ಆಧುನಿಕ ಶಿಕ್ಷಣದ ಮೊದಲ ಶಿಕ್ಷಕಿ  ಸಾವಿತ್ರಿಬಾಯಿ ಪುಲೆ

19ನೇ ಶತಮಾನದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯನ್ನು ತಂದಂತಹ ಸಾವಿತ್ರಿಬಾಯಿ ಫುಲೆಯವರನ್ನು ಆಧುನಿಕ ಶಿಕ್ಷಣದ ತಾಯಿ ಎಂದೇ ಕರೆಯುತ್ತಾರೆ. 1818ರಲ್ಲಿ ಪೇಶ್ವೆಗಳ ರಾಜ್ಯಭಾರ ಕೊನೆಗೊಂಡು ಬ್ರಿಟಿಷರ ಆಡಳಿತ ಶುರುವಾಗಿತ್ತು. ಬ್ರಿಟೀಷರು ಅಧಿಕಾರ ವಹಿಸಿಕೊಂಡು ಹದಿಮೂರು ವರ್ಷಗಳ ನಂತರ 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್‌ನಲ್ಲಿ ಹುಟ್ಟಿದ ಸಾವಿತ್ರಿಬಾಯಿಯವರು 184 ವರ್ಷಗಳ ಹಿಂದೆ ದಮನಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣವನ್ನು ಕೊಟ್ಟಂತಹ ಮೊದಲ ಶಿಕ್ಷಕಿ. ಒಂಬತ್ತನೇ ವರ್ಷದಲ್ಲಿ ಮದುವೆಯಾದ ಸಾವಿತ್ರಿಬಾಯಿಯವರು ಮುಂದೆ ಆಧುನಿಕ ಫೆಮಿನಿಸಂ ಚಳವಳಿಯ ತಾಯಿಯೆಂದು ಗುರುತಿಸಲ್ಪಡುತ್ತಾರೆ. 1846-47ರಲ್ಲಿ ಗೆಳತಿ ಫಾತಿಮಾ ಶೇಕ್‌ರೊಂದಿಗೆ ಜೋತಿಬಾರವರ ಒತ್ತಾಸೆಯ ಮೇರೆಗೆ ಅಹ್ಮದನಗರದಲ್ಲಿ ಶಿಕ್ಷಕರ ತರಬೇತಿ ಪಡೆಯುತ್ತಾರೆ. ಮುಂದೆ ಸಾವಿತ್ರಿಬಾಯಿಯವರ ನೆರಳಿನಂತೆ ಅವರ ಸ್ನೇಹಿತೆಯಾಗಿ ಜೊತೆಗಿರುತ್ತಾರೆ ಫಾತಿಮ ಶೇಕ್.

ದಲಿತ ಚಿಂತಕರಾದ ಮುಖೇಶ್ ಮಾನಸ್ ತಮ್ಮ ಲೇಖನದಲ್ಲಿ “ಈ ದೇಶದ ಶಿಕ್ಷಕಿಯರು ಇಂದಿನ ದಿನ ತಮ್ಮ ಬಗ್ಗೆ ಹೆಮ್ಮೆಯಿಂದ ಬೀಗುತ್ತಾರೆ. ಏಕೆಂದರೆ ರಾಜಕಾರಣಿಗಳು, ಸರ್ಕಾರ, ಜನತೆ ಅವರನ್ನು ಗೌರವಿಸುತ್ತಾರೆ. ಶಿಕ್ಷಣ ಕೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಪದಕಗಳನ್ನು ನೀಡುತ್ತಾರೆ. ಆದರೆ ಶಿಕ್ಷಕರ, ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಬಗೆಯಲ್ಲಿ ಕಾಣಿಕೆಯನ್ನು ನೀಡದಂತಹ ವಿದ್ವಾಂಸರೊಬ್ಬರ ಹೆಸರಿನಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವಿದ್ವಾಂಸರು ಅಂಚಿನಲ್ಲಿ ಬದುಕುತ್ತಿರುವ ತಳಸಮುದಾಯಗಳ ಶಿಕ್ಷಣದ ಕುರಿತಾಗಿ ಚಿಂತಿಸಿದ್ದೂ ಶೂನ್ಯ. ಆದರೆ ಮಹಿಳೆಯರ, ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿ ಚಳವಳಿಯನ್ನು ಮಾಡಿದ ಸಾವಿತ್ರಿಬಾಯಿ ಫುಲೆಯವರನ್ನು ಆಧುನಿಕ ಶಿಕ್ಷಣದ ಮೊದಲ ಶಿಕ್ಷಕಿ ಎಂದು ಇಂದಿನ ದಿನಗಳಲ್ಲಿ ಅಧಿಕೃತವಾಗಿ ಗುರುತಿಸುತ್ತಿದ್ದಾರೆ” ಎಂದು ಬರೆದಿದ್ದಾರೆ.

