ಆಡಳಿತಾಧಿಕಾರಿ ಹೊರಡಿಸಿದ್ದ ಆದೇಶಗಳಿಗೆ ತಡೆ ನೀಡಿದ ವಕ್ಫ್ ಬೋರ್ಡ್

ಬೆಂಗಳೂರು, ಜ.23: ರಾಜ್ಯ ವಕ್ಫ್ ಬೋರ್ಡ್ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವದಲ್ಲಿ ಇಲ್ಲದೇ ಇರುವ ಸಂದರ್ಭದಲ್ಲಿ ಬೋರ್ಡ್‌ನ ಆಡಳಿತಾಧಿಕಾರಿ ಹೊರಡಿಸಿದ್ದ ಎಲ್ಲ ಪ್ರಮುಖ ಆದೇಶಗಳಿಗೆ ತಡೆ ನೀಡಲು ಸರ್ವಸದಸ್ಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ.

ಗುರುವಾರ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೊರ್ಡ್ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ತುರ್ತು ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸ್ವಾಯತ್ತ ಸಂಸ್ಥೆಯಾಗಿರುವ ವಕ್ಫ್ ಬೋರ್ಡ್ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವದಲ್ಲಿ ಇಲ್ಲದೇ ಇರುವಾಗ ಆಡಳಿತಾಧಿಕಾರಿ ನೀತಿ ನಿರೂಪಣೆಯ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಇದು ವಕ್ಫ್ ಕಾಯ್ದೆ, ನಿಯಮಗಳು ಹಾಗೂ ಸಂವಿಧಾನದ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ವಕ್ಫ್ ಬೋರ್ಡ್‌ಗೆ ನೂತನ ಅಧ್ಯಕ್ಷರ ಆಯ್ಕೆಗಾಗಿ ಜ.22ರಂದು ಚುನಾವಣೆ ನಿಗದಿಯಾಗಿತ್ತು. ನೀತಿ ಸಂಹಿತೆ ಜಾರಿಯಲ್ಲಿರುವಾಗ ಜ.21ರಂದು ರಾತ್ರಿ 23 ಜಿಲ್ಲಾ ವಕ್ಫ್ ಸಲಹಾ ಸಮಿತಿಗಳ ಹಾಲಿ ಅಧ್ಯಕ್ಷರನ್ನು ಬದಲಾಯಿಸಿ, ಹೊಸಬರನ್ನು ನೇಮಕ ಮಾಡಿ ಆಡಳಿತಾಧಿಕಾರಿ ಹೊರಡಿಸಿದ್ದ ಆದೇಶವನ್ನು ತಡೆ ಹಿಡಿದು, ಹಾಲಿ ಅಧ್ಯಕ್ಷರನ್ನೆ ಮುಂದುವರೆಸಲು ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ವಾರ್ಷಿಕ ಒಂದು ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವ ವಕ್ಫ್ ಸಂಸ್ಥೆಗಳಿಂದ ವಕ್ಫ್ ಬೋರ್ಡ್ ಶೇ.7ರಷ್ಟು ಕೊಡುಗೆ ಸ್ವೀಕರಿಸಬಹುದಾಗಿದೆ. ಆದರೆ, ಜ.1ರಂದು ಆಡಳಿತಾಧಿಕಾರಿ ಹೊಸ ಆದೇಶವನ್ನು ಹೊರಡಿಸಿ ಕೊಡುಗೆಯ ಪ್ರಮಾಣವನ್ನು ಶೇ.4ಕ್ಕೆ ಇಳಿಸಿದ್ದಾರೆ. ಅಲ್ಲದೇ, ಇದರಲ್ಲಿ ಶೇ.1ರಷ್ಟು ಪಾಲನ್ನು ಕೇಂದ್ರ ವಕ್ಫ್ ಕೌನ್ಸಿಲ್‌ಗೆ ನೀಡಬೇಕಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಆದೇಶ ಜಾರಿಯಾದರೆ ವಕ್ಫ್ ಬೋರ್ಡ್‌ಗೆ ದೊಡ್ಡಮಟ್ಟದ ಆರ್ಥಿಕ ನಷ್ಟವಾಗುತ್ತದೆ. ಆದುದರಿಂದ, ಆಡಳಿತಾಧಿಕಾರಿ ಆದೇಶವನ್ನು ತಡೆ ಹಿಡಿದು ಕೊಡುಗೆಯ ಪ್ರಮಾಣವನ್ನು ಪುನಃ ಶೇ.7ಕ್ಕೆ ನಿಗದಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಹಮ್ಮದ್ ಯೂಸುಫ್ ತಿಳಿಸಿದರು.

ವಕ್ಫ್ ಆಸ್ತಿಗಳ ನೋಂದಣಿಯ ಅಧಿಕಾರ ವಕ್ಫ್ ಬೋರ್ಡ್‌ಗೆ ಮಾತ್ರ ಇದೆ. ಆದರೆ, 2019ರ ನ.8ರಂದು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಆಸ್ತಿಗಳ ನೋಂದಣಿಯ ಅಧಿಕಾರವನ್ನು ನೀಡಿ ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಧಾರ್ಮಿಕ ಸಂಸ್ಥೆಗಳು ಎನ್‌ಆರ್‌ಸಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು, ವಕ್ಫ್ ಬೋರ್ಡ್‌ಗೆ ನೀಡುವ ಕೊಡುಗೆಯ ಪಾಲಿನಲ್ಲಿ 10 ಸಾವಿರ ರೂ.ಗಳನ್ನು ಖರ್ಚು ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ಆದೇಶಗಳನ್ನು ನಾವು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್, ರಾಜ್ಯ ಬಾರ್ ಕೌನ್ಸಿಲ್ ವಕ್ಫ್ ಬೋರ್ಡ್‌ಗೆ ಆಯ್ಕೆಯಾಗಿರುವ ಸದಸ್ಯ ಆಸಿಫ್ ಅಲಿ ಶೇಖ್ ಉಪಸ್ಥಿತರಿದ್ದರು.

Please follow and like us:
error