fbpx

ಎಪಿಎಂಸಿ ಕಾಯಿದೆಗೆ ತಿದ್ದುಪಡಿ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲು ಹೊರಟಿದೆ- ಸಿದ್ದರಾಮಯ್ಯ ತೀವ್ರ ಖಂಡನೆ

ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸ್ವಪ್ರೇರಣೆಯಿಂದಲ್ಲ. ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ಕೃಷಿ ಸಚಿವಾಲಯದ ಒತ್ತಡಕ್ಕೆ ಮಣಿದು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ನಾಡಿನ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲು ಹೊರಟಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ  ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ಮಾಡಿರುವ ಅವರು

ಈಗಿನ ಎಪಿಎಂಸಿ ಕಾಯಿದೆಯ ಅನ್ವಯ ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಒಳಗೆ ವರ್ತಕರಿಗೆ ಇಲ್ಲವೇ ಹೊರಗೆ ಪರವಾನಗಿ ಇರುವ ವರ್ತಕರಿಗೆ ಮಾರಾಟ ಮಾಡಬಹುದಿತ್ತು. ತಿದ್ದುಪಡಿಯಿಂದಾಗಿ ಎಪಿಎಂಸಿ ಹೊರಗಿನ ವರ್ತಕರ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣ ಇರುವುದಿಲ್ಲ. ಹೀಗಿದ್ದಾಗ ರೈತರಿಗೆ ಎಲ್ಲಿದೆ ರಕ್ಷಣೆ?

ಆರಂಭದಲ್ಲಿ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸಿಗುತ್ತದೆ ಎಂದು ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ, ಇದರಿಂದ ರಾಜ್ಯದಲ್ಲಿನ ಎಪಿಎಂಸಿ ಗಳು ಒಂದೊಂದಾಗಿ ಮುಚ್ಚಿಕೊಳ್ಳುತ್ತಾ ಸಾಗಿ ಕೊನೆಗೆ ರೈತರು ಅನಿವಾರ್ಯವಾಗಿ ಖಾಸಗಿಯವರನ್ನೆ ಅವಲಂಭಿಸಬೇಕಾಗುತ್ತದೆ.

ಒಮ್ಮೆ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳು ಸಾರ್ವಭೌಮತ್ವ ಸಾಧಿಸಿದರೆಂದರೆ ನಂತರ ಅವರನ್ನು ನಿಯಂತ್ರಿಸುವ ಯಾವ ನಿಯಮಗಳು ಅಥವಾ ಅಧಿಕಾರ ಸರ್ಕಾರದ ಬಳಿ ಇರುವುದಿಲ್ಲ. ಇದು ಭವಿಷ್ಯದಲ್ಲಿ ಶೋಷಣೆಗೆ ದಾರಿ ಮಾಡಿಕೊಡುತ್ತದೆ.

ರೈತರ ಬೆಳೆಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ನಿಜವಾದ ಕಾಳಜಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದ್ದರೆ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿ, ತೂಕ ಮತ್ತು ಇತರೆಡೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ.

ಎಪಿಎಂಸಿ ಗಳಿಂದ ಸರ್ಕಾರಕ್ಕೆ ವಾರ್ಷಿಕ ರೂ.600 ಕೋಟಿ ಲಾಭವಿದೆ, ಇದರ ಜೊತೆಗೆ ರೈತರ ಬೆಳೆಗಳಿಗೂ ಅರ್ಹ ಬೆಲೆ ಸಿಗುತ್ತಿದೆ. ಕಾಯ್ದೆಗೆ ತಿದ್ದುಪಡಿ ತರುವುದರಿಂದ ಎಲ್ಲಾ ಎಪಿಎಂಸಿ ಗಳು ಬಾಗಿಲು ಹಾಕಿದರೆ ಸರ್ಕಾರಕ್ಕಾಗುವ ಈ ನಷ್ಟವನ್ನು ಖಾಸಗಿ ಕಂಪನೆಗಳು ತುಂಬಿಕೊಡುತ್ತವೆಯೇ?

