ಎನ್‌ಆರ್‌ಸಿ, ಸಿಎಎ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ

ಕೊಚ್ಚಿ, ಜ.2: ಎನ್‌ಆರ್‌ಸಿ, ಸಿಎಎ ವಿರುದ್ಧ ಮುಸ್ಲಿಂ ಕೋ ಆರ್ಡಿನೇಶನ್ ಕಮಿಟಿಯ ನೇತೃತ್ವದಲ್ಲಿ ಬುಧವಾರ ಕೊಚ್ಚಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ, ಸಮಾವೇಶ ನಡೆಯಿತು.

ವಿವಿಧ ಮುಸ್ಲಿಂ ಸಂಘಟನೆಗಳ ಐಕ್ಯಕ್ಕೆ ವೇದಿಕೆಯಾದ ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು.

ಕೊಚ್ಚಿಯ ಮರೈನ್ ಡ್ರೈವ್‌ನಲ್ಲಿ ನಡೆದ ಪ್ರತಿಭಟನಾ ಸಮಾವೇಶವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಪಾಣಕ್ಕಾಡ್ ಸೈಯದ್ ಹೈದರಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಎಲ್ಲ ಅಭಿಪ್ರಾಯ ಭೇದಗಳನ್ನು ಬದಿಗಿಟ್ಟು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಇಲ್ಲಿ ಒಂದಾಗಿವೆ. ನಮ್ಮ ಐಕ್ಯವನ್ನು ಒಡೆಯುವ ಯಾವುದೇ ವಿಚಾರಗಳಿಗೆ ಯಾರೂ ಕಿವಿಗೊಡದೆ ಮುಂದುವರಿಯೋಣ ಎಂದರು.

ಮುಖ್ಯ ಭಾಷಣ ಮಾಡಿದ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಇಂದಿಲ್ಲಿ ಸಮಾವೇಶಗೊಂಡ ಮುಸ್ಲಿಂ ಸಂಘಟನೆಗಳ ಐಕ್ಯವು ಎನ್‌ಆರ್‌ಸಿ, ಸಿಎಎ ವಿರುದ್ಧದ ಹೋರಾಟದಲ್ಲಿ ಮುಂದುವರಿಯಲಿದೆ ಎಂದರು.

ಜಮಾಅತೇ ಇಸ್ಲಾಮಿ ಹಿಂದ್ ಕೇರಳ ಅಮೀರ್ ಎಂ.ಐ.ಅಬ್ದುಲ್ ಅಝೀಝ್ ಮಾತನಾಡಿ, ಬ್ರಿಟಿಶರೊಂದಿಗೆ ಕ್ಷಮೆ ಕೇಳಿದ ಆರೆಸ್ಸೆಸ್ ಗೆ ದೇಶದ ಜನತೆಯಲ್ಲಿ ಕ್ಷಮೆ ಯಾಚಿಸುವ ದಿನಗಳು ಬರಲಿವೆ ಎಂದರು.

ಪ್ರತಿಭಟನೆಯಲ್ಲಿ ಕೇರಳ ನದ್ವತುಲ್ ಮುಜಾಹಿದೀನ್ ಅಧ್ಯಕ್ಷ ಟಿ.ಪಿ.ಅಬ್ದುಲ್ಲಾ ಕೋಯ ಮದನಿ, ದಕ್ಷಿಣ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಅಬುಲ್ ಬುಶ್ರಾ ವೌಲವಿ, ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ನಜೀಬ್ ವೌಲವಿ ಮೊದಲಾದವರು ಮಾತನಾಡಿದರು.

ಸಮಾವೇಶಕ್ಕೂ ಮೊದಲು ವಿವಿಧ ಮಹಲ್ ಸಮಿತಿಗಳ ನೇತೃತ್ವದಲ್ಲಿ ಕಲೂರ್ ಜವಾಹರ ಲಾಲ್ ನೆಹರು ಅಂತಾರಾಷ್ಟ್ರೀಯ ಕ್ರೀಡಾಂಗಣದಿಂದ ಪ್ರತಿಭಟನಾ ಮೆರವಣಿಗೆಯು ನಗರದಲ್ಲಿ ನಡೆಯಿತು. ಸಿಎಎ, ಎನ್‌ಆರ್‌ಸಿ ವಿರುದ್ಧ ಘೋಷಣೆಗಳನ್ನು ಮೊಳಗಿದವು.

Please follow and like us:
error