‘ಆಶ್ರಮ್’ ವೆಬ್ ಸೀರೀಸ್ : ಪ್ರಕಾಶ್ ಝಾ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಾರೆ

ಪ್ರಕಾಶ್ ಝಾ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ವೆಬ್ ಸೀರೀಸ್ ಮೂಲಕ. ಅವರ ಗಂಗಾಜಲ್, ಜೈ ಗಂಗಾಜಲ್, ಸತ್ಯಾಗ್ರಹ್ ಇತ್ಯಾದಿ ಸಿನಿಮಾಗಳ ಮುಂದುವರೆದ ಭಾಗವೇ ಎಂಎಕ್ಸ್ ಪ್ಲೇಯರ್ ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಆಶ್ರಮ್’ ಎಂಬ ಒಂಭತ್ತು ಎಪಿಸೋಡುಗಳ ವೆಬ್ ಸೀರೀಸ್. ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಪ್ರಕಾಶ್ ಝಾ ನೋಡುವ ಕ್ರಮವೇ ಬೇರೆ. ಅದನ್ನು ನೀವು ಇಲ್ಲೂ ಗಮನಿಸಬಹುದು. ಸಿನಿಮಾಗಳ ಗಾತ್ರ ಚಿಕ್ಕದು, ಎರಡು-ಎರಡೂವರೆ ಗಂಟೆಗಳಲ್ಲಿ ಹೇಳಬೇಕಾಗಿದ್ದನ್ನು ಹೇಳಿ ಮುಗಿಸಬೇಕು. ವೆಬ್ ಸೀರೀಸ್ ಹಾಗಲ್ಲ. ವೆಬ್ ಸೀರೀಸ್ ಕೊಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರಕಾಶ್ ಝಾ ಸಿಕ್ಕಾಪಟ್ಟೆ ಖುಷಿಯಿಂದ ಅನುಭವಿಸಿದಂತಿದೆ. ಪ್ರತಿ ಎಪಿಸೋಡೂ ನಲವತ್ತು ನಿಮಿಷಕ್ಕಿಂತಲೂ ದೊಡ್ಡದು. ಝಾ ಕೈ ಕಾಲು ಚಾಚಿಕೊಂಡು ಕಥೆ ಹೇಳುತ್ತಾರೆ, ಸಣ್ಣ ಸಣ್ಣ ಪಾತ್ರಗಳ ಸಣ್ಣ ಸಣ್ಣ ವಿವರಗಳನ್ನೂ ಬಿಡದಂತೆ.

ಕುರುಡು ಭಕ್ತಿ ಎಂಬುದು ಈ ದೇಶದಲ್ಲಿ ಹರಡಲು ಶುರುವಾದರೆ ಅದು ಪ್ರವಾಹದಂತೆ ಉಕ್ಕಿ ಹರಿಯುತ್ತದೆ… ಹೀಗೆ ಹೇಳುವವನು ಕಾಶೀಪುರ್ ವಾಲೆ ಬಾಬಾ ಅಲಿಯಾಸ್ ಗರೀಬೋವಾಲೆ ಬಾಬಾ ಅಲಿಯಾಸ್ ಬಾಬಾ ನಿರಾಲಾ. ಈ ಬಾಬಾಗೆ 44 ಲಕ್ಷ ಜನ ಭಕ್ತರು. ಅವರು ಈತನಿಗೆ ಸಂಪೂರ್ಣ ಸಮರ್ಪಿಸಿಕೊಂಡಿದ್ದಾರೆ. ಆತ ಏನು ಹೇಳಿದರೂ ಮಾಡುತ್ತಾರೆ. ಅರ್ಥಾತ್ ಅಷ್ಟೂ ಜನರ ಬುದ್ಧಿ-ಮೆದುಳು ಈತನ ಅಂಕೆಯಲ್ಲಿದೆ. ಅವನ ದೊಡ್ಡ ಶಕ್ತಿಯೇ ಈ ಅಂಧ ಭಕ್ತರ ತನ್ಮಯ ಭಕ್ತಿ. ತನ್ನ ಭಕ್ತರನ್ನು ಅವನು ಆಪರೇಷನ್ ಮಾಡಿಸಿ, ನಪುಂಸಕರನ್ನಾಗಿಸಿದರೂ ಅವರು ‘ಆತ್ಮಶುದ್ಧೀಕರಣ’ಕ್ಕೆ ಒಳಗಾದೆವೆಂದು ಬಾಬಾಗೆ ಜೈಕಾರ ಹಾಕುತ್ತಾರೆ. ಭಕ್ತಿಯ ಪರಾಕಾಷ್ಠೆ ಎಂಥ ಭೀಕರ ಎಂಬುದು ನಮಗೆ ಸದ್ಯದ ರಾಜಕೀಯ ಸ್ಥಿತಿಯಲ್ಲಿ ನಮಗೆ ಚೆನ್ನಾಗಿ ಅರ್ಥವಾಗಿದೆಯಲ್ಲವೇ? ಅದರ ಇನ್ನೊಂದು ರೂಪ ಇಲ್ಲಿ ನೋಡಬಹುದು. ಬಾಬಾ ನಿರಾಲಾ ಮತ್ತು ಅವನ ಬಲಗೈ ಬಂಟ-ಸ್ನೇಹಿತ ಬೋಪಾ ಪಾತ್ರಗಳನ್ನು ನೀವು ನೋಡುವಾಗ ಸದ್ಯದ ಇಂಡಿಯಾದ ರಾಜಕಾರಣದ ಕರಟಕ-ದಮನಕ ಜೋಡಿ ನೆನಪಾದರೆ ಆಶ್ಚರ್ಯವಿಲ್ಲ. ಈ ಪಾತ್ರಗಳನ್ನು ಸೃಷ್ಟಿಸುವಾಗ ಝಾ ತಲೆಯಲ್ಲೂ ಅವರೇ ಇದ್ದಿರಬಹುದಾ? ಗೊತ್ತಿಲ್ಲ.

