fbpx

ಆಪರೇಷನ್, ಸರ್ಜರಿ ಇದರಲ್ಲಿ ಸಿಎಂ ಬಿಎಸ್‌ವೈ ಅವರೇ ಸ್ಪೆಷಲಿಸ್ಟ್-ಸಿದ್ದರಾಮಯ್ಯ

ಬೆಂಗಳೂರು, ನ.12: ‘‘ನಾವಾಗಿಯೇ ಹಣ, ಅಧಿಕಾರದ ಆಮಿಷ ಒಡ್ಡಿ ಬೇರೆ ಪಕ್ಷದವರನ್ನು ನಮ್ಮ ಪಕ್ಷಕ್ಕೆ ಕರೆತಂದರೆ ಅದು ‘ಆಪರೇಷನ್’ ಆಗುತ್ತದೆ. ಆದರೆ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಅವರಾಗಿಯೇ ಬಂದರೆ ಅದು ಆಪರೇಷನ್ ಹೇಗಾಗುತ್ತದೆ? ಈ ಆಪರೇಷನ್, ಸರ್ಜರಿ ಇದರಲ್ಲಿ ಸಿಎಂ ಯಡಿಯೂರಪ್ಪ ಅವರೇ ಸ್ಪೆಷಲಿಸ್ಟ್. ನಾನು ಡಾಕ್ಟರೂ ಅಲ್ಲ, ನನಗೆ ಯಾವ ರೋಗಿಗಳು ಗೊತ್ತಿಲ್ಲ.’’

ಹೀಗೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಬಿಜೆಪಿಯವರ ಬಳಿ ಹಣವಿದೆ, ಅಧಿಕಾರ ಹಿಡಿಯಲು ಆಪರೇಷನ್ ಕಮಲವನ್ನೂ ಮಾಡ್ತಾರೆ, ಅನೈತಿಕ ರಾಜಕಾರಣವನ್ನೂ ಮಾಡ್ತಾರೆ. ಮೌಲ್ಯಾಧಾರಿತ ರಾಜಕಾರಣ ಅಂದ್ರೆ ಏನು ಅಂತಲೇ ಅವರಿಗೆ ಗೊತ್ತಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಹಿಂಬಾಗಿಲ ರಾಜಕಾರಣಕ್ಕೆ ಬಿಜೆಪಿಯವರು ಹೆಸರುವಾಸಿ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಉಪ ಚುನಾವಣೆಯಲ್ಲಿ ನಮ್ಮಗುರಿ ಕನಿಷ್ಠ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು. 15 ಸ್ಥಾನ ಗೆದ್ದರೂ ಆಶ್ಚರ್ಯವಿಲ್ಲ. ಸದ್ಯ ಬಾಕಿ ಇರುವ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ನಂತರ ಹೈಕಮಾಂಡ್ ಜೊತೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸಮ್ಮಿಶ್ರ ಸರಕಾರದ ಕುರಿತಂತೆ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಹೈಕಮಾಂಡ್ ಸೂಚಿಸಿತ್ತು. ಹೈಕಮಾಂಡ್ ಆದೇಶವನ್ನು ನಾನು ಪಾಲಿಸಿದೆ. ಇದರಲ್ಲಿ ನನ್ನ ಪಾತ್ರ ಇಷ್ಟೆ. ಹೈಕಮಾಂಡ್ ಜೊತೆ ಚರ್ಚಿಸಿದ್ದು, ಸರ್ಕಾರ ರಚಿಸಿದ್ದು ದೇವೇಗೌಡರು. ನಾನು ಯಾರ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Please follow and like us:
error
error: Content is protected !!