ಪತ್ರಕರ್ತೆ ಮ್ರಿದು ವರ್ಮ “ಇಂದು ಫ್ಯಾಷನ್ ಆಗಿರುವ ಸ್ತ್ರೀ ವಿಮೋಚನೆ 150 ವರ್ಷಗಳ ಹಿಂದೆ ಭಾರತದ ಐಕಾನ್ ಆಗಿದ್ದ ಸಾವಿತ್ರಿ ಬಾಯಿಯವರಿಗೆ ನಿಜವಾದ ಅರ್ಥದ ಅರಿವಾಗಿತ್ತು” ಎಂದು ಬರೆಯುತ್ತಾರೆ.

ಮಹಿಳೆಯರ ಹಕ್ಕುಗಳಿಗಾಗಿ ನಿರಂತರವಾಗಿ ಚಳವಳಿಗಳನ್ನು ಸಂಘಟಿಸಿದ ಸಾವಿತ್ರಿಬಾಯಿಯವರು 1848ರಲ್ಲಿ ಪುಣೆಯ ನಾರಾಯಣಪೇಟೆಯ ಬಿಂದೇವಾಡದಲ್ಲಿ ಪತಿ ಜೋತಿಬಾರೊಂದಿಗೆ ಕೈಜೋಡಿಸಿ ಮೊದಲ ಬಾರಿಗೆ ಬಾಲಕಿಯರ ಶಾಲೆಯನ್ನು ಪ್ರಾರಂಭಿಸಿದರು. 1851ರ ವೇಳೆಗೆ ಐದನೂರು ಬಾಲಕಿಯರನ್ನೊಳಗೊಂಡಂತಹ ಮೂರು ಬಾಲಕಿಯರ ಶಾಲೆಗಳನ್ನು ನಡೆಸುತ್ತಾರೆ. ಇಂದು ಸರ್ವ ಶಿಕ್ಷಣ ಅಭಿಯಾನ, ಶಿಕ್ಷಣ ಹಕ್ಕು ಕಾಯ್ದೆ, ಬಿಸಿಯೂಟದ ಸರ್ಕಾರಿ ಯೋಜನೆಗಳನ್ನು ಕ್ರಾಂತಿಕಾರಿಗಳೆಂದೇ ಕೊಂಡಾಡಲಾಗುತ್ತದೆ. ಆದರೆ 150 ವರ್ಷಗಳ ಹಿಂದೆ ಸಾವಿತ್ರಿಬಾಯಿಯವರು ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು. ಸ್ಪರ್ಧೆಗಳಲ್ಲಿ ಗೆಲ್ಲುತ್ತಿದ್ದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಸ್ವೀಕರಿಸುವುದರ ಬದಲಾಗಿ ತಮ್ಮ ಶಾಲೆಗಳಿಗೆ ಗ್ರಂಥಾಲಯಗಳನ್ನು ಕೊಡಲಿಕ್ಕೆ ಕೇಳಿರೆಂದು ಬೋಧಿಸುತ್ತಿದ್ದರು. ಪೋಷಕರು-ಶಿಕ್ಷಕರ ನಡುವೆ ನಿಯಮಿತವಾಗಿ ಮಾತುಕತೆಗಳನ್ನು ಆ ಕಾಲದಲ್ಲೇ ಜಾರಿಗೊಳಿಸಿದ್ದರು. ಇವರ ಈ ಶಿಕ್ಷಣದ ಮಾದರಿಯ ಯಶಸ್ಸು ಎಷ್ಟಿತ್ತೆಂದರೆ ಇವರ ವಿದ್ಯಾರ್ಥಿನಿ ಹನ್ನೊಂದು ವರ್ಷದ ಮುಕ್ತಾಬಾಯಿ ಬರೆದ “ಮಹರ್, ಮಾಂಗ್ ಸಮುದಾಯದ ದುಃಖ, ದುಮ್ಮಾನಗಳು” ಎನ್ನುವ ಕ್ರಾಂತಿಕಾರಿ ಪ್ರಬಂಧವೇ ಸಾಕ್ಷಿ. ಇದು ಇಂದಿಗೂ ಅತ್ಯಂತ ಮಹತ್ವದ ಪ್ರಬಂಧ.

