ಆರ್‌.ಆರ್‌ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ರವಿ ಪತ್ನಿ ಕುಸುಮಾ-ಸಿದ್ದರಾಮಯ್ಯ

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಸ್ಪರ್ಧೆ ಮಾಡಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ತಮ್ಮ ಟಿಕೆ ಲೇಔಟ್ ನಿವಾಸದಲ್ಲಿ ಮಾಧ್ಯಮದವರೂಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ ಅವರ ಹೆಸರನ್ನು ಮಾತ್ರ ಹೈಕಮಾಂಡಿಗೆ ಕಳಿಸಲಾಗಿದ್ದು, ಇಂದು ಸಂಜೆ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದಿದ್ದಾರೆ.

ಕುಸುಮಾ ಪಕ್ಷದ ಅಧಿಕೃತ ಅಭ್ಯರ್ಥಿ ಆಗಿದ್ದು, ಅವರನ್ನು ಯಾರು ವಿರೋಧ ಮಾಡುತ್ತಾರೊ ಬಿಡುತ್ತಾರೊ ಗೊತ್ತಿಲ್ಲ, ಅವರ ಪರ ನಾವೆಲ್ಲರೂ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ಕಳೆದ ಭಾನುವಾರವಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಕುಸುಮಾ ಅವರಿಗೆ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎಂದು ಎಲ್ಲಡೆ ಸುದ್ದಿ ಹರಡಿದ್ದವು, ಇಂದು ಸಿದ್ದರಾಮಯ್ಯ ಸ್ಪಷ್ಟಪಡಿಸುವುದರ ಮೂಲಕ ಅದು ನಿಜವಾಗಿದೆ.

ಕುಸುಮಾ ಅವರ ಪತಿ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಹಿಂದೆ ಕಾಂಗ್ರೆಸ್ ಸರ್ಕಾರ ಇತ್ತು ಎಂದು ಬಿಜೆಪಿ ಆರೋಪಿಸಿದ್ದವು. ಎಲ್ಲಾ ಪಕ್ಷಗಳು ಉಪಚುನಾವಣೆಗೆ ತಯಾರಿಯನ್ನು ನಡೆಸುತ್ತಿದ್ದು ನವೆಂಬರ್ 3 ರಂದು ಉಪ ಚುನಾವಣೆ ಮತದಾನ ನಡೆಯಲಿದೆ.

Please follow and like us:
error