ಇಂದು ಪ್ರಕಟವಾಗಲ್ಲ ಅನರ್ಹ ಶಾಸಕರ ತೀರ್ಪು

ಉಪ ಚುನಾವಣೆ ಮುಂದೂಡಿಕೆಗೆ ನಿರ್ದೇಶಿಸಲು ಸುಪ್ರೀಂ ನಕಾರ

 ಹೊಸದಿಲ್ಲಿ, ನ.8: ಭಾರೀ ಕುತೂಹಲ ಕೆರಳಿಸಿರುವ ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದು, ಎರಡೂ ಕಡೆಯ ವಾದ-ಪ್ರತಿವಾದಗಳು ಮುಗಿದಿದೆ. ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ. ಶುಕ್ರವಾರವೇ ತೀರ್ಪು ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ,ಇಂದಿನ ಕಲಾಪ ಪಟ್ಟಿಯಲ್ಲಿ ಪ್ರಕರಣದ ತೀರ್ಪು ಪ್ರಕಟದ ಮಾಹಿತಿ ಇಲ್ಲದ ಕಾರಣ ತೀರ್ಪು ಪ್ರಕಟವಾಗುವುದಿಲ್ಲ.

ಸೋಮವಾರವೇ ನೀತಿ ಸಂಹಿತೆ ಜಾರಿಯಾಗುವುದರಿಂದ ಉಪ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಶುಕ್ರವಾರ ಮಾಡಿದ ಮನವಿಯನ್ನು ನ್ಯಾ.ರಮಣ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ತಿರಸ್ಕರಿಸಿತು.

ಚುನಾವಣೆ ಮುಂದೂಡಿಕೆಯ ಅರ್ಜಿಯನ್ನಾದರೂ ದಾಖಲಿಸಿಕೊಳ್ಳಿ ಎಂಬ ರೋಹ್ಟಗಿ ಮನವಿಗೆ ಒಪ್ಪಿದ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಪಟ್ಟಿ ಮಾಡಿತು.

ಇಂದೇ ತೀರ್ಪು ಬರುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಅನರ್ಹ ಶಾಸಕರಿಗೆ ಇದರಿಂದ ಭಾರೀ ನಿರಾಸೆಯಾಗಿದೆ. ಸೋಮವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವ ಹಿನ್ನೆಲೆಯಲ್ಲಿ ಅನರ್ಹರು ಆತಂಕಕ್ಕೆ ಒಳಗಾಗಿದ್ದಾರೆ.

ಪ್ರಕರಣದ ವಿಚಾರಣೆ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಈಗಾಗಲೇ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ನ್ಯಾ. ಎನ್.ವಿ.ರಮಣ ನೇತೃತ್ವದ ಪೀಠದ ಕಲಾಪಪಟ್ಟಿಯಲ್ಲಿ ಅನರ್ಹ ಶಾಸಕರ ತೀರ್ಪು ಪ್ರಕಟಿಸುವ ಮಾಹಿತಿ ಇಲ್ಲ. ಹೀಗಾಗಿ ತೀರ್ಪು ಪ್ರಕಟವಾಗುವುದಿಲ್ಲ. ಇನ್ನು ಶನಿವಾರ ಹಾಗೂ ರವಿವಾರ ರಜೆ ಇರುವುದರಿಂದ ಸೋಮವಾರದವರೆಗೂ ಅನರ್ಹ ಶಾಸಕರು ಕಾಯಬೇಕಾಗುತ್ತದೆ

Please follow and like us:
error