ಎನ್‍ ಪಿಆರ್ ಗೆ ಹೆತ್ತವರ ಜನನ ಸ್ಥಳದ ಮಾಹಿತಿ ನೀಡುವುದು ಕಡ್ಡಾಯವಲ್ಲ: ಗೃಹ ಸಚಿವಾಲಯ ಅಧಿಕಾರಿಗಳು

ಹೊಸದಿಲ್ಲಿ: ಪ್ರಸ್ತಾವಿತ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಥವಾ ಎನ್‍ ಪಿಆರ್ ಗಾಗಿ ತಂದೆ ಹಾಗೂ ತಾಯಿಯ ಜನನ ಸ್ಥಳದ ಮಾಹಿತಿ ನೀಡಬೇಕಾಗಿರುವುದಕ್ಕೆ ಹಲವು ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಶುಕ್ರವಾರ ರಾಜಧಾನಿ ದಿಲ್ಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಎ. ಕೆ. ಭಲ್ಲಾ ಹಾಗೂ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ  ಅಧಿಕಾರಿಗಳು ಎನ್‍ ಪಿಆರ್‍ ಹಾಗೂ 2021 ಜನಗಣತಿಗಾಗಿ ಅನುಸರಿಸಬೇಕಾದ ಪ್ರಕ್ರಿಯೆಗಳ ಕುರಿತು ಚರ್ಚಿಸಲು  ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ರಾಜಸ್ಥಾನ ಮುಖ್ಯ ಕಾರ್ಯದರ್ಶಿ ಡಿ.ಬಿ. ಗುಪ್ತಾ ಹಾಗೂ ಇತರ ರಾಜ್ಯಗಳ ಕೆಲ ಪ್ರತಿನಿಧಿಗಳು, ಎನ್‍ ಪಿಆರ್‍ ಪ್ರಕ್ರಿಯೆ ವೇಳೆ ಗಣತಿದಾರರು ಕೇಳುವ ಕೆಲ ಪ್ರಶ್ನೆಗಳಿಗೆ ಆಕ್ಷೇಪ ಸೂಚಿಸಿದ್ದರು.

“ಹೆತ್ತವರ ಜನನ ಸ್ಥಳ ಮುಂತಾದ ಪ್ರಶ್ನೆಗಳು ಅಸಮಂಜಸ, ಈ ದೇಶದಲ್ಲಿರುವ ಹಲವಾರು ಮಂದಿಗೆ ತಮ್ಮದೇ ಹುಟ್ಟಿದ ಸ್ಥಳಗಳ ಬಗ್ಗೆ ತಿಳಿದಿಲ್ಲ, ಇಂತಹ ಪ್ರಶ್ನೆಗಳು ಯಾವ ಉದ್ದೇಶ ಈಡೇರಿಸುತ್ತವೆ ಎಂದು ತಿಳಿದಿಲ್ಲವಾದ ಕಾರಣ ಅವುಗಳನ್ನು ತೆಗೆದು ಹಾಕುವಂತೆ ಕೇಳಿಕೊಂಡೆವು” ಎಂದು ಗುಪ್ತಾ ಹೇಳಿದ್ದಾರೆ.

“ಇಂತಹ ಪ್ರಶ್ನೆಗಳನ್ನು ಹಿಂದೆ ಕೂಡ ಕೇಳಲಾಗಿತ್ತು ಹಾಗೂ ಜನರು ಅದಕ್ಕೆ ಮಾಹಿತಿ ನೀಡಬೇಕೆಂಬುದು ಕಡ್ಡಾಯವಲ್ಲ ಎಂದು ಸಚಿವಾಲಯ ಅಧಿಕಾರಿಗಳು ಹೇಳಿದರು ಹಾಗೂ ಬೇಡವೆಂದಿದ್ದರೆ ಉತ್ತರ ನೀಡದೇ ಇರಬಹುದು, ಅದಕ್ಕೆ ಒತ್ತಾಯ ಪಡಿಸುವಂತಿಲ್ಲವೆಂದರು” ಎಂದು ಗುಪ್ತಾ ತಿಳಿಸಿದ್ದಾರೆ.

Please follow and like us:
error