ರೈತರಿಗೆ ಮುಕ್ತ ಮಾರುಕಟ್ಟೆ ಕಲ್ಪಿಸುವುದರಿಂದ ನ್ಯಾಯಯುತ ಬೆಲೆ ಸಿಗುತ್ತದೆ ಎಂಬುದು ಸರ್ಕಾರದ ವಾದ. ಹಾಗಾದರೆ 1966ರ ಪೂರ್ವದಲ್ಲೂ ಮುಕ್ತ ಮಾರುಕಟ್ಟೆಯಿತ್ತು, ಆಗ ರೈತರಿಗೆ ನ್ಯಾಯಯುತ ಬೆಲೆ ಸಿಕ್ಕಿದ್ದರೆ ಎಪಿಎಂಸಿ ಕಾಯ್ದೆ ಯಾಕೆ ಜಾರಿಗೆ ಬರುತ್ತಿತ್ತು?
ರೈತರ ಮೇಲಿನ ಶೋಷಣೆ ಹೆಚ್ಚಿದ್ದಕ್ಕೆ ಕಾಯ್ದೆ ಜಾರಿಗೆ ಬಂದದ್ದಲ್ಲವೇ.

ರಾಜ್ಯಪಟ್ಟಿಯಲ್ಲಿರುವ ಎಪಿಎಂಸಿ ಕಾಯಿದೆಗೆ ಮಾದರಿ ತಿದ್ದುಪಡಿ ರೂಪಿಸಿ, ಇದನ್ನು ಯಥಾವತ್ತಾಗಿ ಜಾರಿಗೆ ತನ್ನಿ ಎಂದು ಕೇಂದ್ರ ಸರ್ಕಾರ ಹೇಳುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅಪಚಾರ. ಕೇಂದ್ರಕ್ಕೆ ಈ ಅಧಿಕಾರ ಕೊಟ್ಟವರು ಯಾರು?

ಎಪಿಎಂಸಿ ಗಳ ಮೇಲೆ ಸರ್ಕಾರದ ನಿಯಂತ್ರಣವಿದೆ, ತಿದ್ದುಪಡಿ ಜಾರಿಯಾದರೆ ರೈತರ ಉತ್ಪನ್ನಗಳನ್ನು ಖರೀದಿಸುವ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ಸರ್ಕಾರಕ್ಕೆ ಯಾವುದೇ ರೀತಿಯ ನಿಯಂತ್ರಣ ಇರುವುದಿಲ್ಲ.
ಭವಿಷ್ಯದಲ್ಲಿ ಖಾಸಗಿಯವರೇ ರೈತರ ಶೋಷಣೆಗೆ ಇಳಿದರೆ ನ್ಯಾಯಕ್ಕಾಗಿ ರೈತರು ಯಾರನ್ನು ಕೇಳಬೇಕು

ಉದ್ಯಮಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶದಿಂದಲೇ ಈ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ಯಾವ ರೈತರ ಹಿತದೃಷ್ಟಿಯೂ ಇಲ್ಲ.

ಭೂ ಸುಧಾರಣೆ ಕಾಯ್ದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೆ ತಂದು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದರು, ರಾಜ್ಯ ಬಿಜೆಪಿ ಸರ್ಕಾರ ಉಳ್ಳವನನ್ನೇ ಭೂ ಒಡೆಯನನ್ನಾಗಿ ಮಾಡಲು ಹೊರಟಿದೆ.

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ.

ಕೃಷಿ ಭೂಮಿ ಖರೀದಿಗೆ ಆದಾಯದ ಮಿತಿಯ ಸೆಕ್ಷನ್ 79ಎ, ಕೃಷಿಕರೇತರರಿಗೆ ಭೂಮಿ ಖರೀದಿ ನಿಷೇಧಿಸಿದ್ದ ಸೆಕ್ಷನ್ 79ಬಿ, ಸುಳ್ಳು ಪ್ರಮಾಣಪತ್ರಕ್ಕೆ ದಂಡ ವಿಧಿಸುವ ಸೆಕ್ಷನ್ 79 ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80, ಗರಿಷ್ಠ ಭೂಮಿತಿಯ ಸೆಕ್ಷನ್ 63ರ ರದ್ದತಿ ಭೂತಾಯಿಗೆ ಬಗೆವ ದ್ರೋಹ.

