ಆರ್‌ಟಿಇ ಶುಲ್ಕ ಮರುಪಾವತಿ ಕುರಿತು ತಾಲ್ಲೂಕುವಾರು ಮಾಹಿತಿ ನೀಡಿ: ಸಂಗಣ್ಣ ಕರಡಿ


ಕೊಪ್ಪಳ  : ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಮರುಪಾವತಿ ಕುರಿತ ಮಾಹಿತಿಯನ್ನು ತಾಲ್ಲೂಕುವಾರು ವಿಂಗಡಿಸಿ, ಬಾಕಿ ಉಳಿದ ಶಾಲೆಗಳ ಪಟ್ಟಿಯನ್ನು ಕಾರಣ ಸಹಿತ ವರದಿ ಸಲ್ಲಿಸಿ ಎಂದು ಸಂಸದ ಸಂಗಣ್ಣ ಕರಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಇಂದು ನಡೆದ ಸಮಗ್ರ ಶಿಕ್ಷಣ ಕರ್ನಾಟಕ/ಮಧ್ಯಾಹ್ನ ಬಿಸಿಯೂಟ/ಸಾಕ್ಷರ ಭಾರತ ಯೋಜನೆಗಳ 2019-20 ನೇ ಸಾಲಿನ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಗ್ರ ಶಿಕ್ಷಣ ಅಭಿಯಾನದಡಿ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಆರ್‌ಟಿಇ ಶುಲ್ಕ ಮರುಪಾವತಿ ಕುರಿತು ಇಲಾಖೆ ನೀಡಿರುವ ಮಾಹಿತಿಯಲ್ಲಿ ಸಮರ್ಪಕ ವಿವರಣೆಗಳಿಲ್ಲ. ಜಿಲ್ಲೆಯಲ್ಲಿ ಒಟ್ಟು 276 ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಅವುಗಳಲ್ಲಿ ಯಾವ ಶಾಲೆಗೆ ಪೂರ್ಣ ಮರುಪಾವತಿ ಮಾಡಲಾಗಿದೆ, ಬಾಕಿ ಉಳಿದ ಶಾಲೆಗಳೆಷ್ಟು ಎಂಬ ಕುರಿತು ಶಾಲಾವಾರು ಹಾಗೂ ತಾಲ್ಲೂಕುವಾರು ಮಾಹಿತಿಯ ವರದಿಯನ್ನು ಸಲ್ಲಿಸಿ. ಕೆಕೆಆರ್‌ಡಿಬಿ ಇಂದ ಶಾಲಾ ಕಟ್ಟಡಗಳ ನಿರ್ಮಾಣ, ದುರಸ್ಥಿಗೆ ಅನುದಾನ ಬಿಡುಗಡೆಗೊಂಡಿದ್ದರೂ ಇದುವರೆಗೆ 2017-18 ನೇ ಸಾಲಿನ ಕಾಮಗಾರಿಗಳನ್ನು ಪುರ್ಣಗೊಳಿಸಿಲ್ಲ. ಬಹುತೇಕ ಶಾಲಾ ಮುಖ್ಯೋಪಾಧ್ಯಾಯರಿಗೆ ತಮ್ಮ ಶಾಲೆಯಲ್ಲಿ ಕಾಮಗಾರಿ ನಡೆಸುತ್ತಿರುವ ಏಜೆನ್ಸಿ ಕುರಿತು ಮಾಹಿತಿಯೇ ತಿಳಿದಿಲ್ಲ. ಚುನಾಯಿತ ಪ್ರತಿನಿಧಿಗಳು ಕಾಮಗಾರಿ ಪರಿಶೀಲನೆಗೆ ತೆರಳಿದಾಗ ಶಾಲಾ ಮುಖ್ಯೋಪಾಧ್ಯಾಯರಿಂದ ಸಮರ್ಪಕ ಮಾಹಿತಿ ದೊರೆಯುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರಿಗೆ ಈ ಕುರಿತು ಪತ್ರ ಬರೆದು ಜನಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿದಾಗ ಸೂಕ್ತ ಮಾಹಿತಿ ನೀಡುವಂತೆ ಸೂಚನೆ ನೀಡಿ ಹಾಗೂ ವರ್ಷಗಳ ಹಿಂದಿನ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿರದ ಬಗ್ಗೆ ಸೂಕ್ತ ಕಾರಣಗಳೊಂದಿಗೆ ವಾರದೊಳಗೆ ವರದಿ ನೀಡಿ. ಶಿಕ್ಷಣ ತಜ್ಞರ ವರದಿ ಆಧಾರದಲ್ಲಿ ಶಾಲೆಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಮಾರ್ಗಸೂಚಿಯನುಸಾರ ಉನ್ನತೀಕರಿಸಿದ ಶಾಲೆಗಳಿಗೆ, ಅಗತ್ಯ ವಿದ್ಯಾರ್ಹತೆ ಮತ್ತು ಅನುಭವವಿರುವ ಶಿಕ್ಷಕರನ್ನು ನೇಮಕ ಮಾಡಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಅವರು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾತನಾಡಿ, ಶಾಲಾ ಉನ್ನತೀಕರಣ ವಿಷಯದಲ್ಲಿ ಸಂಬAಧಿಸಿದ ಅಧಿಕಾರಿಗಳು ನಿಗದಿತ ಮಾರ್ಗಸೂಚಿ ಅನುಸರಿಸುತ್ತಿಲ್ಲ. ಮಕ್ಕಳ ಸಂಖ್ಯೆಯನುಸಾರ ಶಿಕ್ಷಕರ ಲಭ್ಯತೆ ಇರಬೇಕು. ಆದರೆ ಶಿಕ್ಷಕರ ಕೊರತೆಯ ಕಾರಣದಿಂದ ಉನ್ನತ ಉದ್ದೇಶಕ್ಕಾಗಿ ಆರಂಭವಾದ ಶಾಲಾ ಉನ್ನತೀಕರಣ ಯೋಜನೆಯು ಸಮರ್ಪಕವಾಗಿ ಜಾರಿಗೆ ಬರದೆ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗುತ್ತಿದೆ. ಯೋಜನೆಗಳ ಸಮರ್ಪಕ ಜಾರಿಯಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲಾ ಮಟ್ಟದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಾಗದೆ ಅವರ ಪ್ರತಿನಿಧಿಗಳನ್ನು ಕಳುಹಿಸುತ್ತಾರೆ. ಅಂತಹ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿದು, ಸೂಕ್ತ ಕ್ರಮ ಜರುಗಿಸಿ ಎಂದು ಸಂಬAಧಿಸಿದ ಅಧಿಕಾರಿಗೆ ಹೇಳಿದರು.
ಯಲಬುರ್ಗಾ ಶಾಸಕ ಹಾಲಪ್ಪ ಬಸಪ್ಪ ಆಚಾರ್ ಮಾತನಾಡಿ, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕುರಿತ ಮಾಹಿತಿ ಸರಿಯಾಗಿಲ್ಲ. ಸರಿಯಾದ ಕ್ರಮದಲ್ಲಿ ಸಮೀಕ್ಷೆ ಮಾಡಿದರೆ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಟ ನೂರು ಮಕ್ಕಳು ಸಿಗುತ್ತಾರೆ. ಅಧಿಕಾರಿಗಳು ಬಾಯಿಲೆಕ್ಕ ಹೇಳುವುದನ್ನು ಬಿಟ್ಟು ವಾಸ್ತವಾಂಶಗಳನ್ನು ಪಟ್ಟಿ ಮಾಡಿ ವರದಿ ನೀಡಬೇಕು. ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ ಅವರಿಗೆ ಶಿಕ್ಷಣ ನೀಡಬೇಕು. ಶಾಲಾ ಹಾಜರಾತಿ ದಾಖಲಾತಿ ಅನುಸಾರ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ನಡೆಸಬೇಕು. ಜಿಲ್ಲೆಯಲ್ಲಿರುವ 5 ಕೆ.ಜಿ.ಬಿ.ವಿ(ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ) ಶಾಲೆಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವಂತಾಗಿದೆ. ಶಿಕ್ಷಕರ ಕೊರತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ನೀಗಿಸಿ ಅಲ್ಲಿನ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, 2019-20 ನೇ ಸಾಲಿನಲ್ಲಿ ಎರಡನೇ ಜೊತೆ ಸಮವಸ್ತçವನ್ನು ಅವಧಿ ಮುಗಿದ ನಂತರ ವಿತರಿಸಿದ ಕುರಿತ ಆರೋಪ ಕೇಳಿ ಬಂದಿದ್ದು, ಒಂದು ವಾರದೊಳಗೆ ಈ ಕುರಿತು ಶಾಲಾವಾರು ಮಾಹಿತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸಿ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಸಮಗ್ರ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ, ಸಮಗ್ರ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ, ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error