ಎಚ್‌ಡಿಕೆ ಬಿಡುಗಡೆ ಮಾಡಿರುವ ಸಿಡಿ ಕಟ್ ಅಂಡ್ ಪೇಸ್ಟ್: ಯಡಿಯೂರಪ್ಪ

ಬೆಂಗಳೂರು, ಜ.11: ಮಂಗಳೂರಿನಲ್ಲಿ ಡಿ.19ರಂದು ನಡೆದ ಗಲಭೆ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿ ಕಟ್ ಅಂಡ್ ಪೇಸ್ಟ್ ಆಗಿದ್ದು, ಇದಕ್ಕೆ ಅರ್ಥವಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶನಿವಾರ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ 54ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಲಾಲ್‌ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿ ಬಗ್ಗೆ ಮಾತನಾಡಲು ಏನಿಲ್ಲವೆಂದು ತಿಳಿಸಿದರು.

ಶಾಸ್ತ್ರೀಯ ಗುಣಗಾನ: ದೇಶ ಕಂಡ ಧೀಮಂತ ಹಾಗೂ ಪ್ರಾಮಾಣಿಕ ರಾಜಕೀಯ ಮುತ್ಸದ್ದಿ ಲಾಲ್‌ಬಹದ್ದೂರ್ ಶಾಸ್ತ್ರಿ, ರೈತರು ಹಾಗೂ ಸೇನಾ ಯೋಧರ ಬಗ್ಗೆ ಅಪಾರ ಗೌರವ-ಪ್ರೀತಿ ಇಟ್ಟುಕೊಂಡಿದ್ದರು. ರೈತರ ಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವರ ‘ಜೈ ಜವಾನ್ ಜೈ ಕಿಸಾನ್’ ಮಂತ್ರ ಇಂದಿಗೂ ಪ್ರಸ್ತುತವೆಂದು ಅವರು ಗುಣಗಾನ ಮಾಡಿದರು. ಲಾಲ್‌ಬಹದ್ದೂರ್ ಶಾಸ್ತ್ರಿಯ ಸರಳ ಜೀವನ ಎಲ್ಲರಿಗೂ ದಾರಿದೀಪ, ಗಾಂಧೀಜಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ ಹೋರಾಟಕ್ಕೆ ಧುಮುಕಿದ್ದ ಶಾಸ್ತ್ರಿ, ನಂತರ ಸ್ವತಂತ್ರ ಭಾರತದಲ್ಲಿ ನೆಹರೂರವರ ಸಂಪುಟದಲ್ಲಿ ದೇಶದ ಪ್ರಥಮ ರೈಲ್ವೆ ಸಚಿವರಾಗಿ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರು ಎಂದು ಅವರು ಸ್ಮರಿಸಿದರು.

1965ರಲ್ಲಿ ಪಾಕಿಸ್ತಾನ, ಭಾರತದ ಮೇಲೆ ದಾಳಿ ಮಾಡಿದಾಗ ಸಮರ್ಥವಾಗಿ ಭಾರತದ ಸೇನೆಯನ್ನು ಮುನ್ನಡೆಸಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ಧೀಮಂತ ನಾಯಕ. ಹೀಗಾಗಿ ಮಾಜಿ ಪ್ರಧಾನಿ ಲಾಲ್‌ಬಹುದ್ದೂರ್ ಶಾಸ್ತ್ರಿ ನಮ್ಮೆಲ್ಲರ ಹೆಮ್ಮೆ. ಸದಾ ಸ್ಮರಣೀಯರು ಎಂದರು. ಈ ಸಂದರ್ಭದಲ್ಲಿ ರಾಜ್ಯಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಉಪಸ್ಥಿತರಿದ್ದರು.

Please follow and like us:
error