ಸಾವಿತ್ರಿಬಾಯಿಯವರು 1868ರಲ್ಲಿ ಬರಗಾಲದ ಸಂದರ್ಭದಲ್ಲಿ ತಮ್ಮ ಮನೆಯ ನೀರಿನ ತೊಟ್ಟಿಗಳನ್ನು ದಲಿತರಿಗೆ ಉಪಯೋಗಿಸಲು ಬಿಟ್ಟುಕೊಟ್ಟರು. 1877ರಲ್ಲಿ ಪಶ್ಚಿಮ ಮಹಾರಾಷ್ಟ್ರದ ಭಾಗಗಳು ಕ್ಷಾಮದಿಂದ ತತ್ತರಿಸುತ್ತಿದ್ದವು. ಫುಲೆ ದಂಪತಿಗಳು ‘ವಿಕ್ಟೋರಿಯಾ ಬಾಲಾಶ್ರಮ’ ಅನ್ನು ಸ್ಥಾಪಿಸಿ ಸ್ನೇಹಿತರು, ದಾನಿಗಳಿಂದ ನೆರವನ್ನು ಸಂಗ್ರಹಿಸಿ ಪ್ರತಿಯೊಂದು ಹಳ್ಳಿಗೆ ತೆರಳಿ ನೆರವಿಗೆ ಧಾವಿಸುತ್ತಿದ್ದರು 1890ರಲ್ಲಿ ಪತಿ ಜೋತಿಬಾ ತೀರಿಕೊಂಡಾಗ ಅವರ ಅಂತ್ಯಕ್ರಿಯೆಯನ್ನು ಸ್ವತಃ ತಾವೇ ಖುದ್ದಾಗಿ ನೆರವೇರಿಸಿದರು ಸಾವಿತ್ರಿಬಾಯಿ ಫುಲೆ.

1897ರಲ್ಲಿ ಪ್ಲೇಗ್‌ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ತಾವೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು.

ಆದರೆ 184 ವರ್ಷಗಳ ನಂತರ ಇಂಡಿಯಾದ ಇಂದಿನ ಆಧುನಿಕ ಶಿಕ್ಷಣವು ಸಾವಿತ್ರಿಬಾಯಿಯವರ legacy ಯನ್ನು ತಲುಪಲು ಸಹ ಆಗದೆ ಕಷ್ಟಪಡುತ್ತಿರುವುದು ವಿಪರ್ಯಾಸವೇ ಸರಿ. ಏಕೆಂದರೆ ಇಂದಿಗೂ ಆಧುನಿಕ ಶಿಕ್ಷಣವೆಂದರೆ ಅದು ಎಲೈಟ್ ಗುಂಪಿಗಾಗಿ ಮಾತ್ರ ಮೀಸಲಾಗಿದೆ. ದಲಿತರ, ಆದಿವಾಸಿಗಳ ಮತ್ತು ಎಲ್ಲಾ ಜಾತಿಯ ಬಡವರ ಮಕ್ಕಳಿಗೆ ಇಂದಿಗೂ ಆಧುನಿಕ ಶಿಕ್ಷಣ ಒಂದು ಮರೀಚಿಕೆ. ಸಾವಿತ್ರಿಬಾಯಿಯವರಿಗೆ ಸಾಧ್ಯವಾಗಿದ್ದು ನಮಗೇತಕ್ಕೆ ಸಾಧ್ಯವಾಗದೇ ಹೋಯ್ತು?? ಏಕೆಂದರೆ ಶಿಕ್ಷಣ ವ್ಯವಸ್ಥೆಯ ಜಡಗೊಂಡ ದೃಷ್ಟಿಕೋನವನ್ನೇ ಪಲ್ಲಟಗೊಳಿಸಲು ನಮ್ಮ ಶಿಕ್ಷಣ ನೀತಿಗಳು ಸೋತಿವೆ.

