ಒಂದೇ ಒಂದು ಗುಂಡು ಹಾರಿಸದೇ ಕಾಶ್ಮೀರ ಏಕೀಕರಣ ಮಾಡಲಾಗಿದೆ-ಗೃಹ ಸಚಿವ ಅಮಿತ್ ಶಾ

ಅಹ್ಮದಾಬಾದ್: ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ ಕಾಯ್ದೆ-2019, ಈ ತಿಂಗಳ 31ರಿಂದ ಜಾರಿಯಾಗಲಿದ್ದು, “ಒಂದೇ ಒಂದು ಗುಂಡು ಹಾರಿಸದೇ ಕಾಶ್ಮೀರ ಏಕೀಕರಣ ಮಾಡಲಾಗಿದೆ” ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

“ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ಭಾಷಣ ಮಾಡುತ್ತಾ, ಕಾಶ್ಮೀರದ ನದಿಗಳಲ್ಲಿ ರಕ್ತ ಹರಿಯುತ್ತಿದೆ; ರಕ್ತದ ಸ್ನಾನ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಒಂದು ಗುಂಡು ಕೂಡಾ ಹಾರಿಸಿಲ್ಲ; ಒಂದು ಜೀವಹಾನಿಯೂ ಆಗಿಲ್ಲ. ಕಾಶ್ಮೀರ ಶಾಂತಿಯುತವಾಗಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ” ಎಂದು ಪ್ರತಿಪಾದಿಸಿದರು.

ತಮ್ಮ ಕ್ಷೇತ್ರದಲ್ಲಿ ಸುಮಾರು 800 ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಯೋಜನೆಗಳನ್ನು ಉದ್ಘಾಟಿಸುವ ಸಲುವಾಗಿ ಆಗಮಿಸಿರುವ ಶಾ, ಸುದ್ದಿಗಾರರೊಂದಿಗೆ ಮಾತನಾಡಿ, “ಎರಡನೇ ಬಾರಿ ಚುನಾಯಿತರಾದ ಸ್ವಲ್ಪ ಸಮಯದಲ್ಲೇ ಮೋದಿಯವರು ಸರ್ದಾರ್ ಪಟೇಲ್ ಅವರ ಕನಸು ನನಸುಗೊಳಿಸಿದ್ದಾರೆ” ಎಂದು ಬಣ್ಣಿಸಿದರು.

“ಸರ್ದಾರ್ ಪಟೇಲ್ ಅವರು ಭಾರತದ 629 ಪ್ರಾಂತ್ಯಗಳ ಏಕೀಕರಣ ಮಾಡಿದರು. ಆದರೆ 370ನೇ ವಿಧಿ ಮತ್ತು 35ಎ ವಿಧಿ ಕಾರಣದಿಂದಾಗಿ ಕಾಶ್ಮೀರ ಸಂಪೂರ್ಣವಾಗಿ ಏಕೀಕರಣವಾಗಿರಲಿಲ್ಲ. ಆದರೆ ಈ ಎರಡು ವಿಧಿಗಳನ್ನು ರದ್ದುಪಡಿಸಿದ ಬಳಿಕ ಕಾಶ್ಮೀರ ಭಾರತದ ಜತೆ ಸಂಪೂರ್ಣವಾಗಿ ಸೇರಿದೆ” ಎಂದು ಹೇಳಿದರು.

Please follow and like us:
error