ಈಗಲಾದ್ರೂ ಬಿಡಿ ಈ ಜಾತಿ ನಿಗಮಗಳ ಜಾಡ್ಯವನ್ನ. ನುಡಿಸಮುದಾಯವಾಗಿ ಒಂದಾಗಿ

-ರಾಜೇಂದ್ರ ಪ್ರಸಾದ
ತಮಿಳರು, ಮಲೆಯಾಳಿಗರು, ಬೆಂಗಾಳಿಯರು ಇದೀಗ ಪಂಜಾಬಿಗರು ಒಕ್ಕೂಟದ ಸರ್ಕಾರದ ಸ್ವೆಚ್ಛಾಚಾರದ ಆಡಳಿತದ ವಿರುದ್ದ ತಿರುಗಿ ಬಿದ್ದಿದ್ದಾರೆ. ಅಲ್ಲಿನ ನುಡಿ ಸಮುದಾಯಗಳು ಜಾತಿ/ಮತ/ಧರ್ಮಗಳನ್ನು ಬದಿಗೆಸೆದು ತಮ್ಮ ಮೇಲೆ ಹೇರುವ/ ತ್ತಿರುವ ಕಾಯ್ದೆ, ಕಾನೂನುಗಳ ವಿರುದ್ದ ಬಂಡೆದ್ದು ರಾಜಕೀಯ ಚಿತ್ರಣಗಳನ್ನು ಬದಲಾಯಿಸುತ್ತಿದ್ದಾರೆ..
ಕನ್ನಡಿಗರು ನಾವೇನು ಮಾಡ್ತಾ ಇದ್ದೀವಿ?! ಇಲ್ಲಿನ ಮೂರ್ಖ ಸರ್ಕಾರ ಮಾಡುವ ಲಿಂಗಾಯತ, ಒಕ್ಕಲಿಗ, ಮರಾಠ ಎಂಬ ವಿಷ ಬಿತ್ತನೆಯ ನಿಗಮ ಮಂಡಳಿಗಳಿಗೆ ಅಲ್ಲಿಗೆ ಕೊಡುವ ಜುಜುಬಿ 100-500 ಕೋಟಿಗಳಿಗೆ ಬಡಿದಾಡಿಕೊಂಡು ಪ್ರತ್ಯೇಕ ರಾಜ್ಯ ಎಂದೆಲ್ಲಾ ಕೂಗಾಡುತ್ತಿದ್ದೇವೆ. ಇದೇ ಹೊತ್ತಿನಲ್ಲಿ ನಮಗೆ ನ್ಯಾಯವಾಗಿ ಕೊಡಬೇಕಾದ ಸಾವಿರಾರು ಕೋಟಿ ತೆರಿಗೆ ಪಾಲನ್ನು ಕೊಡದೇ, ನೆರೆ-ಬರಗಳ ಪರಿಹಾರ ಒದಗಿಸದೇ, ಕಡೆಗೆ ಸಂಸದರ ನಿಧಿಯನ್ನೂ‌ಕೂಡ ಒಕ್ಕೂಟದ ಮೋದಿ ಸರ್ಕಾರ ನುಂಗಿ ನೀರು ಕುಡಿದಿದೆ. ಅದನ್ನು ವಸೂಲು ಮಾಡುವುದು ಯಾವಾಗ?! ಸಂವಿಧಾನ ಬದ್ದವಾಗಿ ನಮಗೆ ಸಲ್ಲಬೇಕಾದ ತೆರಿಗೆ ಪಾಲು ಬರದೇ ರಾಜ್ಯದ ಆಡಳಿತ ನಡೆಸುವುದು ಹೇಗೆ? ಎರಡೂ ಕಡೇ ಒಂದೇ ಪಕ್ಷವಿದ್ದರೆ ಬೇಕಾದಷ್ಟು ಅನುದಾನ ತರಬಹುದು ಎಂದು ಬಾಳಂಗ್ ಬುಟ್ಟು ಓಟು ಪಡೆದ ಅಪ್ರಯೋಜಕ, ಅಯೋಗ್ಯ ಸಂಸದರು/ ಶಾಸಕರು ಎಲ್ಲಿ? ಇದೆಲ್ಲವನ್ನು ಸರ್ಕಾರದಿಂದ ಕೊಡಿಸಬೇಕಾದ ಅವರೆಲ್ಲಿ?
ಅವರೆಲ್ಲಾ PM Cares fund ಗೆ ಇರೋಬರೋ ನಿಧಿಯೆಲ್ಲಾ ಕೊಟ್ಟು ಇವಾಗ ರಾಜ್ಯ ಸರ್ಕಾರದ ಬಳಿ ಹಣ ಕೇಳುತ್ತಿದ್ದಾರೆ ನಾಚಿಕೆಗೆಟ್ಟವರು. ಆಯ್ಕೆ ಆಗಿರುವುದು ಲೋಕಸಭೆಗೆ, ಕೇಳಬೇಕಾದ್ದು ಮೋದಿ ಸರ್ಕಾರದಲ್ಲಿ ಅನ್ನುವ ಸಾಮಾನ್ಯಜ್ಞಾನವಿಲ್ಲದ ದರಿದ್ರರು.
ಈ ಸಂಸದರು/ ಶಾಸಕರನ್ನು ನಂಬಿದ್ರೆ ನಮ್ಮನ್ನು ಬೀದಿಗೆ ನಿಲ್ಲಿಸುತ್ತಾರೆ.. ಈಗಲಾದ್ರೂ ಬಿಡಿ ಈ ಜಾತಿ ನಿಗಮಗಳ ಜಾಡ್ಯವನ್ನ. ನುಡಿಸಮುದಾಯವಾಗಿ ಒಂದಾಗಿ ಒಕ್ಕೂಟದಿಂದ ನಮಗೆ ಬರಬೇಕಾದ ಪಾಲು ಪಡೆದು ನಮ್ಮೂರುಗಳನು ಉದ್ದರಿಸುವ ಕೆಲಸ ಮಾಡೋಣ. ಈ ಭಾರತ ಉಪಖಂಡದಲಿ ‘ಕನ್ನಡಿಗ’ ಎಂಬವರು ಎಂತಹ ಬದ್ದತೆಯ ಜನ ಎಂಬುದನು ಸಾಬೀತು ಮಾಡಿ ತೋರಿಸೋಣ.
ನಮಗೆ ಕನ್ನಡವೇ ಸರ್ವಸ್ವ. ಸಾವಿರ ವರ್ಷಗಳ ಹಿಂದಿನ ಅಮೋಘ ವರ್ಷನ ಈ ಮಾತನ್ನು ಉಳಿಸಿಕೊಳ್ಳಣ..
ಪದನಱಿದು ನುಡಿಯಲುಂ ನುಡಿ-
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುಱಿತೋ-
ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್||೩||
ಸುಭಟರ್ಕಳ್ ಕವಿಗಳ್ ಸು-
ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್
ಅಭಿಮಾನಿಗಳತ್ಯುಗ್ರರ್
ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್|| ೬||
~ ಕವಿರಾಜಮಾರ್ಗ | ಕ್ರಿ.ಶ. 850
https://www.facebook.com/rajendramandya/posts/10207990881006349
Please follow and like us:
error