ಐವರು ಮಾನವಹಕ್ಕು ಹೋರಾಟಗಾರರ ಗೃಹಬಂಧನ ನಾಲ್ಕು ವಾರಕ್ಕೆ ವಿಸ್ತರಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ, ಸೆ.28: ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಆ.28 ರಂದು ಬಂಧಿಸಲ್ಪಟ್ಟಿರುವ ಐವರು ಮಾನವಹಕ್ಕು ಹೋರಾಟಗಾರರ ಗೃಹಬಂಧನವನ್ನು ಸುಪ್ರೀಂಕೋರ್ಟ್ ಇನ್ನೂ ನಾಲ್ಕು ವಾರಗಳ ಕಾಲ ವಿಸ್ತರಿಸಿದೆ. ಐವರು ಹೋರಾಟಗಾರರ ಬಂಧನವನ್ನು ವಿಶೇಷ ತನಿಖಾ ತಂಡ(ಸಿಟ್)ದಿಂದ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಗೃಹಬಂಧನದಲ್ಲಿರುವ ಐವರು ಸಾಮಾಜಿಕ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೋರಿ ಇತಿಹಾಸತಜ್ಞೆ ರೊಮಿಲಾ ಥಾಪರ್ ಸಲ್ಲಿಸಿರುವ ಅರ್ಜಿಯನ್ನೂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ತಿರಸ್ಕರಿಸಿದೆ.

ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಮೊದಲು ನಡೆದ ಎಲ್ಗರ್ ಪರಿಷತ್ ಸಭೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಲ್ಲಿ ಐವರು ಹೋರಾಟಗಾರರಾದ ವರವರ ರಾವ್, ಅರುಣ್ ಫೆರೇರಾ, ವೆರ್ನಾನ್ ಗೊನ್ಸಾಲ್ವೆಸ್, ಸುಧಾ ಭಾರದ್ವಾಜ್ ಹಾಗೂ ಗೌತಮ್ ನವ್ಲಾಖಾರನ್ನು ಆ.28 ರಂದು ಪುಣೆ ಪೊಲೀಸರು ಬಂಧಿಸಿದ್ದರು.