ಶಿಕ್ಷಣದ ಮೂಲಕ ತಳಸಮುದಾಯಗಳ ಬದುಕಿನಲ್ಲಿ ಸುಧಾರಣೆಗಳಿಗೆ ಕಾರಣರಾದ ಫುಲೆ ದಂಪತಿಗಳು ವಿಶ್ವ ಭ್ರಾತೃತ್ವ, ಮಕ್ಕಳ ಸೂಕ್ಷ್ಮತೆ, ಬೌದ್ಧಿಕವಾಗಿ ಹೆಚ್ಚು ವಸ್ತುನಿಷ್ಠವಾದ ಮತ್ತು ಸಾಮಾಜಿಕ ಸುಧಾರಣೆಯಂತಹ ಗಂಭೀರ pedagagogy ಗಳನ್ನು ಈ ಶಿಕ್ಷಣದಲ್ಲಿ ಅಳವಡಿಸಿದರು. 19ನೇ ಶತಮಾನದ ಮೊದಲ ಹಾಗೂ ಮಧ್ಯ ಭಾಗದಲ್ಲಿ ಅಂದಿನ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಬಯಸಿದ್ದ ಸಾವಿತ್ರಿಬಾಯಿ ಆಗಿನ ಶಿಕ್ಷಣ ವ್ಯವಸ್ಥೆಯ ದೃಷ್ಟಿಕೋನವನ್ನೇ ಪಲ್ಲಟಗೊಳಿಸಿದರು ಎಂದು ಥಾಮಸ್ ಕ್ಹುನ್ ಹೇಳುತ್ತಾರೆ.

“ಸಾವಿತ್ರಿಬಾಯಿಯವರ pedagagogy ನಾಲ್ಕು ಪ್ರಮುಖ ಶಿಕ್ಷಣನೀತಿಗಳನ್ನು ಒಳಗೊಂಡಿತ್ತು. ಅದೇನೆಂದರೆ

· ಜಾಗತಿಕವಾಗಿ ಲಭ್ಯವಿರುವ ಆಧುನಿಕ ಶಿಕ್ಷಣವನ್ನು, ಪಠ್ಯವನ್ನು ಅಳವಡಿಸಿಕೊಳ್ಳುವುದು

· ಮಕ್ಕಳ ಸೂಕ್ಷ್ಮತೆಯನ್ನಾಧರಿಸಿ ಬೋಧನೆಯ ಕ್ರಮವನ್ನು ರೂಪಿಸುವುದು

· ಬೌದ್ಧಿಕವಾಗಿ ವಿಮರ್ಶಾತ್ಮಕವಾದ, ವಸ್ತುನಿಷ್ಠವಾದ ಕಲಿಕೆಯನ್ನು ಬೆಂಬಲಿಸುವುದು

· ಸಾಮಾಜಿಕ ಸುಧಾರಣೆಗಳನ್ನು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆದ್ಯತೆಯ ಮೇರೆಗೆ ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸಿಕೊಳ್ಳುವುದು.