ಪ್ರಕಾಶ್ ಝಾ ಒಂದೇ ಪಾತ್ರದಲ್ಲಿ ನಮ್ಮೆದುರಿಗೆ ಜೀವಂತವಾಗಿರುವ ಹಲವು ವ್ಯಕ್ತಿಗಳನ್ನು ಕಾಣಿಸಿಬಿಡುತ್ತಾರೆ. ಸತ್ಯಾಗ್ರಹದಲ್ಲೂ ಹೀಗೇ ಮಾಡಿದ್ದರು, ಆಶ್ರಮ್ ನಲ್ಲೂ ಹಾಗೆ. ಡೇರಾ ಸಚ್ಚಾ ಸೌದಾದ ರಾಮ್ ರಹೀಮ್, ಆಸಾರಾಂ ಬಾಪು, ನಿತ್ಯಾನಂದ… ಅಷ್ಟೇಕೆ ನಮ್ಮ ಅಚ್ಚುಮೆಚ್ಚಿನ ಹೋರಿ ಸ್ವಾಮಿಯವರೆಗೆ ಎಲ್ಲರೂ ಬಾಬಾ ನಿರಾಲಾ ಪಾತ್ರವನ್ನು ನೋಡುವಾಗ ನೆನಪಾಗುತ್ತಾರೆ, ಜತೆಗೆ ಮೇಲೆ ನಾನು ಮುಗುಮ್ಮಾಗಿ ಹೇಳಿದ ರಾಜಕೀಯ ವ್ಯಕ್ತಿಗಳೂ ಕೂಡ.

ವೆಬ್ ಸೀರೀಸ್ ಹೆಸರೇ ಹೇಳುವಂತೆ ಒಂದು ಆಶ್ರಮದ ಸುತ್ತಲೇ ಕೇಂದ್ರೀಕರಣಗೊಂಡಿದೆ. ಲಕ್ಷಾಂತರ ಭಕ್ತರು, ಸತ್ಸಂಗ, ಪದೇಪದೇ ಕೇಳುವ ‘ಜಪ್ ನಾಮ್’ ನಿಮ್ಮ ಕಣ್ಣು ಕಿವಿ ಕುಕ್ಕುವಷ್ಟು ವೈಭವೋಪೇತವಾಗಿವೆ. ಝಾ ಸಿನಿಮಾಗಳ ಹಾಗೇ ಇಲ್ಲೂ ಸಾವಿರಾರು ಜೂನಿಯರ್ ಆರ್ಟಿಸ್ಟ್ ಗಳು ಕೆಲಸ ಮಾಡಿದ್ದಾರೆ. ವೆಬ್ ಸೀರೀಸ್ ಎಂಬ ಕಾರಣಕ್ಕೆ ಮೇಕಿಂಗ್ ನಲ್ಲಿ ಯಾವ ಕೊರತೆಯೂ ಆಗಿಲ್ಲ. ಕ್ರೈಂ ಸೀನುಗಳಿಗೆ ಹಿನ್ನೆಲೆ ಸಂಗೀತವಾಗಿ ಮಂತ್ರಘೋಷ, ಸೊಗಸಾದ ಶಾಸ್ತ್ರೀಯ ವಾದ್ಯಗಳ ಸದ್ದು ನೀವು ಎಲ್ಲಾದರೂ ಕೇಳಿದ್ದೀರಾ? ಇಲ್ಲಿ ಅದನ್ನು ಕೇಳಬಹುದು. ಹಲವಾರು ದೃಶ್ಯಗಳನ್ನು ಮೈಜುಮ್ಮೆನಿಸುವಂತೆ ಮಾಡಿರುವುದು ಹಿನ್ನೆಲೆ ಸಂಗೀತವೇ ಹೌದು.

