ಆಗಸ್ಟ್ 24 ರೊಳಗೆ ರೈತರು ಬೆಳೆದ ಬೆಳೆಗಳ ಮಾಹಿತಿ ನೀಡಿ: ಬಿ.ಸಿ.ಪಾಟೀಲ್


ಕೊಪ್ಪಳ, : ರೈತರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ನಮೂದಿಸಲು ಬೆಳೆ ಸಮೀಕ್ಷೆ ಉತ್ಸವ ಆರಂಭಿಸಲಾಗಿದ್ದು, ತಮ್ಮ ಬೆಳೆಗಳ ಕುರಿತು ರೈತರೇ ಮೊಬೈಲ್ ಆಪ್ ಮುಖಾಂತರ ಆಗಸ್ಟ್ 24 ರೊಳಗೆ ಫೋಟೋ ಸಹಿತ ಮಾಹಿತಿಯನ್ನು ಅಪಲೋಡ್ ಮಾಡಬೇಕು ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.
ಅವರು ಶನಿವಾರದಂದು ಕೊಪ್ಪಳ ತಾಲ್ಲೂಕಿನ ಕೋಳೂರು ಗ್ರಾಮದ ರೈತ ಮಲ್ಲಪ್ಪ ತಂ. ಸಿದ್ದಪ್ಪ ಹುಣಸಿಹಾಳ ಇವರ ಹತ್ತಿ ಹೊಲದಲ್ಲಿ 2020-21ನೇ ಸಾಲಿನ ರೈತರ ಬೆಳೆ ಸಮೀಕ್ಷೆಯ ಉತ್ಸವದ ಮೊಬೈಲ್ ಆಪ್ ಬಳಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಬೆಳೆ ಸಮೀಕ್ಷೆ ಮಾಡಲಾಗುತ್ತಿದ್ದು, ಅದರಲ್ಲಿ ಶೇ. 40-50 ರಷ್ಟು ವ್ಯತ್ಯಾಸವಾಗುತ್ತಿತ್ತು.  ಉದಾಹಣೆಗೆ ಸರ್ವೆ ನಂ. 50 ಇದ್ದರೆ ಅದೇ ಸರ್ವೇ ನಂ. ನಲ್ಲಿ ನಾಲ್ಕರಿಂದ ಐದು ಮಂದಿ ಅಣ್ಣತಮ್ಮಂದಿರು ಅದೇ ಹೊಲದಲ್ಲಿ ಬೆಳೆದ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಸರಿಯಾದ ಮಾಹಿತಿ ದೊರೆಯುತ್ತಿರಲಿಲ್ಲ. ಆದರೆ ಪ್ರಸಕ್ತ ವರ್ಷದಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಚಿತ್ರ ತೆಗೆದು ಸ್ವಯಂ ಅಪ್‌ಲೋಡ್ ಮಾಡಬಹುದು. ಏನಾದರು ಗೊಂದಲಗಳಿದ್ದಲ್ಲಿ ಪಿ.ಆರ್.ಒ ಗಳ ಸಹಾಯವನ್ನು ಪಡೆಯಬಹುದು ಎಂದರು.
ಬೆಳೆ ಸಮೀಕ್ಷೆಯಡಿ ಸಂಗ್ರಹವಾಗುವ ಮಾಹಿತಿಯನ್ನು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಸಹಾಯಧನ ಪಡೆಯಲು ಉಪಯೋಗವಾಗುತ್ತದೆ. ಆದ್ದರಿಂದ ರೈತರು ತಮ್ಮ ಬೆಳೆಗಳ ನಿಖರವಾದ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ಅಪಲೋಡ್ ಮಾಡಬೇಕು ಎಂದು ಸಚಿವರು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ ಅಧ್ಯಕ್ಷ ಎಚ್.ವಿಶ್ವನಾಥ ರೆಡ್ಡಿ, ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ. ಸಿಇಒ ರಘುನಂದನ್ ಮೂರ್ತಿ, ತಹಶೀಲ್ದಾರ ಜೆ.ಬಿ. ಮಜ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error