“ಒಂದು ದೇಶ, ಒಂದು ಚುನಾವಣೆ – ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸಿ, ರಾಜ್ಯಗಳ ಅಸ್ತಿತ್ವವನ್ನು ನಗಣ್ಯಗೊಳಿಸುವ ಸಂಚು- ಟಿ.ಎ.ನಾರಾಯಣಗೌಡ್ರು

“ಒಂದು ದೇಶ, ಒಂದು ಚುನಾವಣೆ”ಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ರಾಜ್ಯಗಳ ಅಸ್ತಿತ್ವವನ್ನು ನಗಣ್ಯಗೊಳಿಸುವ ಸಂಚು. ವಿಧಾನಸಭೆ ಚುನಾವಣೆಗಳ ವಿಷಯವೇ ಬೇರೆ, ಲೋಕಸಭೆ ಚುನಾವಣೆ ವಿಷಯವೇ ಬೇರೆ. ಒಂದೇ ಚುನಾವಣೆ ರಾಜ್ಯಗಳ ಚುನಾವಣಾ ವಿಷಯಗಳನ್ನು ಅಪ್ರಸ್ತುತಗೊಳಿಸುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ್ರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವ ವ್ಯಕ್ತಪಡಿಸಿರುವ ಅವರು

ಯಾವುದೋ ಒಂದು ಪಕ್ಷ ಪಾಕಿಸ್ತಾನದ, ಚೀನಾದ ಗುಮ್ಮ ತೋರಿಸಿ, ರಾಷ್ಟ್ರೀಯತೆಯ ಹೆಸರಿನಲ್ಲಿ ಕೇಂದ್ರದ ಜತೆಗೆ ಒಕ್ಕೂಟ ರಾಜ್ಯಗಳ ಚುನಾವಣೆಯನ್ನೂ ಗೆದ್ದರೆ, ಪ್ರಾದೇಶಿಕ ಮಹತ್ವದ ಚುನಾವಣಾ ವಿಷಯಗಳು ತೆರೆಮರೆಗೆ ಸರಿಯುತ್ತವೆ. ಇದರಿಂದಾಗಿ ರಾಜ್ಯ ಸರ್ಕಾರಗಳು ಇನ್ನಷ್ಟು ದುರ್ಬಲಗೊಂಡು ಒಕ್ಕೂಟ ಸರ್ಕಾರದ ಅಡಿಯಾಳಾಗುತ್ತವೆ. ಇದು ಅಪಾಯಕಾರಿ.

ಎಲ್ಲ ವಿಷಯಗಳಲ್ಲೂ ಏಕತ್ವವನ್ನು ಹೇರುವುದು, ದೇಶದ ಬಹುತ್ವ ಸಂಸ್ಕೃತಿಗೆ ಮಾರಕ.‌ ಇದರಿಂದಾಗಿ ಪ್ರಬಲ ಒಕ್ಕೂಟದ ಆಶಯಗಳು ಮಣ್ಣುಪಾಲಾಗುತ್ತವೆ, ವಿಕೇಂದ್ರೀಕರಣದ ಆದರ್ಶ ಸರ್ವನಾಶವಾಗುತ್ತದೆ. ಅಧಿಕಾರದ ಕೇಂದ್ರೀಕರಣ ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುತ್ತದೆ. ಪ್ರಾದೇಶಿಕ ಅಸ್ಮಿತೆಗಳನ್ನು ನಾಶಪಡಿಸುತ್ತದೆ. ಈ ಎಚ್ಚರ ನಮಗಿರಬೇಕು ಎಂದು ಹೇಳಿದ್ಧಾರೆ.

Please follow and like us:
error