ಒಂದು ದಿನವೂ ರಜೆ ಪಡೆಯದ ಏಮ್ಸ್ ಸ್ವಚ್ಛತಾ ಮೇಲ್ವಿಚಾರಕ ಕೊರೋನಗೆ ಬಲಿ

ಹೊಸದಿಲ್ಲಿ: ಕೊರೋನ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯ ಸ್ವಚ್ಛತಾ ಮೇಲ್ವಿಚಾರಕರೊಬ್ಬರು ಮೃತಪಟ್ಟಿದ್ದಾರೆ. ಕೊರೋನ ವಿರುದ್ಧದ ಹೋರಾಟದಲ್ಲಿ ನಿತ್ಯ ಭಾಗಿಯಾಗುತ್ತಿದ್ದ ಅವರು ಕೊರೋನ ವಾರಿಯರ್ ಎಂದು ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕೊರೋನ ವಿರುದ್ಧದ ಹೋರಾಟದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸುವ ಆಸ್ಪತ್ರೆಯ  ಸಿಬ್ಬಂದಿ, ಸ್ವಚ್ಛತಾ ಕೆಲಸಗಾರರು ಮತ್ತು ವಾರ್ಡ್ ಬಾಯ್ ಗಳ ಜೊತೆ  ಮೃತ ಹೀರಾ ಲಾಲ್ ಪ್ರತಿನಿತ್ಯ ಸಂಪರ್ಕದಲ್ಲಿದ್ದರು ಮತ್ತು ಮಾರ್ಗದರ್ಶನ ನೀಡುತ್ತಿದ್ದರು.

“ಇತ್ತೀಚೆಗಷ್ಟೇ ಅವರ ಆರೋಗ್ಯ ಕೈಕೊಟ್ಟಿತ್ತು. ಮನೆಗೆ ತೆರಳುವಂತೆ ಮತ್ತು ಹೆಚ್ಚಿನ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ದಾಖಲಾಗುವಂತೆ ಅವರಿಗೆ ತಿಳಿಸಲಾಯಿತು. ಆದರೆ ಎರಡು ದಿನಗಳ ಹಿಂದೆ ಅವರ ಆರೋಗ್ಯ ಸ್ಥಿತಿ ಗಂಭೀರವಾಯಿತು. ಕೂಡಲೇ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಯಿತು. ಆಗ ಅವರ ಪರೀಕ್ಷೆ ನಡೆಸಲಾಗಿದ್ದು, ಕೊರೋನ ಇರುವುದು ದೃಢಪಟ್ಟಿತ್ತು” ಎಂದು ಏಮ್ಸ್ ನ ಎಸ್ಸಿ, ಎಸ್ಟಿ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಕುಲದೀಪ್ ಸಿಂಗ್ ಹೇಳುತ್ತಾರೆ.

ಸಂಪೂರ್ಣ ಏಮ್ಸ್ ನ ನೈರ್ಮಲ್ಯದ ಕೆಲಸಗಳನ್ನು ಅವರೊಬ್ಬರೇ ಏಕಾಂಗಿಯಾಗಿ ನಿರ್ವಹಿಸುತ್ತಿದ್ದರು. ಆದರೆ ಅವರಿಗೆ ಯಾವುದೇ ಸುರಕ್ಷತಾ ಸಾಧನಗಳಿರಲಿಲ್ಲ ಎಂದು ವೈದ್ಯರೊಬ್ಬರು ತಿಳಿಸುತ್ತಾರೆ.

“”ಸೋಂಕಿನ ಅಪಾಯ ಹೆಚ್ಚಿರುವ ಕೆಲಸ ಮಾಡುವವರಿಗೆ ಸುರಕ್ಷತಾ ಸಾಧನಗಳು ಅತ್ಯವಶ್ಯಕವಾಗಿದೆ. ನಮ್ಮಲ್ಲಿ ನೂರಾರು ನೈರ್ಮಲ್ಯ ಕಾರ್ಮಿಕರಿದ್ದು, ಅವರೆಲ್ಲರೂ ಅಪಾಯದಲ್ಲಿದ್ದಾರೆ” ಎಂದವರು ಹೇಳುತ್ತಾರೆ.

Please follow and like us:
error