ಈ ಕಾಶೀಪುರದ ಮಠದ ಬಾಬಾ ನಿರಾಲಾ ದೀನದಲಿತರ ಬಂಧು. ಬಡವರ ಪಾಲಿನ ಸಂಜೀವಿನಿ. ಬಡವರಿಗಾಗಿ ಪುಕ್ಕಟ್ಟೆ ಶಾಲೆ, ಕಾಲೇಜು, ವೃದ್ಧಾಶ್ರಮ ಇತ್ಯಾದಿ ಇತ್ಯಾದಿ ನಡೆಸುತ್ತಾನೆ. ಮೇಲ್ಜಾತಿಯವರು ದಲಿತರ ಮೇಲೆ ದಾಳಿ ನಡೆಸಿದಾಗ ತಾನೇ ಹೋಗಿ ನಿಂತು ದಲಿತರ ರಕ್ಷಣೆಗೆ ನಿಲ್ಲುತ್ತಾ‌ನೆ. ಅವನ‌ ಸಾಮಾಜಿಕ ಕಾಳಜಿ ಎಷ್ಟು ತೀವ್ರವೆಂದರೆ ವೇಶ್ಯಾವಾಟಿಕೆಗಳಲ್ಲಿ ಸಿಕ್ಕಿಬಿದ್ದ ಹೆಣ್ಣುಮಕ್ಕಳನ್ನು ಕರೆತಂದು ತನ್ನ ಮಠದಲ್ಲಿರುವ ಹುಡುಗರಿಗೆ ಮದುವೆ ಮಾಡಿಸುತ್ತಾನೆ! ಜನ ಅವನನ್ನು ಆರಾಧಿಸಲು ಇಷ್ಟು ಸಾಲದೇ?

ಬಾಬಾ ನಿರಾಲಾ ಇಷ್ಟೇ ಆಗಿದ್ದರೆ ಸಮಸ್ಯೆ ಇರಲಿಲ್ಲ. ಇದೆಲ್ಲದರ ಜತೆ ಬಾಬಾಗೆ ಇನ್ನಷ್ಟು ಮುಖಗಳಿವೆ, ಆತನೇ ಪದೇ ಪದೇ ಹೇಳುವಂತೆ ಅವನದು ಒಂದು ರೂಪ, ಹಲವು ಸ್ವರೂಪ. ಆ ಹಲವು ಮುಖಗಳನ್ನು ಅತ್ಯಂತ ತಾಳ್ಮೆಯಿಂದ ಝಾ ಹರಡುತ್ತ ಹೋಗುತ್ತಾರೆ. ಮೊದಲನೇ ಸೀಜನ್ನಿಗೆ ಎಷ್ಟು ಬೇಕೋ ಅಷ್ಟನ್ನು ಹೇಳಿ ಎರಡನೇ ಸೀಜನ್ನಿಗೆ ಕಾದಿಟ್ಟುಕೊಂಡಿದ್ದಾರೆ. ಅಸಲಿಗೆ ಅವನು ಪೂರ್ಣ ರೂಪದಲ್ಲಿ ತನ್ನ ವಿಶ್ವರೂಪ ತೋರಬೇಕಿರುವುದು, ಅವನ ಮಠದ ಒಳಗಿನ ಒಗಟುಗಳು ಬಿಡಿಸಿಕೊಳ್ಳಬೇಕಿರುವುದು ಮುಂದೆ ಬರಬೇಕಿರುವ ಎರಡನೇ ಸೀಜನ್ನಿನಲ್ಲೇ. ಅಲ್ಲಿಯವರೆಗೆ ನಾವು ಕಾಯಲೇಬೇಕು.

