ಆಯುಷ್ ವೈದ್ಯರ ಸಾಮೂಹಿಕ ರಾಜೀನಾಮೆ ಗಂಭೀರವಾಗಿ ಪರಿಗಣಿಸಿ-ಹೆಚ್.ಡಿ,ಕುಮಾರಸ್ವಾಮಿ

ವೇತನ ತಾರತಮ್ಯ ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯದ 2000 ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಅವರೊಂದಿಗೆ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸುವಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ  ಒತ್ತಾಯಿಸಿದ್ದಾರೆ.

ಕರೋನಾ ನಿಯಂತ್ರಣ ಮತ್ತು ಚಿಕಿತ್ಸೆಗೆ ಆಯುಷ್ ವೈದ್ಯರಿಗೆ ಮಾಸಿಕ 20000 ರೂ. ಅಲೋಪತಿ ವೈದ್ಯರಿಗೆ ಮಾಸಿಕ 60000 ರೂ. ವೇತನ ನೀಡುತ್ತಿರುವುದು ತಾರತಮ್ಯ ಎಂದು ಆಯುಷ್ ವೈದ್ಯರು ರಾಜಿನಾಮೆ ನೀಡಿದ್ದಾರೆ. ಈಗಾಗಲೇ ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಆಯುಷ್ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಬೇಕು.

ಯಾವುದೇ ಕಾರಣಕ್ಕೂ ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ಹೊಣೆ ಗೇಡಿತನ ಪ್ರದರ್ಶಿಸಬಾರದು. ಅಲೋಪತಿ ಮತ್ತು ಆಯುಷ್ ವೈದ್ಯರ ನಡುವಣ ಅಜಗಜಾಂತರ ವೇತನ ತಾರತಮ್ಯ ಸಹಜವಾಗಿಯೇ ಕಂದಕ ಸೃಷ್ಟಿಸಿದೆ. ಸರ್ಕಾರ ಕೂಡಲೇ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕರೋನ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಬಲು ಕಷ್ಟವಾಗುತ್ತದೆ..

ಕೊರೋನಾ ಸೋಂಕು ಹಬ್ಬಿದ ನಂತರ ಲಾಕ್ಡೌನ್ ಮತ್ತು ವಹಿವಾಟುಗಳಿಲ್ಲದೆ ವಿಶೇಷವಾಗಿ ಸಣ್ಣ, ಮಧ್ಯಮ ಕೈಗಾರಿಕೆಗಳು ಬದುಕುಳಿಯುವುದೇ ಕಷ್ಟವಾಗಿದೆ. MSME ಗಳು ಕೇಂದ್ರದ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂಗಡ ಹಣ ಪಾವತಿ ಮಾಡಬೇಕಿಲ್ಲ. ಆದರೆ ರಾಜ್ಯ ಸರ್ಕಾರದಲ್ಲಿ ಮಾತ್ರ ಇಂತಹ ವಿನಾಯಿತಿ ಇಲ್ಲ.

ರಾಜ್ಯ ಸರ್ಕಾರ MSME ಗಳಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವಿನಾಯಿತಿ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚುಮಂದಿ MSME ಉದ್ದಿಮೆದಾರರು ನೊಂದಾಯಿಸಿಕೊಂಡಿದ್ದು, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಬೆಂಗಳೂರಿನ ಉದ್ಯಮಿಗಳು.

ರಾಜ್ಯ ಸರ್ಕಾರ ಕೇಂದ್ರದ ರೀತಿ ಸಣ್ಣ,ಮಧ್ಯಮ ಉದ್ದಿಮೆದಾರರಿಗೆ ಸಹಾಯಹಸ್ತ ಚಾಚಿದರೆ ಕಷ್ಟಕ್ಕೆ ಸಿಲುಕಿರುವ MSME ಉದ್ದಿಮೆದಾರರು ತುಸು ಉಸಿರಾಡಲು ಸಾಧ್ಯವಾಗುತ್ತದೆ. ಇವರೊಂದಿಗೆ ಸುಮಾರು 40 ಲಕ್ಷಕ್ಕೂ ಹೆಚ್ಚು ಉದ್ಯೋಗಸ್ಥರಿದ್ದಾರೆ ರಾಜ್ಯಸರ್ಕಾರ ತಡಮಾಡದೆ ತಕ್ಷಣವೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವಂತೆ  ಒತ್ತಾಯಿಸಿದ್ದಾರೆ

Please follow and like us:
error