ಎಫ್‌ಐಆರ್ ರದ್ದುಪಡಿಸಿ ಅಂತರ್ ಧರ್ಮೀಯ ಜೋಡಿಯನ್ನು ಒಂದುಗೂಡಿಸಿದ ಹೈಕೋರ್ಟ್

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಏತ್ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಪುಸಲಾಯಿಸಿ ಅಪಹರಿಸಿದ್ದಾಗಿ ಆಪಾದಿಸಿ ಯವಕನ ವಿರುದ್ಧ ದಾಖಲಿಸಿದ ಎಫ್‌ಐಆರ್ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್, ಈ ಅಂತರ್ ಧರ್ಮೀಯ ಜೋಡಿಯನ್ನು ಮತ್ತೆ ಒಂದುಗೂಡಿಸಿದೆ.

ಯುವತಿ ವಯಸ್ಕಳಾಗಿದ್ದು, ತನ್ನ ಆಯ್ಕೆಯ ವ್ಯಕ್ತಿಯ ಜತೆ ತನ್ನ ಇಚ್ಛೆಯಂತೆ ಜೀವನ ಸಾಗಿಸಲು ಬಯಸಿದ್ದಾಳೆ ಎನ್ನುವುದು ದೃಢಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.

ತನ್ನ ಪತ್ನಿ ಶಿಖಾಳನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಪ್ರತ್ಯೇಕಿಸಲಾಗಿದೆ ಎಂದು ಆಪಾದಿಸಿ ಪತಿ ಸಲ್ಮಾನ್ ಅಲಿಯಾಸ್ ಕರಣ್ ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಯುವತಿಯ ಕುಟುಂಬದವರು ಆಕೆಯನ್ನು ಏತ್ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.ನ್ಯಾಯಮೂರ್ತಿಗಳಾದ ಪಂಕಜ್ ನಕ್ವಿ ಮತ್ತು ವಿವೇಕ್ ಅಗರ್‌ವಾಲ್ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ಯುವತಿಯನ್ನು ಹಾಜರುಪಡಿಸಿದಾಗ, ಯುವತಿ ತನ್ನ ಜನ್ಮ ದಾಖಲೆಯನ್ನು ಪ್ರಸ್ತುತಪಡಿಸಿದ್ದಳು. 1994ರ ಅಕ್ಟೋಬರ್ 4ರಂದು ಯುವತಿ ಜನಿಸಿದ್ದು ದಾಖಲೆಯಿಂದ ದೃಢಪಟಿತ್ತು. ಜತೆಗೆ ತನ್ನ ಸ್ವ ಇಚ್ಛೆಯಿಂದ ಸಲ್ಮಾನ್ ಅವರನ್ನು ವಿವಾಹವಾಗಿದ್ದಾಗಿ ಹೇಳಿಕೆ ನೀಡಿದ್ದಳು.

ಶಿಖಾ ಹಾಗೂ ಆಕೆಯ ಪತಿಗೆ ಸುರಕ್ಷಿತವಾಗಿ ಮನೆಗೆ ತೆರಳಲು ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಶಿಖಾ ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಡಿಸೆಂಬರ್ 7ರಂದು ಹಸ್ತಾಂತರಿಸುವ ವೇಳೆ ಜೆಎಂಎಫ್‌ಸಿ ನ್ಯಾಯಾಧೀಶರು ಕಾನೂನು ಅಂಶಗಳನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದೆ.

Please follow and like us:
error