ಇನ್ನು ಮುಂದೆ 7ನೇ ತರಗತಿಗೂ ಪಬ್ಲಿಕ್ ಪರೀಕ್ಷೆ-ಸಚಿವ ಸುರೇಶ್‌ ಕುಮಾರ್

ಬೆಂಗಳೂರು, : ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬಾರದೆಂಬ ನಿಯಮವನ್ನು ರದ್ದು ಮಾಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಕ್ಕಳನ್ನು 10ನೇ ತರಗತಿವರೆಗೆ ಫೇಲ್ ಮಾಡದೇ ಇದ್ದರೆ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಈ ವರ್ಷದಿಂದಲೇ 7ನೇ ತರಗತಿ ಪಬ್ಲಿಕ್ ಪರೀಕ್ಷೆ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ ಎಂದರು.

ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅನುತ್ತೀರ್ಣರಾದ ಮಕ್ಕಳಿಗೆ ಪೂರಕ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡುತ್ತೇವೆ. ಪ್ರಶ್ನೆ ಪತ್ರಿಕೆ ಮಾದರಿ, ಅಂಕ ನೀಡುವ ಪದ್ಧತಿ ಹೇಗಿರಬೇಕೆಂಬುದರ ಕುರಿತು ಶಿಕ್ಷಣ ತಜ್ಞರ ತಂಡವನ್ನು ರಚನೆ ಮಾಡುತ್ತೇವೆಂದು ಅವರು ಹೇಳಿದರು.

ಎಸೆಸೆಲ್ಸಿ ಬೋರ್ಡ್ ಪ್ರಶ್ನೆ ಪತ್ರಿಕೆ ತಯಾರಿಸಲಿದೆ. ಉತ್ತರ ಪತ್ರಿಕೆಗಳನ್ನು ಆಯಾ ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಒಂದು ವೇಳೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದರೆ, ಈ ಬಗ್ಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಶಿಕ್ಷಕರ ಕಡ್ಡಾಯ ವರ್ಗಾವಣೆ ಎನ್ನುವ ಪದವನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ. ವರ್ಗಾವಣೆಯಲ್ಲಿರುವ ಕಠಿಣ ನಿಯಮಗಳನ್ನು ತೆಗೆದುಹಾಕಿ ಶಿಕ್ಷಕರಿಗೆ ಪೂರಕವಾಗಿರುವ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

50 ವರ್ಷ ದಾಟಿದ ಶಿಕ್ಷಕಿಯರಿಗೆ ಕಡ್ಡಾಯ ವರ್ಗಾವಣೆ ಇಲ್ಲ. 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಸಿ(ಗ್ರಾಮೀಣ) ವಲಯದಲ್ಲಿ 15 ವರ್ಷ ಒಟ್ಟಿಗೆ ಕೆಲಸ ಮಾಡಿದ್ದರೆ ಅಥವಾ ಆಗಾಗ ಕೆಲಸ ಮಾಡಿದ್ದರೆ ಮತ್ತೆ ಸಿ ವಲಯಕ್ಕೆ ವರ್ಗಾವಣೆ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಅವರು ವಿವರಿಸಿದರು.

ಕಡ್ಡಾಯ ವರ್ಗಾವಣೆ ನಿಯಮದ ಶೇ.20ರ ಮಿತಿಯನ್ನು ಶೇ.25ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ತೀವ್ರ ಖಾಯಿಲೆಗೆ ತುತ್ತಾದ ಮಕ್ಕಳ ಶಿಕ್ಷಕರಿಗೆ ಹಾಗೂ ವಿಧವೆ ಶಿಕ್ಷಕಿಯರಿಗೂ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದರು.

ಶನಿವಾರ ಬ್ಯಾಗ್ ಲೆಸ್ ಡೇ: ಇನ್ನು ಮುಂದೆ ಪ್ರತಿ ಶನಿವಾರ ಬ್ಯಾಗ್ ಲೆಸ್ ಡೇ ಮಾಡಲು ನಿರ್ಧರಿಸಲಾಗಿದೆ. ಪಾಠ ಬಿಟ್ಟು ಎನ್‌ಜಿಒ ಸಹಾಯದಿಂದ ಪಠ್ಯೇತರ ಚಟುವಟಿಕೆ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸಲು ತಿಳಿಸಲಾಗಿದೆ. ಗ್ರಾಮ್ ಎನ್ನುವ ಎನ್‌ಜಿಒ ನವೆಂಬರ್‌ನಲ್ಲಿ ಪ್ರಾತ್ಯಕ್ಷಿಕೆ ತೋರಿಸಲಿದೆ. ಇದನ್ನು ಪರಿಶೀಲಿಸಿದ ನಂತರ ಮುಂದುವರಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.

ಶಾಲೆಗಳಲ್ಲಿ ಮಕ್ಕಳ ಸುರಕ್ಷಿತೆ ಬಗ್ಗೆ ಮಹತ್ವದ ನಿರ್ಧಾರ ಮಾಡಿದ್ದೇವೆ. ನಿಮ್ಹಾನ್ಸ್‌ನಿಂದ ಕೆಲ ವರದಿ ಕೂಡ ಬಂದಿತ್ತು. ಪೊಲೀಸ್ ಇಲಾಖೆಯ ಡಿಸಿಪಿ ಮಟ್ಟದಲ್ಲಿ ಬಿಇಓ ಒಳಗೊಂಡ ತಂಡ ರಚನೆಗೆ ನಿರ್ಧಾರ ಮಾಡಲಾಗಿದೆ. ಮಕ್ಕಳ ಸುರಕ್ಷೆ ಬಗ್ಗೆ ಈ ಕಮಿಟಿ ಮಾನಿಟರ್ ಮಾಡುತ್ತದೆ. ಮಕ್ಕಳ ರಕ್ಷಣೆ ನಿಯಮಗಳನ್ನು ಈ ಸಮಿತಿ ಜಾರಿ ಮಾಡಲಿದೆ ಎಂದು ಅವರು ತಿಳಿಸಿದರು.

Please follow and like us:
error