ ಸಹಜ ವಾಗಿದ್ದ ಪರಿಣಾಮ ೧೯೯೪-೯೫ರಲ್ಲಿ ಗೆಳೆಯರ ಸಹಕಾರ ಹಾಗೂ ತಾಯಿ ಆಶೀರ್ವಾದ ಹಾಗೂ ತಂದೆಯ ಸಹಪಾಠಿಗಳ ಮಾರ್ಗದರ್ಶನದಿಂದ ಎಂಟನೇಯ ತರಗತಿಗೆ ಪ್ರವೇಶ ಪಡೆದೆ. ಇದರಿಂದ ಕುಪಿತರಾದ ತಂದೆ ಒಂದು ವರ್ಷದ ವರೆಗೆ ನನ್ನ ಜೊತೆಗೆ ಕೋಪದಿಂದಲೆ ಮಾತನಾಡಿ ದರು. ಪ್ರೌಢಶಾಲೆಯ ಮೆಟ್ಟಿಲು ಹತ್ತಿದ ಮೇಲೆ ಸಿನಿಮಾ ನೋಡುವ ಗೀಳು, ಹುಚ್ವುತನ ಕಡಿಮೆಯಾಗಿತ್ತು. ಪತ್ರಿಕೆ, ಪುಸ್ತಕ ಓದುವ ಹವ್ಯಾಸ ತಾನೆ ಬಂದಿತ್ತು
ಎಂ ಎ ಬಿಇಡಿ ಮುಗಿದು ಸರಕಾರಿ ಉದ್ಯೋಗ ಇಲ್ಲದೆ ಎರಡು ವರ್ಷ ತಂದೆ ದುಡಿದ ಹಣದಲ್ಲಿ ತಿಂದು ಖಾಲಿ‌ ಕುಳಿತಾಗ ಗುತ್ತಿಗೆದಾರ ಏಕೆ ಆಗಲಿಲ್ಲ ಅಂತ
ಯೋಚಿಸಿ ನೂರಾರು ಸಲ ಪಶ್ಚಾತ್ತಾಪ ಪಟ್ಟಿದೆ.
೨೦೦೫ರಲ್ಲಿ ನಾನು ಪತ್ರಿಕೋದ್ಯಮ ಆಯ್ಕೆ ಮಾಡಿಕೊಂಡೆ, ಪೇಪರ್ ಓದುವ ಹವ್ಯಾಸ ನಮ್ಮ ತಂದೆಯಿಂದ ಬಂದಿತ್ತು,
ದಿನಲೂ ತಾಸುಗಟ್ಟಲೆ ಪತ್ರಿಕೆಗಳನ್ನು ಓದುತ್ತಿದ್ದ ತಂದೆಗೆ ಈ ವೃತ್ತಿ ಏನು‌ ಅಂತ ಚೆನ್ನಾಗಿ
ಅರ್ಥ ಮಾಡಿಕೊಂಡಿದ್ದರು,
ಹುಸೇನಸಾಬ ಗುರಿಕಾರ (ಸಾಹಿತಿ ಅಲ್ಲಾಗಿರಿರಾಜ ಅವರ ತಂದೆ) ಅವರ ಹೋಟೆಲ್ ನಲ್ಲಿ ನಮ್ಮ ತಂದೆ ಹಾಗೂ ನಾನು ಪೇಪರ್ ಓದಿದ್ದೇವೆ. ಮದುವೆ ನಂತರ ಪತ್ನಿಯ ಒತ್ತಾಸೆಯಿಂದ ಸಿನಿಮಾ ನೋಡಿದರೂ ಅವು ಯಾವು ಕೂಡ ನೆನಪಿನಲ್ಲಿ ಉಳಿದಿಲ್ಲ, ಸಿನಿಮಾ ನೋಡುವುದಕ್ಕಿಂತ ಟಾಕೀಸ್ ನಲ್ಲಿ ನಿದ್ರೆ ಮಾಡಿರುವೆ.
ಈಗ ಇವೆಲ್ಲ ನೆನಪಾಗಲು ಲಾಕ್ ಡೌನ್ ಕಾರಣವಾಯಿತು.