ತಿದ್ದುಪಡಿಗೆ ಒಳಗಾಗಿರುವ ಎಲ್ಲಾ ಸೆಕ್ಷನ್ ಗಳು ಭೂಮಲೀಕರ ದೌರ್ಜನ್ಯದಿಂದ ಸಣ್ಣ ರೈತರನ್ನು ರಕ್ಷಿಸುವ ಹಾಗೂ ಸಣ್ಣ ಪುಟ್ಟ ಹಿಡುವಳಿದಾರರ ಅಸಹಾಯಕತೆಯನ್ನು ಶ್ರೀಮಂತರು ಹಾಗು ಉದ್ಯಮಿಗಳು ದುರುಪಯೋಗ ಪಡಿಸಿಕೊಳ್ಳದಂತೆ ತಡೆಹಿಡಿಯುವ ಅವಕಾಶಗಳನ್ನು ಒದಗಿಸುತ್ತಿದ್ದವು.

ಈ ಎಲ್ಲಾ ತಿದ್ದುಪಡಿಗಳ ಪರಿಣಾಮವಾಗಿ ಕಾರ್ಪೋರೇಟ್ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕುಳಗಳು ಮತ್ತು ಶ್ರೀಮಂತರು ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸಬಹುದು. ಸಣ್ಣ ರೈತಾಪಿಗಳು ಇನ್ನಷ್ಟು ವೇಗವಾಗಿ ಹಾಗೂ ಶಾಸನಬದ್ಧವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ.

ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆ ಮಾಡಿರುವ ಅಂದಾಜು 60,000 ಎಕರೆ ಜಮೀನು ಒಳಗೊಂಡಿರುವ 13,814 ಪ್ರಕರಣಗಳು ರಾಜ್ಯದ ನ್ಯಾಯಾಲಯದಲ್ಲಿವೆ. ಪ್ರಸ್ತಾಪಿತ ತಿದ್ದುಪಡಿಯಿಂದ ಈ ಎಲ್ಲ ಪ್ರಕರಣಗಳು ರದ್ದಾಗಿ ಅಕ್ರಮಗಳೆಲ್ಲ ಸಕ್ರಮವಾಗಲಿವೆ. ಈ ಭೂಗಳ್ಳರನ್ನು ರಕ್ಷಿಸಲಿಕ್ಕಾಗಿಯೇ ತಿದ್ದುಪಡಿ ತರಲಾಗಿದೆ.

ಭೂ ಸುಧಾರಣೆ ಕಾಯ್ದೆ ಉಲ್ಲಂಘಣೆಯ 13,814 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಭೂಮಿಗೆ ಚಿನ್ನದ ಬೆಲೆ ಇರುವ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿದೆ. ಈ ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಶಾಮೀಲಾಗಿ ಸರ್ಕಾರ ಈ ತಿದ್ದುಪಡಿ ತಂದಿದೆ.

ಭೂ ಸುಧಾರಣೆ ತಿದ್ದುಪಡಿಯ ಹಿಂದೆ ಕೋಟ್ಯಂತರ ರೂಪಾಯಿಗಳ ಹಗರಣ ಇದೆ. ಅಂದಾಜು 60,000 ಎಕರೆ ಜಮೀನನ್ನು ಪಡೆಯಲಿರುವ ಭೂಗಳ್ಳರಿಂದ ಆಡಳಿತ ಪಕ್ಷದವರಿಗೆ ಏನು ಲಾಭ ಎನ್ನುವುದನ್ನು ನಾನು ವಿವರಿಸಲು ಹೋಗುವುದಿಲ್ಲ.

