ಉಳಿದ ಪೂರ್ಣ ಅವಧಿಗೆ ನಾನೇ ಸಿಎಂ: ಯಡಿಯೂರಪ್ಪ

ಬೆಂಗಳೂರು,: ಮುಂದಿನ ಎರಡೂವರೆ ವರ್ಷ ಕಾಲ ನಾನೇ ಸಿಎಂ ಆಗಿ ಮುಂದುವರಿಯಲಿದ್ದು, ಈ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ, ಮಾಧ್ಯಮಗಳಲ್ಲಿ ಗೊಂದಲವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಇನ್ನೂ ಎರಡೂವರೆ ವರ್ಷ ನಾನೇ ಸಿಎಂ ಆಗಿ ಮುಂದುವರಿಯಲಿದ್ದೇನೆ ಎಂದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಚಿವರಲ್ಲಾಗಲಿ ಅಥವಾ ಶಾಸಕರಲ್ಲಾಗಲಿ ಯಾವುದೇ ಗೊಂದಲವೂ ಇಲ್ಲ. ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕೆಲ ಶಾಸಕರು ಮಾತನಾಡಿರಬಹುದು. ಅದನ್ನೇ ದೊಡ್ಡದು ಮಾಡುವ ಅಗತ್ಯವಿಲ್ಲ. ಕೇಂದ್ರ ನಾಯಕರುಗಳೇ ನಾಯಕತ್ವದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಅಭಿವೃದ್ಧಿಗೆ ಆದ್ಯತೆ: ರಾಜ್ಯದಲ್ಲಿ ಕೋವಿಡ್-19 ಸೋಂಕಿನಿಂದಾಗಿ ಆರ್ಥಿಕವಾಗಿ ಹಿನ್ನಡೆಯಾಗಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ಹಣಕಾಸಿನ ಮಿತಿಯ ಮಧ್ಯೆಯೇ ಅಭಿವೃದ್ಧಿ ಕಾರ್ಯಗಳು ನಡೆದಿವೆ. 2021-22ನೆ ಸಾಲಿನ ಬಜೆಟ್‍ನಲ್ಲಿ ಆದ್ಯತಾ ವಲಯಗಳಿಗೆ ಹೆಚ್ಚಿನ ಹಣವನ್ನು ಒದಗಿಸಲಾಗುವುದು ಎಂದರು.

ಕೇಂದ್ರ ಸರಕಾರದ ಬಜೆಟ್ ಮಂಡನೆಯ ದಿನಾಂಕವನ್ನು ನೋಡಿಕೊಂಡು ರಾಜ್ಯದಲ್ಲೂ ಬಜೆಟ್ ಮಂಡನೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದ ಯಡಿಯೂರಪ್ಪ, ಕೊರೋನ ಸಂಕಷ್ಟದ ಮಧ್ಯೆಯೂ ರಾಜ್ಯಕ್ಕೆ ವಿದೇಶಿ ನೇರ ಬಂಡವಾಳ ದೊಡ್ಡ ಪ್ರಮಾಣದಲ್ಲಿ ಹರಿದು ಬಂದಿದೆ. 1.5 ಲಕ್ಷ ಕೋಟಿ ರೂ.ಗಳ 95 ಬಂಡವಾಳ ಹೂಡಿಕೆಯ ಪ್ರಸ್ತಾಪಗಳು ಬಂದಿವೆ ಎಂದರು.

 

Please follow and like us:
error