ಮೇಲ್ನೋಟಕ್ಕೆ ಸರಳವಾಗಿ ಕಂಡುಬರುವ ಈ ಶಿಕ್ಷಣ ನೀತಿಗಳು ಇಂದಿನ ಆಧುನಿಕ ಭಾರತದ ಸಂದರ್ಭದಲ್ಲಿ ದಯನೀಯವಾಗಿ ಸೋತಿದ್ದಾದರೂ ಏತಕ್ಕೆ? 19ನೇ ಶತಮಾನದಲ್ಲಿ ಸಾವಿತ್ರಿಬಾಯಿಯವರ ಬಾಲಕಿಯರ ಶಾಲೆಯಿಂದ ದಲಿತ ಬಾಲಕಿಯು ಈ ಪಠ್ಯವನ್ನು ಕಲಿತು ಅಕ್ಷರಸ್ಥೆಯಾಗಿ ಹೊರಬರಲು ಸಾಧ್ಯವಾಗುವುದಾದರೆ ಇಂದಿನ ಭಾರತದಲ್ಲಿ ಈ ಚಲನಶೀಲತೆ ತೆವಳುತ್ತಿರುವುದಕ್ಕೆ ಮೂಲಭೂತ ಕಾರಣ ಚಾಲ್ತಿಯಲ್ಲಿರುವ ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ಬದಲಾಯಿಸಲು ಸಾವಿತ್ರಿಬಾಯಿಯವರಿಗೆ ಇದ್ದಂತಹ ಇಚ್ಛಾಶಕ್ತಿ ಮತ್ತು ಮಾನಸಿಕ ಶಕ್ತಿ ನಮ್ಮಲ್ಲಿ ಗೈರುಹಾಜರಾಗಿರುವುದು. ಸಾವಿತ್ರಿಬಾಯಿ ಫುಲೆಯವರು ನಿರಂತರವಾಗಿ ಪ್ರತಿಪಾದಿಸಿದ ವಿಶ್ವ ಭ್ರಾತೃತ್ವ, ಮಕ್ಕಳ ಸೂಕ್ಷ್ಮತೆ, ಬೌದ್ಧಿಕವಾಗಿ ಹೆಚ್ಚು ವಸ್ತುನಿಷ್ಠವಾದ ಮತ್ತು ಸಾಮಾಜಿಕ ಸುಧಾರಣೆಯಂತಹ ಗಂಭೀರ pedagagogy ಗಳನ್ನು ನಾವು ಕೈಬಿಟ್ಟಿರುವುದು. ವ್ಯವಸ್ಥೆಯ ದೃಷ್ಟಿಕೋನದಲ್ಲಿಯೇ ಕ್ರಾಂತಿಕಾರಿ ಬದಲಾವಣೆ ತರದೆ ಸಾಮಾಜಿಕ ಕ್ರಾಂತಿಯನ್ನು ಸಾಧಿಸಲು ಕಷ್ಟಸಾಧ್ಯ ಎಂದು ನಂಬಿದ್ದ ಸಾವಿತ್ರಿಬಾಯಿಯವರು ಸುಧಾರಣೆಯ ವಿಷಯದಲ್ಲಿ ಹೊಂದಾಣಿಕೆಯನ್ನೇ ನಿರಾಕರಿಸಿದರು.

ಮಾನವ ಹಕ್ಕುಗಳು, ಸಾಮಾಜಿಕ ಸ್ಥಾನಮಾನಗಳನ್ನು ವರ್ಗಗಳ ಆಧಾರದ ಮೇಲೆ ನಿರ್ಧರಿಸಲ್ಪಡುವುದಿಲ್ಲ ಬದಲಾಗಿ ಜಾತಿಯ ಮೇಲೆ ನಿರ್ಧರಿಸಲ್ಪಡುತ್ತದೆ ಎಂದು 19ನೇ ಶತಮಾನದಲ್ಲಿಯೇ ಸಾವಿತ್ರಿಬಾಯಿಯವರಿಗೆ ಸ್ಪಷ್ಟವಾಗಿ ಮನವರಿಕೆಯಾಗಿತ್ತು. ವರ್ಗವೆಂದೂ ಜಾತಿಯಲ್ಲ, ವರ್ಗಗಳನ್ನು ಬದಲಾಯಿಸಬಹುದು ಆದರೆ ಜಾತಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು 150 ವರ್ಷಗಳ ಹಿಂದೆಯೇ ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದರು.

