ಎಸ್.ಎಲ್.ಭೈರಪ್ಪನವರು ದೊಡ್ಡ ಓದುಗ ವರ್ಗವನ್ನು ಹೊಂದಿದ ಮಹಾನ್ ಲೇಖಕ : ಡಾ.ವಿಠರಾವ್ ಗಾಯಕ್ವಾಡ್


ಕೊಪ್ಪಳ,: ಎಸ್.ಎಲ್.ಭೈರಪ್ಪ ಕನ್ನಡದ ಸಮಕಾಲೀನ ಲೇಖಕರಲ್ಲಿ ಒಬ್ಬರು. ಯಾವ ಪಂಥಕ್ಕೂ ಬದ್ಧರಾಗದೆ, ಪುರಾತನ ಮತ್ತು ಆಧುನಿಕತೆಯ ನಿಜ ನೆಲೆಗಳನ್ನು ತಮ್ಮ ಕಾದಂಬರಿಗಳ ಮೂಲಕ ಓದುಗರಿಗೆ ನೀಡಿದ್ದಾರೆ. ಭಾರತೀಯ ಪಾರಂಪರಿಕ ಪ್ರಜ್ಞೆ ಮತ್ತು ಸಮಕಾಲೀನ ಸಂದರ್ಭದ ಬಗೆಗೆ ಅವರು ಇಟ್ಟುಕೊಂಡಿರುವ ದೃಷ್ಟಿಕೋನ ವಿಶಿಷ್ಟ ಹಾಗೂ ಅನನ್ಯವಾದುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಡಾ.ವಿಠರಾವ್ ಗಾಯಕ್ವಾಡ್ ಹೇಳಿದರು.
ಅವರು ನಗರದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಜಯಶ್ರೀ ಪ್ರಕಾಶನ ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ಡಾ. ವಿ.ಬಿ. ರಡ್ಡೇರ ಅವರ ಪಿಎಚ್.ಡಿ ಪ್ರಬಂಧ ‘ಭೈರಪ್ಪನವರ ಕಾದಂಬರಿಗಳಲ್ಲಿ ಸಂಸ್ಕೃತಿ’ ಎಂಬ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಎಸ್.ಎಲ್.ಭೈರಪ್ಪನವರು ಗಾಂಧೀಜಿ ಮತು ಜಯಪ್ರಕಾಶನಾರಾಯಣರಂತಹ ಮುತ್ಸದ್ಧಿಗಳ ಚಿಂತನೆಗಳನ್ನು ಒಪ್ಪಿಕೊಂಡಿದ್ದಾರೆ. ಯಾವುದೇ ಬಗೆಯ ಆಲೋಚನೆಗಳು ಕೇವಲ ಬಾಹ್ಯ ಪ್ರಭಾವದಿಂದಷ್ಟೇ ರೂಪುಗೊಳ್ಳಬಾರದು. ಅದಕ್ಕೆ ನಮ್ಮ ಪುರಾತನ ಜನಜೀವನದ ಮೌಲ್ಯಗಳು ಮತ್ತು ಸಮಕಾಲೀನ ಸ್ವರೂಪದ ಎಲ್ಲ ಆಗು ಹೋಗುಗಳ ಸಮ್ಮಿಲನವಾಗಬೇಕು ಎಂಬ ಧೋರಣೆ ಅವರ ಸಾಹಿತ್ಯದಲ್ಲಿ ಕಾಣಿಸುತ್ತದೆ. ಭೀಮಕಾಯದಿಂದ ಹಿಡಿದು ಉತ್ತರಕಾಂಡದವರೆಗೆ ೨೫ ಕಾದಂಬರಿಗಳು, ಭಿತ್ತಿ ಎಂಬ ಆತ್ಮಕಥನ ಹಾಗೂ ಸೃಜನೇತರ ಕೃತಿಗಳನ್ನು ಬರೆದಿರುವ ಅವರ ಸಾಹಿತ್ಯ ಬಹು ಚರ್ಚಿತವಾದ ಆಯಾಮಗಳಿಗೆ ಒಳಗಾಗಿದೆ. ಪರಂಪರೆಯ ಮೂಲಕವೇ ನಮ್ಮ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು, ಸಾಮಾಜಿಕ ಸನ್ನಿವೇಶ ನಿರ್ಮಾಣವಾಗದೆ ಯಾವುದೇ ಕಾರ್ಯಗಳು ಗುರಿಮುಟ್ಟುವುದಿಲ್ಲ. ಹುಮ್ಮಸ್ಸು, ಆವೇಶ ಎಷ್ಟೇ ಬಾರಿ ಜೀವನಕ್ಕೆ ಮುಳ್ಳಾಗುತ್ತದೆ ಎಂಬ ಚಿಂತನೆ ಅವರಲ್ಲಿದೆ. ದಾಟು ಕಾದಂಬರಿಯಲ್ಲಿ ದಾಟುವಂತಹ ಸಾಮಾಜಿಕ ಸನ್ನಿವೇಶ ನಿರ್ಮಾಣವಾಗದ್ದರಿಂದ ಮೋಹನದಾಸನ ಹೋರಾಟ ಸಾವಿನಲ್ಲಿ ಪರ್ಯಾವಸನವಾಗುತ್ತದೆ. ಸಂಪ್ರದಾಯಬದ್ಧರಾದ ಶ್ರೀನಿವಾಸಶ್ರೋತ್ರಿಗಳು ವಂಶಮೂಲ ತಿಳಿದಾಗ ತೀರಾ ವಿಚಲಿತರಾಗುವುದು ಸರ್ವರ ಅನುಭವದ ನಿಜನೆಲೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪೌರಾಣಿಕ ಆಯಾಮವನ್ನು ಕಳಚಿ ಬರೆದ ಪರ್ವ ಮತ್ತು ಉತ್ತರಕಾಂಡ ಕಾದಂಬರಿಗಳು ನಮ್ಮ ಎದುರು ಸಾಧಕ ವ್ಯಕ್ತಿಗಳು ನಿರ್ಮಿಸಿದ ಜೀವನ ಮೌಲ್ಯಗಳನ್ನು ಅನಾವರಣಗೊಳಿಸಿವೆ. ಒಟ್ಟಾರೆ ಕನ್ನಡ ಸಾಹಿತ್ಯದಲ್ಲಿ ಡಾ. ಶಿವರಾಮ ಕಾರಂತ, ಅ.ನ.ಕೃಷ್ಠರಾಯ ಅವರ ನಂತರ ಅಪಾರ ಓದುಗ ಲೋಕವನ್ನು ಪ್ರಭಾವಿಸಿದವರೆಂದರೆ ಡಾ. ಎಸ್.ಎಲ್.ಭೈರಪ್ಪನವರು. ಕರ್ನಾಟಕದಲ್ಲಿ ಮಾತ್ರವಲ್ಲ ಭಾರತಾದ್ಯಂತ ಹಾಗೂ ವಿದೇಶಗಳಲ್ಲಿಯೂ ಅವರ ದೊಡ್ಡ ಓದುಗ ವರ್ಗವಿದೆ ಎಂಬುದನ್ನು ಗಮಿಸಿದಾಗ ಎಸ್.ಎಲ್.ಭೈರಪ್ಪನವರ ಜೀವನ ಮೌಲ್ಯಗಳ ಪ್ರತಿಪಾದನೆ ಒಪ್ಪಿತವಾದುದು ಎಂಬುದು ನಮಗೆ ಮನದಾಟ್ಟಾಗುತ್ತದೆ ಎಂದರು.
ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಮಾತನಾಡಿ, ಡಾ. ವಿ.ಬಿ. ರಡ್ಡೇರ ಅವರು ಒಳ್ಳೆಯ ಓದುಗರು, ಗಂಭೀರ ಬರಹಗಾರರು. ಇವರಲ್ಲಿ ವಿಮರ್ಶಾ ಮನೋಭಾವನೆ ಇದೆ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಬಿ.ಗಿರಿಮಠ ಮಾತನಾಡಿ, ಡಾ. ವಿ.ಬಿ. ರಡ್ಡೇರ ಅವರು ನನ್ನ ಆತ್ಮೀಯ ಸ್ನೇಹಿತ. ಇವರಿಂದ ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಕೃತಿಗಳು ಹೊರ ಹೊಮ್ಮಲಿ ಎಂದರು. ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಡಾ. ವಿ.ಬಿ. ರಡ್ಡೇರ ಅವರು ಕವಿಯಾಗಿ ಸಾಮಾಜಿಕ ವಿಷಯಗಳಿಗೆ ಅಭಿವ್ಯಕ್ತಿಕೊಟ್ಟ ವೈಚಾರಿಕ ಬರಹಗಾರರು ಎಂದರು. ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಮಾತನಾಡಿ, ಡಾ. ವಿ.ಬಿ. ರಡ್ಡೇರ ಅವರು ಸ್ನೇಹಜೀವಿಗಳು ಹಾಗೂ ಅಧ್ಯಯನಶೀಲರು. ಮುಂದಿನ ದಿನಮಾನಗಳಲ್ಲಿ ಇವರ ವಿಮರ್ಶಾತ್ಮಕ ಕೃತಿಗಳು ಹೊರಬರಲಿ ಎಂದರು. ಸ.ಸ. ಮಾಳವಾಡ ಪ್ರಶಸ್ತಿ ಪುರಸ್ಕೃತರಾದ ಎ.ಎಂ.ಮದರಿ ಮಾತನಾಡಿ, ಡಾ. ಎಸ್.ಎಲ್.ಭೈರಪ್ಪನವರು ಕನ್ನಡದ ಒಳ್ಳೆಯ ಕಾದಂಬರಿಕಾರರು. ಓದುಗರನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು ಅವರ ಕಾದಂಬರಿಗಳಿಗೆ ಇದೆ ಎಂದರು. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಡಾ. ಎಸ್.ಎಲ್.ಭೈರಪ್ಪನವರ ಪ್ರತಿಭಾವಂತಿಕೆಯನ್ನು ಸರಿಗಟ್ಟಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅವರು ತಪಸ್ಸಿನ ರೀತಿಯಲ್ಲಿ ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಕಾದಂಬರಿಗಳಲ್ಲಿ ದಾರ್ಶಿಕತೆ ಇದೆ ಎಂದರು.ಭಾರತೀಯ ಸೇನೆಯ ನಿವೃತ್ತ ಸುಬೇದಾರ ಜಿ.ಬಿ.ಮಾಲಗಿತ್ತಿಮಠ ಮಾತನಾಡಿ, ಡಾ. ವಿ.ಬಿ. ರಡ್ಡೇರ ಅವರು ಒಳ್ಳೆಯ ಸಾಹಿತಿಗಳು, ಸ್ನೇಹಿತರು ಮತ್ತು ರಂಗನಟರು ಎಂದರು. ಜಯಶ್ರೀ ಪ್ರಕಾಶನದ ಮುಖ್ಯಸ್ಥರಾದ ನಿರ್ಮಲಾ ವಿ. ರಡ್ಡೇರ , ಸಂಶೋಧನಾ ವಿದ್ಯಾರ್ಥಿ ಮಹಾಂತೇಶ ನೆಲಾಗಣಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಗೀತ ಶಿಕ್ಷಕರಾದ ಸದಾಶಿವ ಪಾಟೀಲ ತಂಡದವರು ಪ್ರಾರ್ಥಿಸಿದರು. ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿಯವರ ನಿರೂಪಿಸಿದರು. ಸಂಶೋಧಕರಾದ ಡಾ. ವಿ.ಬಿ. ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸ್ವಾಗತಿಸಿದರು. ಸಂಶೋಧಕರಾದ ಡಾ. ಫಕೀರಪ್ಪ ವಜ್ರಬಂಡಿ ವಂದಿಸಿದರು.

Please follow and like us:
error