ಹೊಸದಿಲ್ಲಿ, ಡಿ.25: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ನಡುವೆ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ “ಸ್ಪಷ್ಟವಾಗಿ ಹೇಳುವ” ಮೂಲಕ ಜನರ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಮತ್ತು ಕೆಲವು ಸಚಿವರು ಇವೆರಡಕ್ಕೂ ಸಂಬಂಧ ಕಲ್ಪಿಸಿ ಹೇಳಿಕೆ ನೀಡಿರುವ ಹಿಂದಿನ ನಿದರ್ಶನಗಳನ್ನು ವಿರೋಧ ಪಕ್ಷಗಳು ಗಮನಸೆಳೆದ ನಂತರ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.
“ಇದೀಗ ಪ್ಯಾನ್-ಇಂಡಿಯಾ ಎನ್ಆರ್ಸಿ ಬಗ್ಗೆ ಯಾವುದೇ ಚರ್ಚೆ ಅನಗತ್ಯ ” ಎಂದು ಶಾ ಸುದ್ದಿ ಸಂಸ್ಥೆ ಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
“ಇವುಗಳ ಜಾರಿ ಬಗ್ಗೆ ಕ್ಯಾಬಿನೆಟ್ ಅಥವಾ ಸಂಸತ್ತಿನಲ್ಲಿ ಈ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದು ಸರಿ ” ಎಂದು ಶಾ ಸಮರ್ಥಿಸಿಕೊಂಡಿದ್ದಾರೆ
ಎನ್ಪಿಆರ್ ದೇಶದ ಸಾಮಾನ್ಯ ನಿವಾಸಿ ಯ ಸಮಗ್ರ ಗುರುತಿನ ದತ್ತಸಂಚಯವನ್ನು ರಚಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ
ಎನ್ಪಿಆರ್ ಮೂಲಕ ಪಡೆದ ಮಾಹಿತಿಯನ್ನು ಎನ್ಆರ್ಸಿಗೆ ಬಳಸಲಾಗುವುದಿಲ್ಲ. ಇದು ಪ್ರತ್ಯೇಕ ಪ್ರಕ್ರಿಯೆ ಎಂದು ಶಾ ಹೇಳಿದರು.
ಹಿಂದಿನ ಮಂಗಳವಾರ ಕೇಂದ್ರ ಸಚಿವ ಸಂಪುಟವು ಎನ್ಪಿಆರ್ ಪರಿಸ್ಕರಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿತ್ತು. ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತಿರುವಾಗ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರವು ಪ್ರಾರಂಭಿಸಿದ ಎನ್ಪಿಆರ್ ನ್ನು ಬಿಜೆಪಿ ನೇತೃತ್ವದ ಸರ್ಕಾರ ಮುಂದುವರಿಸುವ ನಿರ್ಧಾರ ತೆಗೆದುಕೊಂಡಿತು ಎಂದು ಶಾ ಹೇಳಿದರು.
“ಎನ್ಪಿಆರ್ನಲ್ಲಿ ಕೆಲವು ಹೆಸರುಗಳು ತಪ್ಪಿಹೋಗುವ ಸಾಧ್ಯತೆಯಿದೆ, ಆದರೂ ಅವರ ಪೌರತ್ವವನ್ನು ಹಿಂತೆಗೆದುಕೊಳ್ಳಲಾಗುವುದಿಲ್ಲ ಯಾಕೆಂದರೆ ಇದು ಎನ್ಆರ್ಸಿಯ ಪ್ರಕ್ರಿಯೆಯಲ್ಲ. ಎನ್ಆರ್ಸಿ ವಿಭಿನ್ನ ಪ್ರಕ್ರಿಯೆ, ”ಎಂದರು.
ಎನ್ಪಿಆರ್ ಕಾರಣದಿಂದಾಗಿ ಯಾರೂ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಶಾ ಸ್ಪಷ್ಟಪಡಿಸಿದರು.
ಅಕ್ರಮ ವಲಸೆ ಬಂಧಿರುವವರ ಬಂಧನ ಹಲವು ವರ್ಷಗಳಿಂದಲೂ ನಡೆಯುತ್ತಿದೆ. ಇದೀಗ ಈ ಬಗ್ಗೆ ತಪ್ಪು ಮಾಹಿತಿ ಹರಡಲಾತ್ತಿದೆ ಎಂದು ಅವರು ಹೇಳಿದರು.
ಎನ್ಪಿಆರ್ ಪ್ರಕ್ರಿಯೆಯನ್ನು ನಿಲ್ಲಿಸದಂತೆ ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರಗಳನ್ನು ಶಾ ಒತ್ತಾಯಿಸಿದ್ದಾರೆ. “ನಾನು ಮತ್ತೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವಿನಮ್ರವಾಗಿ ಮನವಿ ಮಾಡುತ್ತೇನೆ. ಅಂತಹ ಹೆಜ್ಜೆ ಇಡಬೇಡಿ ಮತ್ತು ದಯವಿಟ್ಟು ನಿಮ್ಮ ನಿರ್ಧಾರಗಳನ್ನು ಪರಿಶೀಲಿಸಿ, ಬಡವರನ್ನು ನಿಮ್ಮ ರಾಜಕೀಯಕ್ಕಾಗಿ ಅಭಿವೃದ್ಧಿ ಕಾರ್ಯಕ್ರಮಗಳಿಂದ ದೂರವಿಡಬೇಡಿ” ಎಂದು ಅವರು ಮನವಿ ಮಾಡಿದರು.