ಹೀಗಾಗಿಯೇ ಇದನ್ನು ಒಡೆಯಲು ಸಾವಿತ್ರಿಬಾಯಿಯವರು ಏಕಕಾಲಕ್ಕೆ ಬಾಲಕಿಯರ ಶಾಲೆಯನ್ನು ಪ್ರಾರಂಭಿಸುತ್ತಾರೆ, ದಮನಿತ ಸಮುದಾಯಗಳಿಗೆ ಶಾಲೆಗಳನ್ನು ಪ್ರಾರಂಭಿಸುತ್ತಾರೆ, ವಿವಾಹ ಭಾಹಿರವಾಗಿ ಗರ್ಭಿಣಿಯರಾದ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುತ್ತಾರೆ, ವಿವಾಹಬಾಹಿರವಾಗಿ ಜನಿಸಿದ ಮಕ್ಕಳಿಗೆ ಶಿಶುಕೇಂದ್ರಗಳನ್ನು ಪ್ರಾರಂಭಿಸುತ್ತಾರೆ, ಕ್ಷೌರಿಕರ ಪ್ರತಿಭಟನೆಯನ್ನು ಸಂಘಟಿಸುವುದರ ಮೂಲಕ ವಿಧವೆಯರ ಕೇಶಮಂಡನವನ್ನು ವಿರೋಧಿಸುತ್ತಾರೆ, ದಲಿತರಿಗೆ ತಮ್ಮ ಮನೆಯ ತೊಟ್ಟಿಯನ್ನು ಸಾರ್ವಜನಿಕವಾಗಿ ಕುಡಿಯಲು ಬಿಟ್ಟುಕೊಡುತ್ತಾರೆ, ಕ್ಷಾಮದ ಸಂದರ್ಭದಲ್ಲಿ ತಮ್ಮ ಸತ್ಯಶೋಧಕ ಕಾರ್ಯಕರ್ತರೊಂದಿಗೆ ಸ್ಥಳದಲ್ಲಿ ನೆಲೆನಿಂತು ಬರಗಾಲ ಸಂತ್ರಸ್ತರ ನೆರವಿಗೆ ಧಾವಿಸುತ್ತಾರೆ, ಪ್ಲೇಗ್ ಪೀಡಿತರ ಚಿಕಿತ್ಸೆಗೆ ಮುಂದಾಗುತ್ತಾರೆ.

ಇಂದು 21ನೇ ಶತಮಾನದಲ್ಲಿ ಮತ್ತೊಮ್ಮೆ ಸಾವಿತ್ರಿಬಾಯಿಯವರ ಧ್ವನಿಯನ್ನು ಮುನ್ನಲೆಗೆ ತರಬೇಕಾಗಿದೆ. ಏಕೆಂದರೆ ಇತಿಹಾಸವು ಸಾವಿತ್ರಿಬಾಯಿಯವರ ಸಂದರ್ಭದಲ್ಲಿ ಪಕ್ಷಪಾತದಿಂದ ವರ್ತಿಸಿದೆ. ಸಾವಿತ್ರಿಬಾಯಿಯವರು ಬ್ರಾಹ್ಮಣ್ಯದ ಪುರೋಹಿತಶಾಹಿಯನ್ನು, ಜಾತಿ ಪದ್ಧತಿ-ಫ್ಯೂಡಲ್ ವ್ಯವಸ್ಥೆಯನ್ನು ತಿರಸ್ಕರಿಸಿದ್ದಕ್ಕೆ ಪ್ರತೀಕಾರವೇನೋ ಎಂಬಂತೆ ಈ ರಾಷ್ಟ್ರೀಯವಾದಿ ಇತಿಹಾಸಕಾರರು ಈ ಮೊದಲ ಶಿಕ್ಷಕಿಯ ಸಾಧನೆಗಳೇ ಇತಿಹಾಸದ ಪುಟಗಳಲ್ಲಿ ಪ್ರಸ್ತಾಪ ಆಗದಂತೆ ನಕಾರಾತ್ಮಕವಾಗಿ ವರ್ತಿಸಿದ್ದಾರೆ. ಸತ್ಯವನ್ನು ದಾಖಲಿಸಬೇಕಾಗಿದ್ದಂತಹ ಸಂದರ್ಭದಲ್ಲಿ ಇತಿಹಾಸಕಾರರು ಗೊಂದಲ ಮತ್ತು ದಾರಿ ತಪ್ಪಿಸುವ ಮಾಹಿತಿಗಳನ್ನು ದಾಖಲಿಸಿದರು. ಪಠ್ಯಪುಸ್ತಕಗಳಲ್ಲಿ ಭಾರತದ ಅನೇಕ ಮೊದಲ ವ್ಯಕ್ತಿಗಳ ಕುರಿತಾಗಿ ಪ್ರಶ್ನೋತ್ತರಗಳನ್ನು ಅಳವಡಿಸಿರುತ್ತಾರೆ. ಆದರೆ ಆಧುನಿಕ ಭಾರತದ ಮೊದಲ ಶಿಕ್ಷಕಿ, ಮೊದಲ ಫೆಮಿನಿಸಂ ನಾಯಕಿ ಸಾವಿತ್ರಿಬಾಯಿಯವರ ಹೆಸರನ್ನು ಕುತೂಹಲಕ್ಕಾದರೂ ದಾಖಲಿಸಿಲ್ಲ.