ಅಭದ್ರವಾಗಿರುವ ನನ್ನ ವೃತ್ತಿಗಳು ( ಎಲ್ ಐಸಿ ಪ್ರತಿನಿಧಿ ಹಾಗೂ ಅರೆ ಕಾಲಿಕ ವರದಿಗಾರ) , ಕಳೆದ ಸಲ ಲಾಕ್ ಡೌನ್ ಮಾಡಿದಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕು, ಬವಣೆ ಬಗ್ಗೆ ಅನೇಕ
ಲೇಖನಗಳನ್ನು ಬರೆದು ಗಮನ ಸೆಳೆದಿದ್ದೆ, ಈ ಸಲವೂ ಅದೇ ಪ್ರಪಂಚ, ತುತ್ತು ಅನ್ನಕ್ಕೆ ವ್ಯಕ್ತಿ ಬದಲಾಯಿಸುತ್ತಿರುವ ವೃತ್ತಿ ನೋಡಿದರೆ ಅಯೋ ಅನ್ನಿಸುತ್ತದೆ,
ಹೊರಗೆ ಬರುವಂತಿಲ್ಲ,ಇದು ಜೀವನ ಉಳಿಸಿಕೊಳ್ಳಲು ಸರಕಾರದ ಸೂಚನೆ ,
ಕೊರೊನಾ ಭಯ ಎಲ್ಲಾರಿಗೂ ಕಾಡುತ್ತಿದೆ, ನನಗೆ ಏನೆ ಧೈರ್ಯ ಇದ್ದರೂ ಭವಿಷ್ಯದ ಯೋಚನೆ ಸ್ಬಲ್ಪ ಮಟ್ಟಿಗೆ ಭಯದಲ್ಲಿರುವಂತೆ .ಮಾಡಿದೆ,‌ ಮನೆಯಲ್ಲಿ ಟೈಪಾಸ್ ಆಗುತ್ತಿಲ್ಲ, ಮಕ್ಕಳ ಜತೆಗೆ ಕಾಲ ಕಳೆಯಬೇಕೆಂದರೆ ಅವರು ಊರಲ್ಲಿ‌ ಇಲ್ಲ, ಅನಿವಾರ್ಯ ಎನ್ನುವಂತೆ ಮನೆಯಲ್ಲಿ ಉಳಿಯಬೇಕಾಗಿದೆ, ಪ್ರೌಢಶಾಲೆಯ ನಂತರ ಚಲನಚಿತ್ರಗಳಿಂದ ದೂರವಿದ್ದ ನನಗೆ ಯೂಟ್ಯೂಬ್ ಆಪ್ತ ಗೆಳೆಯ, ಮೊಬೈಲ್ ನೆಟ್ ಮೂಲಕ ಈಗ ಮತ್ತೆ ಚಲನಚಿತ್ರದ ಕಡೆಗೆ ವಾಲಿರುವೆ, ಹಗಲು, ರಾತ್ರಿ ಎನ್ನದೆ ಕೈಯಲ್ಲಿ ಮೊಬೈಲ್ ಹಿಡಿದುಕೊಳ್ಳುವಂತಾಗಿದೆ, ಕಳೆದ ಮೂರು ದಿನಗಳಿಂದಲೂ ಯುದ್ದಕಾಂಡ,‌ಶಾಂತಿಕ್ರಾಂತಿ, ರಣಧೀರ, ಆನಂದ, ರಥಸಪ್ತಮಿ,‌ ಹೀಗೆ ನೋಡಬೇಕು ಎನ್ನಿಸಿದ ಸಿನಿಮಾ ನೋಡುತ್ತಾ ಕಾಲ‌ ಕಳೆಯುತ್ತಿರುವೆ, ಮಧ್ಯೆ ಮಧ್ಯೆ ಅನನ್ಯ ಭಟ್ ಹಾಡಿರುವ ಹಾಡುಗಳು, ಜೀವನಸಾಬ ಬಿನ್ನಾಳ, ಜನಪದಹಾಡು, ಬೀಚಿ ಹಾಸ್ಯ ಗೋಷ್ಟಿ ಕೇಳುತ್ತಿರುವೆ, ಸಿನಿಮಾ‌ ನೋಡುವ ಹುಚ್ಚು ಬಾಲ್ಯದ ಜೀವನ ಸ್ಮರಿಸಿದೆ, ಖುಷಿ ‌ನೀಡಿದೆ, ಲಾಕ್ ಡೌನ್ ನನಗೆ ಖುಷಿ ತಂದಿದೆ ಅಂತ ಸಂತಸ‌ ನನಗಿಲ್ಲ, ಎಷ್ಟೂ ಬಡ‌ ಜೀವಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ನಾನಾ ವೇಷ ಹಾಕಿಕೊಂಡು ತಿರುಗುತ್ತಿದ್ದಾರೆ, ಗರ್ಭಿಣಿಯರು, ರೋಗಿಗಳ ಪಾಡು ನೆನೆದರೆ ಅಯೋ ಎನ್ನಿಸುತ್ತಿದೆ, ಕೆಲವರಿಗೆ ದುಡಿಮೆ ಇಲ್ಲದಿದ್ದರೆ ಚಿಂತೆ ಇಲ್ಲ
ಬದುಕಿದರೆ ಸಾಕು ಅಂತ ಸಾರ್ಥಕ ಭಾವ ಮೂಡಿದೆ.
ಕೊರೊ‌ನಾ ಭಯ ಬೇಡ, ಎಚ್ಚರಿಕೆ ಇರಲಿ. ಬಾಲ್ಯದ ಸವಿ ನೆನಪುಗಳನ್ನು ಮೆಲಕು ಹಾಕಿಸಿದ ಕ್ರೂರಿ ಕೊರೊನಾಗೆ ಏನೆಂದು ಕರೆಯಲಿ? ಮೊಬೈಲ್ ಹುಚ್ಚು ತನದಲ್ಲಿ ಚಾಳೀಸು ಬಾರದಿದ್ದರೆ ಸಾಕು!

Please follow and like us:
error