ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದರ ಹಿಂದೆ ಮಾಫಿಯಾ: ಪ್ರೊ.ಮಹೇಶ್ ಚಂದ್ರಗುರು

ಬುಡಕಟ್ಟು ಮೂಲ ನಿವಾಸಿಗಳ ಒಳಮೀಸಲಾತಿ ಮತ್ತು ಮುಜಾಫರ್ ಅಸಾದಿ ವರದಿ ಜಾರಿಗೆ ಒತ್ತಾಯಿಸಿ ನಡೆದ ದುಂಡು ಮೇಜಿನ ಸಭೆ

ಮೈಸೂರು : ಪ್ರಸ್ತುತ ರಾಜ್ಯಕೀಯ ವ್ಯವಸ್ಥೆಯಲ್ಲಿ ಶ್ರೀಮಂತ ಪ್ರಭುತ್ವದ ಆಳ್ವಿಕೆ ನಡೆಯುತ್ತಿದ್ದು, ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಇದರ ಹಿಂದೆ ದೊಡ್ಡ ಮಾಫಿಯಾವೇ ಅಡಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಕಿಡಿಕಾರಿದರು.

ಬುಡಕಟ್ಟು ಮೂಲ ನಿವಾಸಿಗಳ ಜಾಗೃತ ವೇದಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಮಂಗಳವಾರ ಬುಡಕಟ್ಟು ಮೂಲ ನಿವಾಸಿಗಳ ಒಳಮೀಸಲಾತಿ ಮತ್ತು ಮುಜಾಫರ್ ಅಸಾದಿ ವರದಿ ಜಾರಿಗೆ ಒತ್ತಾಯಿಸಿ ನಡೆದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ ಅವರು ಮಾತನಾಡಿದರು. ಉಳಿದ ಕಾಯ್ದೆಗಳಿಗೆ ಅನಗತ್ಯವಾಗಿ ತಿದ್ದುಪಡಿ ತರುವ ಸರ್ಕಾರ ಆದಿವಾಸಿಗಳ ರಕ್ಷಣೆಗೆ ಮುಂದಾಗಬೇಕು. ಆದಿವಾಸಿಗಳಿಗೆ ಅರಣ್ಯ ಪ್ರದೇಶದ ಮಾಲಕತ್ವ ನೀಡಬೇಕು, ಶಿಕ್ಷಣ ಆರೋಗ್ಯ ಕೇಂದ್ರಗಳ ವ್ಯವಸ್ಥೆಯಾಗಬೇಕು, ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಅಲ್ಲದೆ, ಅವರಿಗೆ ಸಿಗಬೇಕಾದ ಎಲ್ಲ ರೀತಿಯ ಅರ್ಹತಾ ಪತ್ರಗಳನ್ನು ಸರ್ಕಾರವೇ ಅವರ ಮನೆ ಬಾಗಿಲಿಗೆ ತೆರಳಿ ಮಾಡಿಕೊಡಬೇಕು. ದೇಶದ ಅಭಿವೃದ್ಧಿಗೆ ಕಾರಣವಾಗಿರುವ ಆದಿವಾಸಿಗಳಿಗಾಗಿ ಈ ಅಂಶಗಳನ್ನು ಒಳಗೊಂಡ ಕಾಯ್ದೆಯನ್ನು ರಚಿಸಬೇಕು ಎಂದು ಆಗ್ರಹಿಸಿದರು.

ನಮ್ಮ ನೈಜ ಆದಿವಾಸಿಗಳು ಇಂದಿಗೂ ತಮ್ಮ ಮೂಲ ಅಸ್ತಿತ್ವಕ್ಕಾಗಿ ಬೇಡುತ್ತಲೇ ಇದ್ದಾರೆ. ಆದರೆ, ನಗರದಲ್ಲಿ ನೆಲೆಸಿರುವ ನಕಲಿ ಆದಿವಾಸಿಗಳು ಮೂಲ ಆದಿವಾಸಿಗಳಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಅಧಿಕಾರವನ್ನು ಕಬಳಿಸುತ್ತಿದ್ದಾರೆ. ಇಂಥವರನ್ನು ಪಟ್ಟಿಮಾಡಿ, ಅವರಿಂದ ಸೌಲಭ್ಯಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

 

Please follow and like us:
error