ಆಶ್ರಮದ ಒಳಗೆ ಮತ್ತು ಹೊರಗೆ ಎಲ್ಲ ಅನಾಚಾರಗಳ ವಿರುದ್ಧ ಹೋರಾಡುವ ಪಾತ್ರಗಳೂ ಇವೆ. ಆದರೆ ಅವೆಲ್ಲ ಬಾಬಾ ಎದುರು ಜುಜುಬಿಗಳು. ಇಡೀ ವ್ಯವಸ್ಥೆಯ ಮೇಲೆ ಹಿಡಿತ ಹೊಂದಿರುವ, ಒಂದೇ ಒಂದು ಫೋನ್ ಕಾಲ್ ಮೂಲಕ ತನಗೆ ಬೇಕಾದ್ದನ್ನು ಮಾಡಿಕೊಳ್ಳಬೇಕಾದ ಬಾಬಾ ಎಲ್ಲಿ? ಕುಸ್ತಿ ಪೈಲ್ವಾನ್ ಆಗಲು ಹೊರಟು, ತಾನೇ ತಾನಾಗಿ ಬಂದು ಆಶ್ರಮದ ಖೆಡ್ಡಾದಲ್ಲಿ ಬೀಳುವ ದಲಿತ ಹುಡುಗಿಯೆಲ್ಲಿ? ಒಂದು ಪೋಸ್ಟ್ ಮಾರ್ಟಂ ರಿಪೋರ್ಟ್ ಪಡೆಯಲೂ ಸೀನಿಯರ್ ಗಳ ಪರ್ಮಿಷನ್ ಪಡೆಯಬೇಕಾದ ಒಬ್ಬ ಯಕಶ್ಚಿತ್ ಸಬ್ ಇನ್ಸ್ ಪೆಕ್ಟರ್, ಆತನ ಜತೆ ಬಂಡೆಯಂತೆ ನಿಲ್ಲುವ ಒಬ್ಬ ಪಿಸಿ, ಒಬ್ಬ ಹೆಣ ಕೊಯ್ಯುವ ಲೇಡಿ ಡಾಕ್ಟರ್, ಹೋದಹೋದಲ್ಲೆಲ್ಲ ಪೊಲೀಸರಿಂದ ಒದೆ ತಿನ್ನುವ ಒಬ್ಬ ಕೇಬಲ್ ಆಪರೇಟರ್, ಅಕ್ಕ ಕೊಲೆಯಾಗಿದ್ದಾಳೆ ಎಂದು ಗೊತ್ತು ಮಾಡಿಕೊಂಡ ಕಾರಣಕ್ಕೇ ಜೀವಭಯದಲ್ಲಿ ನರಳುತ್ತಿರುವ ತಂಗಿ…. ಇವೇ ಇಲ್ಲಿ ಪ್ರತಿರೋಧದ ಶಕ್ತಿಗಳು! ಆದರೆ ಸಾಮಾನ್ಯ ಮನುಷ್ಯರೂ ಸಿಡಿದುಬಿದ್ದರೆ ಏನಾಗಬಹುದು ಎಂಬ ಸಣ್ಣ ಝಲಕ್ಕನ್ನು ಮೊದಲ ಎಪಿಸೋಡಿನ ಮೊದಲ ದೃಶ್ಯದಲ್ಲೇ ನಿರ್ದೇಶಕ ತೋರಿಸಿದ್ದಾರೆ. ಹುಲಿಯ ಆಕ್ರಮಣಕ್ಕೆ ಸಿಲುಕಿದ ಜಿಂಕೆಯೂ ಸಾಯುವ ಮುನ್ನ ಒಂದು ಪುಟ್ಟ ಏಟು ಕೊಡುವುದಿಲ್ಲವೇ? ಈ ಸಣ್ಣ ಸಣ್ಣ ಮನುಷ್ಯರು ಬಾಬಾ ಎದುರಿಗೆ ತಿರುಗಿ ನಿಲ್ಲುತ್ತಾರೆ. ಕೊನೆಗೆ ಐದಾರು ವರ್ಷಗಳ ಹಿಂದೆ ಕಾಡಿನಲ್ಲಿ ಭೀಕರವಾಗಿ ಕೊಲೆಗೀಡಾದ ಹೆಣ್ಣುಮಗಳ ಅಸ್ಥಿಪಂಜರವೂ ಎದ್ದುನಿಂತು ನ್ಯಾಯಕ್ಕಾಗಿ ಆಗ್ರಹಿಸುತ್ತದೆ!

