ಆಂಧ್ರದ ರಾಸಾಯನಿಕ ಸ್ಥಾವರದಲ್ಲಿ ವಿಷಕಾರಿ ಅನಿಲ ಸೋರಿಕೆ: ಏಳು ಮಂದಿ ಮೃತ

ಹೊಸದಿಲ್ಲಿ,ಮೇ 7: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬಹುರಾಷ್ಟ್ರೀಯ ಕಂಪೆನಿಯ ರಾಸಾಯನಿಕ ಸ್ಥಾವರದಿಂದ ವಿಷಕಾರಿ ಅನಿಲ ಸೋರಿಕೆಯಾಗಿರುವ ಪರಿಣಾಮ ಮಕ್ಕಳು ಸಹಿತ ಏಳು ಮಂದಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ.

ಸುಮಾರು 200 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಂಬುಲೆನ್ಸ್, ಅಗ್ನಿಶಾಮಕ ದಳದ ಯಂತ್ರಗಳು ಹಾಗೂ ಪೊಲೀಸರು ರಾಸಾಯನಿಕ ಸ್ಥಾವರದತ್ತ ಧಾವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಆರ್‌ಆರ್ ವೆಂಕಟಪುರಂನಲ್ಲಿರುವ ಎಲ್‌ಜಿ ಪಾಲಿಮರ್ಸ್ ಇಂಡಿಯಾ ಪ್ರೈ ಲಿ.ನ ಬಳಿ ಮನೆಗಳಿದ್ದು, ಇಲ್ಲಿನ ನಿವಾಸಿಗಳ ಕಣ್ಣುಗಳಲ್ಲಿ ಉರಿ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಸ್ಥಳೀಯರನ್ನು ತಕ್ಷಣವೇ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಪಾಲಪಟ್ಟಣಂನಲ್ಲಿನ ಎಲ್‌ಜಿ ಪಾಲಿಮರ್ಸ್‌ನಲ್ಲಿ ಅನಿಲ ಸೋರಿಕೆಯನ್ನು ಪತ್ತೆ ಹಚ್ಚಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮುನ್ನಚ್ಚರಿಕಾ ಕ್ರಮವಾಗಿ ಅನಿಲಸ್ಥಾವರದ ಸುತ್ತಮುತ್ತಲಿನ ನಿವಾಸಿಗಳಿಗೆ ಮನೆಯಿಂದ ಹೊರ ಬರದಂತೆ ಸೂಚಿಸಲಾಗಿದೆ ಎಂದು ಗ್ರೇಟರ್ ವಿಶಾಖಪಟ್ಟಣ ಮುನ್ಸಿಪಲ್ ಕಾರ್ಪೊರೇಶನ್ ಟ್ವೀಟ್ ಮಾಡಿದೆ.

Please follow and like us:
error