ಎನ್‍ಪಿಆರ್ ಗಾಗಿ 3,941 ಕೋಟಿ ರೂ.ಗೂ ಅಧಿಕ ಮೊತ್ತ ನಿಗದಿ: ಕೇಂದ್ರ ಸಂಪುಟದ ಒಪ್ಪಿಗೆ

ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಎಪ್ರಿಲ್ ನಿಂದ ಆರಂಭ

ಹೊಸದಿಲ್ಲಿ: ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಅಥವಾ ಎನ್‍ ಪಿಆರ್ ಅಪ್ಡೇಟ್ ಮಾಡಲು 3,941 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಮೀಸಲಿರಿಸಲು  ಕೇಂದ್ರ ಸಚಿವ ಸಂಪುಟ  ಮಂಗಳವಾರ ಅನುಮೋದನೆ ನೀಡಿದೆ. ಎನ್‍ ಪಿಆರ್ ಪ್ರಕ್ರಿಯೆ ಮುಂದಿನ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು ದೇಶದ ‘ಸಾಮಾನ್ಯ ನಿವಾಸಿಗಳ’ ರಿಜಿಸ್ಟರ್ ಇದಾಗಿದೆ.

ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಆರು ತಿಂಗಳಿನಿಂದ ವಾಸವಾಗಿದ್ದರೆ ಅಥವಾ ಆ ಪ್ರದೇಶದಲ್ಲಿ  ಮುಂದಿನ ಆರು ತಿಂಗಳು ವಾಸವಾಗಲಿದ್ದರೆ ಆತನನ್ನು `ಸಾಮಾನ್ಯ ನಿವಾಸಿ’ ಎಂದು ಎನ್‍ ಪಿಆರ್‍ ಗಾಗಿ ವ್ಯಾಖ್ಯಾನಿಸಲಾಗುತ್ತದೆ.

ಎನ್‍ ಪಿಆರ್‍ ಗೆ  ದತ್ತಾಂಶವನ್ನು 2010ರಲ್ಲಿ ಸಂಗ್ರಹಿಸಲಾಗಿತ್ತು. ಈ ದತ್ತಾಂಶವನ್ನು 2015ರಲ್ಲಿ ಮನೆ ಮನೆ ಭೇಟಿ ಮೂಲಕ ಅಪ್ಡೇಟ್ ಮಾಡಲಾಗಿತ್ತು. ಇದೀಗ ಎನ್‍ ಪಿಆರ್‍ ಅನ್ನು ಜನಗಣತಿ 2021ರ  ಮನೆ ಮನೆ ಭೇಟಿ  ಪ್ರಕ್ರಿಯೆಯ ಜತೆಗೆ ಮುಂದಿನ ವರ್ಷದ ಎಪ್ರಿಲ್‍ ನಿಂದ ಸೆಪ್ಟೆಂಬರ್ ತನಕ ಅಸ್ಸಾಂ ಹೊರತುಪಡಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗೊಳ್ಳುವ ಉದ್ದೇಶವಿದೆ. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಎನ್‍ಪಿಆರ್ ನೋಂದಣಿ ಕಡ್ಡಾಯವಾಗಿದೆ.

Please follow and like us:
error