ಬಾಬಿ ಡಿಯೋಲ್ ಇಲ್ಲಿ ಬಾಬಾ ನಿರಾಲಾ ಆಗಿ ಅವತರಿಸಿದ್ದಾರೆ‌. ಒಮ್ಮೊಮ್ಮೆ ಅವರು ಮಾತನಾಡುತ್ತಿದ್ದರೆ ಸನ್ನಿ ಡಿಯೋಲ್ ಧ್ವನಿಯನ್ನೇ ಕೇಳಿಸಿಕೊಂಡಂತಾಗುತ್ತದೆ. ಹಲವು ರೂಪಗಳ ಬಾಬಾನನ್ನು ಬಾಬಿ ಡಿಯೋಲ್ ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ. ಹತ್ತಾರು ಗಂಟೆ ಕ್ಯಾಮೆರಾ ಮುಂದೆ ನಿಂತ ಪರಿಣಾಮ ಕೆಲವು ದೃಶ್ಯಗಳಲ್ಲಿ ಸೊರಗಿದಂತೆ ಕಾಣಿಸುತ್ತಾರೆ. ಆದರೆ ಅವರ ನಿಜವಾದ ಅವತಾರ ನೋಡಲು ಎಂಟು-ಒಂಭತ್ತನೇ ಎಪಿಸೋಡುಗಳವರೆಗೆ ಕಾಯಬೇಕು. ಅಲ್ಲಿ ಬಾಬಿ ಡಿಯೋಲ್ ನೂರಕ್ಕೆ ನೂರು ಮಾರ್ಕ್ಸ್ ಪಡೆದಿದ್ದಾರೆ. ಮಿಕ್ಕಂತೆ ಸಬ್ ಇನ್ಸ್ ಪೆಕ್ಟರ್ ಉಜಾಗರ್ ಸಿಂಗ್, ಕುಸ್ತಿ ಪೈಲ್ವಾನ್ ಪಮ್ಮಿ, ಪಿಸಿ ಸಾಧು, ವೇಶ್ಯೆ ಬಬಿತಾ ತಮ್ಮತಮ್ಮ ಪಾತ್ರಗಳನ್ನು ಜೀವಿಸಿಬಿಟ್ಟಿದ್ದಾರೆ. ನೆಗೆಟಿವ್ ಕ್ಯಾರೆಕ್ಟರ್ ಗಳು ಇದ್ದಕ್ಕಿದ್ದಂತೆ ಬದಲಾಗಿ ನಿಮ್ಮ ನೆಚ್ಚಿನ ಪಾತ್ರಗಳಾಗೋದು, ಹೀರೋ ಅಂದುಕೊಂಡವರು ವಿಲನ್ ಗಳಾಗೋದು ಝಾ ಸಿನಿಮಾಗಳಲ್ಲಿ ಮಾಮೂಲಿ. ಇಲ್ಲೂ ಉಜಾಗರ್ ಸಿಂಗ್ ಅಂಥದ್ದೇ ಪಾತ್ರವಾಗಿ ಇಷ್ಟವಾಗುತ್ತದೆ.

ವೆಬ್ ಸೀರೀಸ್ ಗಳಲ್ಲಿ ಒಂದಷ್ಟು ಅಡಲ್ಟ್ ಕಂಟೆಂಟ್ ಇರಲೇಬೇಕು ಎಂಬುದು ಸಂಪ್ರದಾಯವಾದಂತಾಗಿ, ಝಾ ಕೂಡ ಅಲ್ಲಲ್ಲಿ ಅಂಥವನ್ನು ತುರುಕಿದ್ದಾರೆ. ಇಂಥ ಸೀನ್ ಗಳನ್ನು ಅವರು passionate ಆಗಿಯೇ ಮಾಡಿದ್ದಾರೆ. ಈ ಸೀನ್ ಗಳು ಇಲ್ಲದಿದ್ದರೂ ನಡೆಯುತ್ತಿತ್ತು. ಆಶ್ರಮದ ಒಳಗಿನ ದೃಶ್ಯಗಳು, ಪದೇ ಪದೇ ಕಿವಿಗೆ ಬಾರಿಸುವ ಜಪ್ ನಾಮ್, ಜೈಕಾರಗಳು ಅಜೀರ್ಣವಾಗುವಷ್ಟು ಹೆಚ್ಚಾಗಿದೆ.