19ನೇ ಶತಮಾನದ ಹಲವು ಸಮಾಜ ಸುಧಾರಕರು ಹಿಂದೂ ಸಮಾಜದಲ್ಲಿನ ಕೆಲವು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಆದರೆ ಇರ‍್ಯಾರು ಹಿಂದೂ ಧರ್ಮದ ಚೌಕಟ್ಟಿನೊಳಗಿರುವ ಬ್ರಾಹ್ಮಣ್ಯದ ಪಾರುಪತ್ಯವನ್ನು, ಜಾತಿಪದ್ಧತಿಯನ್ನು ಕಿತ್ತು ಹಾಕುವ ಪ್ರಯತ್ನಗಳನ್ನು ಮಾಡಲಿಲ್ಲ. ಯಥಾಸ್ಥಿತಿವಾದವನ್ನು ಪ್ರತಿಪಾದಿಸಿದ ಇವರು ಕೇವಲ ಮೇಲ್ಮಟ್ಟದ ಸುಧಾರಣೆಗಳನ್ನು ಬಯಸಿದ್ದರು. ಆದರೆ ಫುಲೆ ದಂಪತಿಗಳು ಬ್ರಾಹ್ಮಣ್ಯದ ಧಾರ್ಮಿಕ-ಸಾಮಾಜಿಕ ವ್ಯವಸ್ಥೆ ಕಳಂಕಿತವಾದದ್ದು ಮತ್ತು ಹೆಚ್ಚು ಅಪಾಯಕಾರಿಯಾದದ್ದು ಎಂದು ವಿವರಿಸಿದರು. ಜಾತಿಪದ್ಧತಿ-ಫ್ಯೂಡಲ್ ವ್ಯವಸ್ಥೆಯಂತಹ ರೋಗಕ್ಕೆ ಫುಲೆ ದಂಪತಿಗಳು ಶಿಕ್ಷಣವೇ ಔಷಧಿ ಎಂದು ವಿವರಿಸಿದರು. ಜಾತಿ ಪದ್ಧತಿಯ ವಿರುದ್ಧ ಸಮರವನ್ನೇ ಸಾರಿದರು.

ಕೀವುಗಟ್ಟಿದಂತಹ ಗಾಯದ ಕಲೆಯಾಗಿದ್ದ ಜಾತಿಯನ್ನು ಕಡೆಗೂ ನನ್ನ ಬದುಕಿನಿಂದ ಅಳಿಸಿಹಾಕಿದ್ದೇನೆ ಎನ್ನುವಂತಹ ಕವನದ ಸಾಲುಗಳನ್ನು ಬರೆದ ಸಾವಿತ್ರಿಬಾಯಿಯವರು ಬ್ರಾಹ್ಮಣರ ಶಾಸ್ತ್ರಗಳನ್ನು ಕಿತ್ತು ಎಸೆದು ಹಾಕು ಎಂದು ತಮ್ಮ ‘ಕಾವ್ಯ ಅರಳಿದೆ’ ಸಂಕಲನದಲ್ಲಿ ಕರೆ ನೀಡಿದರು.

