ಎನ್‌ಆರ್‌ಸಿಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಿಲ್ಲ – ಗೃಹ ಸಚಿವ ಬೊಮ್ಮಾಯಿ ಅಭಯ

ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಾಜಿ ಸಚಿವರಾದ ಝಮೀರ್ ಅಹ್ಮದ್, ಯು.ಟಿ.ಖಾದರ್, ನಸೀರ್ ಅಹ್ಮದ್, ಮೇಲ್ಮನೆ ಸದಸ್ಯ ರಿಝ್ವಾನ್ ಅರ್ಶದ್ ನೇತೃತ್ವದ ನಿಯೋಗ ಎನ್‌ಆರ್‌ಸಿ ಬಗ್ಗೆ ಚರ್ಚಿಸಿದ್ದು, ಈ ಬಗ್ಗೆ ಅಲ್ಪಸಂಖ್ಯಾತರಿಗೆ ಯಾವುದೇ ಆತಂಕಬೇಡ ಎಂದು ಅಭಯ ನೀಡಿದ್ದಾರೆಂದು ಮಾಜಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ನಿಯಮಾವಳಿಗಳ ಪ್ರಕಾರ ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಿದರೆ ಯಾವ ನಾಗರಿಕರಿಗೂ ಸಮಸ್ಯೆಯಾಗುವುದಿಲ್ಲ. ಸ್ಥಳೀಯವಾಗಿ ವಾಸವಿರುವವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಆದರೆ, ಅಕ್ರಮ ವಲಸಿಗರ ಹೊರ ಹಾಕುವುದು ಅನಿವಾರ್ಯ ಎಂದು ಸಚಿವರು ತಿಳಿಸಿದ್ದಾರೆಂದು ಅವರು ಹೇಳಿದರು.

ಕೇಂದ್ರ ಸರಕಾರ ರೂಪಿಸುವ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಯಾವುದೇ ನಿಯಮ ತಿದ್ದುಪಡಿಯಾಗಬೇಕಾದರೂ ಸಂಸತ್‌ನಲ್ಲಿ ನಡೆಯಬೇಕು. ಸರಕಾರ ತನ್ನ ಪಾಲಿನ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತದೆಂದು ಅವರು ಹೇಳಿದ್ದಾರೆಂದು ಖಾದರ್ ತಿಳಿಸಿದರು.

ಯಾವುದೇ ಸಂದರ್ಭದಲ್ಲಿಯೂ ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅನಗತ್ಯವಾಗಿ ಕಿರುಕುಳ ನೀಡುವ ಉದ್ದೇಶವೂ ರಾಜ್ಯ ಸರಕಾರಕ್ಕಿಲ್ಲ. ಎನ್‌ಆರ್‌ಸಿ ಸಂಬಂಧದ ಯಾವುದೇ ವದಂತಿಗಳಿಗೆ ಜನತೆ ಕಿವಿಗೊಡಬಾರದು ಎಂದು ಖುದ್ದು ಗೃಹ ಸಚಿವರೇ ಮನವಿ ಮಾಡಿದ್ದಾರೆಂದು ಖಾದರ್ ಹೇಳಿದರು

Please follow and like us:
error