ಇಷ್ಟಾದ ಮೇಲೂ ಪ್ರಕಾಶ್ ಝಾ ಕುರಿತು ನನಗಿರುವ ದೊಡ್ಡ ತಕರಾರು, ಮೀಸಲಾತಿ ಕುರಿತ ಅವರ statement ಗಳು. ದಲಿತರ ಮೇಲಿನ ದೌರ್ಜನ್ಯ ಗಳ ವಿರುದ್ಧ ಝಾ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಾರೆ. ಮದುವೆಯ ಮೆರವಣಿಗೆಯಲ್ಲಿ ಕುದುರೆ ಮೇಲೆ ಹತ್ತಿದ ಮದುಮಗನನ್ನು ಸಾಯುವಂತೆ ಹೊಡೆಯುತ್ತಾರೆ ಮೇಲ್ಜಾತಿ ಜನರು. ಅದನ್ನು ಮೊದಲ ಬಾರಿ ತೆರೆಯ ಮೇಲೆ ಪರಿಣಾಮಕಾರಿಯಾಗಿ ತಂದಿದ್ದಾರೆ ಝಾ. ಜತೆಗೆ ಗಿರಿಜಾ ಮೀಸೆ ಬಿಟ್ಟ ಕಾರಣಕ್ಕೆ ಚಾಕುವಿನಿಂದ ಇರಿಯಲ್ಪಟ್ಟ ದಲಿತ ಯುವಕನ ಕಥೆಯೂ ಇಲ್ಲಿದೆ. ದಲಿತಳೆಂಬ ಕಾರಣಕ್ಕೆ ಕುಸ್ತಿ ನ್ಯಾಷನಲ್ಸ್ ಗೆ ಆಯ್ಕೆಯಾಗಬೇಕಿದ್ದ ದಲಿತ ಯುವತಿಗೆ ಆಗುವ ಅನ್ಯಾಯದ ಹಸಿಹಸಿ ಚಿತ್ರಣವೂ ಇಲ್ಲಿದೆ. ಎಲ್ಲ ಸರಿ, ಮೀಸಲಾತಿಯ ಕುರಿತು ಮುಖ್ಯ ಪಾತ್ರವೊಂದು ಆಡುವ ಮಾತುಗಳು ಪ್ರಕಾಶ್ ಝಾ ಅವರದೇ ಮಾತುಗಳಾ ಅಥವಾ ಮೀಸಲಾತಿ ಕುರಿತ ಮೇಲ್ಜಾತಿಯ ಜನರ ಕರುಬುವಿಕೆಯನ್ನು ಯಥಾವತ್ತಾಗಿ ಚಿತ್ರಿಸುವ ಪ್ರಯತ್ನ ಮಾತ್ರವೇ? ಝಾ ಅವರೇ ಹೇಳಬೇಕು.

ಕೊನೇದಾಗಿ ಸೀರೀಸ್ ನೋಡಿದ ಮೇಲೆ ಇದನ್ನು ಬ್ಯಾನ್ ಮಾಡಿ ಎಂದು ಭಕ್ತರು ಬಡ್ಕೊಬೇಕಿತ್ತಲ್ವಾ ಅನಿಸುತ್ತದೆ, ಈಗಾಗಲೇ ಬಡ್ಕೊಳ್ಳಕ್ಕೆ ಶುರು ಮಾಡಿದ್ದಾರೆ ಎಂಬುದು ನಂತರ ಗೊತ್ತಾಯಿತು. ಅವರು ಬಡ್ಕೊಂಡಷ್ಟೂ ಇಂಥ ಸಿನಿಮಾ, ಸೀರೀಸ್ ಗಳು ಹೆಚ್ಚು ಜನಪ್ರಿಯವಾಗುವ ಸಾಧ್ಯತೆ ಹೆಚ್ಚು.

ಬಿಡುವಾಗಿದ್ದರೆ, ಸಾಧ್ಯವಾದರೆ ಆಶ್ರಮ್ ವೆಬ್ ಸೀರೀಸ್ ನೋಡಿ. ಇದು ಎಂ ಎಕ್ಸ್ ಪ್ಲೇಯರ್ ನಲ್ಲಿ ಪುಕ್ಕಟೆಯಾಗಿ ನೋಡಬಹುದು.

Please follow and like us:
error