“ Thom Wolf and Suzana Andrade” ಒಂದು ಕಡೆ ಬರೆಯುತ್ತಾರೆ “ ಬೆಳಗಿನ ಹೊತ್ತು ಮಕ್ಕಳಿಗೆ ಪಾಠ ಮಾಡಲು ತೆರಳುವ ಪ್ರತಿಯೊಬ್ಬ ಭಾರತೀಯ ಶಿಕ್ಷಕಿಗೆ ಸಾವಿತ್ರಿಬಾಯಿಯ ಶಬ್ದಗಳು ಮನದಲ್ಲಿರುತ್ತವೆ. ಮರೆಯಲಾಗುವುದಿಲ್ಲ. ಮಕ್ಕಳಿಗೆ ಈ ಶಿಕ್ಷಕಿಯ ಅವಶ್ಯಕತೆಯಿದೆ. ಇವರಾರೂ ಕಲ್ಲಿನ, ಸೆಗಣಿಯ ಎಸೆತಗಳಿಗೆ, ಮೂದಲಿಕೆಗಳಿಗೆ ಎದೆಗುಂದುವುದಿಲ್ಲ. ಏಕೆಂದರೆ ಸಾವಿತ್ರಿಬಾಯಿ ಮನದಲ್ಲಿದ್ದಾಳೆ. ಇಂದಿನ ಅಕ್ಷರಸ್ಥ ಭಾರತೀಯ ಮಹಿಳೆ ಜಗತ್ತಿನ ಯಾವುದೇ ಭಾಗದಲ್ಲಿರಲಿ ಆಕೆ ಹೊಸ ಚಿಂತನೆಗಳಿಗೆ ಸಾಕ್ಷಿಯಾಗಿರುತ್ತಾಳೆ. ಪ್ರತಿಯೊಬ್ಬ ಭಾರತೀಯ ಅಕ್ಷರಸ್ಥ ಮಹಿಳೆ ಮನುವಿನ ಸೆರೆಮನೆಯಿಂದ ಬಂಧಮುಕ್ತಗೊಂಡವಳಾಗಿರುತ್ತಾಳೆ. ಶಾಲೆಗಳಲ್ಲಿ ಪ್ರತಿಯೊಬ್ಬ ಬಾಲಕಿ ಬಾಲಕನ ಪಕ್ಕ ಕುಳಿತುಕೊಂಡು, ಪುಸ್ತಕಗಳನ್ನು ಓದುತ್ತಾ, ಹೊಸ ಸಂಗತಿಗಳನ್ನು ಕಲಿಯುತ್ತಾ, ಹೊಸ ಜಗತ್ತಿನ ನಿರ್ಮಾಣದಲ್ಲಿರುತ್ತಾಳೆ. ಈ ಬಾಲಕಿ ರೂಪಿಸುತ್ತಿರುವ ಈ ಜಗತ್ತು ತನ್ನ 3000 ವರ್ಷಗಳ ಸನಾತನ ಪರಂಪರೆಯಿಂದ ನಿರ್ದಾಕ್ಷಿಣ್ಯವಾಗಿ ಕಡಿದುಕೊಂಡು ಭವಿಷ್ಯದ ಸಾವಿತ್ರಿಬಾಯಿ ಫುಲೆಯನ್ನು ರೂಪಿಸಲು ಸಹಾಯ ಮಾಡುತ್ತಿರುತ್ತದೆ.”

(ಲೇಖರರಾದ ಬಿ.ಶ್ರೀಪಾದ್‌ ಭಟ್‌ರವರು ಚಿಂತಕರು, ಬರಹಗಾರರು ಮತ್ತು ಸಮಾನ ಶಿಕ್ಷಣಕ್ಕಾಗಿನ ಹೋರಾಟಗಾರರು… ಅವರ ವಿಮೋಚಕಿಯ ಕನಸುಗಳು – ಸಾವಿತ್ರಿಬಾಯಿ ಫುಲೆ ಬದುಕು ಬರಹ ಪುಸ್ತಕದಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ.)

Please follow and like us:
error