ಆಟಿಕೆಗಳ ಕ್ಲಸ್ಟರ್ ಉದ್ಯಮದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಲಭ್ಯ: ಶಾಸಕ ಹಾಲಪ್ಪ ಆಚಾರ್

ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ದತೆಗಳ ಪರಿಶೀಲನೆ

ಕೊಪ್ಪಳ :  ಭಾನಾಪುರದಲ್ಲಿ ಏಕಸ್ ಕಂಪನಿ ಯಿಂದ ನಿರ್ಮಾಣವಾಗುತ್ತಿರುವ ಆಟಿಕೆಗಳ ಕ್ಲಸ್ಟರ್ ಉದ್ಯಮದಿಂದ ಸ್ಥಳೀಯ ಯುವಕರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೇಳಿದರು.
ಶುಕ್ರವಾರದಂದು ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪೂರ ಗ್ರಾಮದ ಬಳಿ ಜನವರಿ.09 ರಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಂದ ಉದ್ಘಾಟನೆಗೊಳ್ಳಲಿರುವ ಮಣ್ಣು ಪರೀಕ್ಷಾ ಸಂಚಾರಿ ವಾಹನಗಳಿಗೆ ಚಾಲನೆ ಹಾಗೂ ಆಟಿಕೆಗಳ ಕ್ಲಸ್ಟರ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಪೂರ್ವಸಿದ್ಧತೆಯನ್ನು ಪರಿಶೀಲಿಸಿ ನಂತರ ಅವರು ಮಾತನಾಡಿದರು.
ನಾಳೆ ಸಿಎಂ ಯಡಿಯೂರಪ್ಪ ಅವರು ಆಟಿಕೆಗಳ ಕ್ಲಸ್ಟರ್‌ನ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಭಾಗದಲ್ಲಿ ಯಾವುದೇ ದೊಡ್ಡ ಮಟ್ಟದ ಕಂಪನಿಗಳಿಲ್ಲ. ಆಟಿಕೆಗಳ ಕ್ಲಸ್ಟರ್‌ನಿಂದ ಉದ್ಯೋಗಗಳು ಸೃಷ್ಟಿಯಾಗಿ ಯುವಕರಿಗೆ ಒಳ್ಳೆಯ ಅವಕಾಶ ಸಿಗಲಿದೆ. ಕಂಪನಿಯ ಮ್ಯಾನೇಜರ್ ಅರವಿಂದ ಬೆಳ್ಳಿಗೇರಿ ಅವರು ಈ ಭಾಗಕ್ಕೆ ಔದ್ಯೋಗೀಕರಣ ಮಾಡಲು ದೊಡ್ಡ ಸಾಹಸ ಮಾಡಿದ್ದಾರೆ. ವಿವಿಧ ಕಂಪನಿಗಳು ಸಾವಿರಾರು ಕೋಟಿ ಬಂಡವಾಳ ಹೂಡಿವೆ. ಇವುಗಳಲ್ಲಿ ಸ್ಥಳೀಯರಿಗೆ ಅವಕಾಶ ಸಿಕ್ಕಿಲ್ಲ. ಈ ರೀತಿ ಆಗದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ಜೊತೆ ಚರ್ಚಿಸುತ್ತೇವೆ ಎಂದರು.
ಏಕಸ್ ಕಂಪನಿಯವರು ಒಂದು ವರ್ಷದಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಆತ್ಮನಿರ್ಭರ ಭಾರತದ ಅಡಿಯಲ್ಲಿ ಉದ್ಯೋಗ ಸೃಷ್ಟಿ ಹಾಗೂ ನಮಗೆ ಬೇಕಾದ ವಸ್ತುಗಳನ್ನು ನಾವೇ ತಯಾರಿಸಿಕೊಳ್ಳುವ ಯೋಜನೆಯಾಗಿದೆ. ಸ್ವದೇಶಿ ವಸ್ತುಗಳು ತಯಾರಿಕೆ ಹಾಗೂ ಬಳಕೆಗೆ ಇದು ಪೂರಕವಾಗಿದೆ. ಕೋವಿಡ್-19ನಿಂದ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ ಯುವಕರಿಗೆ ಅನುಕೂಲ ಆಗಲಿದೆ ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಏಕಸ್ ಕಂಪನಿಯ ವಿಕ್ರಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error