ಭೂ ಸುಧಾರಣಾ ಕಾಯ್ದೆಯಿಂದಾಗಿ ಭ್ರಷ್ಟಾಚಾರ ಹೆಚ್ಚಾಗಿದೆ, ಅಧಿಕಾರಿಗಳು ಲಂಚ ಹೊಡೆಯಲು ಅನುಕೂಲವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಲಂಚ ಎಲ್ಲಿ ಇಲ್ಲ? ತಹಶೀಲ್ದಾರ್, ಪೊಲೀಸ್, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚ ಇಲ್ಲವೇ? ನಿರ್ಮೂಲನೆ ಮಾಡಬೇಕಾಗಿರುವುದು ಲಂಚವನ್ನೇ? ಇಲ್ಲ ಕಾನೂನನ್ನೇ?

ಅಧಿಕಾರಿಗಳು ಲಂಚಕೋರರಾಗಿದ್ದಾರೆ ಎಂದರೆ ಸರ್ಕಾರ ಅವರನ್ನು ನಿಯಂತ್ರಿಸಲು ವಿಫಲವಾಗಿದೆ ಇಲ್ಲವೇ ಸರ್ಕಾರವೇ ಲಂಚಕೋರರ ಜೊತೆ ಶಾಮೀಲಾಗಿದೆ ಎಂದರ್ಥವಲ್ಲವೇ? ಇದನ್ನೂ ಸಮರ್ಥಿಸಿಕೊಳ್ಳಲು ನಾಚಿಕೆ ಆಗುವುದಿಲ್ವೇ?

ಇಡೀ ದೇಶ ಕೊರೊನಾ ಸೋಂಕಿನಿಂದ ತತ್ತರಿಸುತ್ತಿರುವಾಗ ತರಾತುರಿಯಲ್ಲಿ ಈ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತರುವ ಅನಿವಾರ್ಯತೆ ಏನಿತ್ತು? ಇದನ್ನು ತರುವ ಮೊದಲು ರೈತರ ಜೊತೆ ಸಮಾಲೋಚನೆ ಮಾಡಿದ್ದೀರಾ? ವಿರೋಧ ಪಕ್ಷಗಳ ಜೊತೆ ಚರ್ಚೆ ಮಾಡಿದ್ದೀರಾ? ಕನಿಷ್ಠ ನಿಮ್ಮ ಪಕ್ಷದೊಳಗಾದರೂ ಚರ್ಚೆ ಮಾಡಿದ್ದೀರಾ?

ಈ ಭೂ ಸುಧಾರಣಾ ತಿದ್ದುಪಡಿಯಿಂದ ಕೃಷಿಗೇನು ತೊಂದರೆಯಾಗಲಾರದು ಎಂದು ಹೇಳುತ್ತೀರಲ್ಲಾ? ಕೃಷಿಯೇತರ ಬಳಕೆಗೆ ಕೃಷಿ ಭೂಮಿಯನ್ನು ಬಳಸಿಕೊಳ್ಳಬಾರದೆಂಬ ನಿರ್ಬಂಧವೇನಾದರೂ ತಿದ್ದುಪಡಿಯಲ್ಲಿದೆಯೇ? ಯಾಕೆ ಅದನ್ನು ಸೇರಿಸಿಲ್ಲ? ಇದರ ಹಿಂದಿನ ದುರುದ್ದೇಶ ಏನು?

ರೈತ ವಿರೋಧಿಯಾಗಿರುವ ಭೂ ಸುಧಾರಣಾ ತಿದ್ದುಪಡಿಯನ್ನು ನಾವು ಮಾತ್ರವಲ್ಲ, ಆಡಳಿತ ಪಕ್ಷದ ಸದಸ್ಯರಲ್ಲಿ ಆತ್ಮಸಾಕ್ಷಿ ಇದ್ದರೆ ಅವರೂ ವಿರೋಧಿಸಬೇಕು ಎಂದು ಮನವಿ ಮಾಡುತ್ತೇವೆ. ನಮ್ಮ ಹೋರಾಟ ಸದನಕ್ಕೆ ಮಾತ್ರ ಸೀಮಿತವಲ್ಲ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ

Please follow and like us:
error
error: Content is protected !!