ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಬಲಿಷ್ಠ, ವೈವಿಧ್ಯ ಭಾರತದ ಪ್ರತಿನಿಧಿ: ಪ್ರಧಾನಿ ಮೋದಿ

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ವೈವಿಧ್ಯಮಯ ಭಾರತ ಮತ್ತು ಶಕ್ತಿಯುತ ಭಾರತವನ್ನು ಪ್ರತಿನಿಧಿಸುತ್ತದೆ. ಇಡೀ ವಿಶ್ವಕ್ಕೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿರುವ ಮತ್ತು ಕೊರೊನಾ ವಿರುದ್ಧದ ಹೋರಾಟದಲ್ಲಿ ಗಣನೀಯ ಕೊಡುಗೆ ಈ ವಿವಿಯ ಬಗ್ಗೆ ಹೆಮ್ಮೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೊರೊನಾ ಸಮಯದಲ್ಲಿ ಈ ವಿವಿಯ ಸಾವಿರಾರು ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಉಚಿತ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಡೀ ವಿವಿಯನ್ನು ಐಸೋಲೇಷನ್ ವಾರ್ಡ್‌ಗಳಾಗಿ ಬಳಸಿಕೊಳ್ಳಲಾಯಿತು. ಪ್ಲಾಸ್ಮಾ ದಾನ ಮಾಡುವ ಬ್ಯಾಂಕುಗಳಾಗಿ ಕೆಲಸ ಮಾಡಿದ ಈ ವಿವಿಯು ಪಿಎಂ ಕೇರ್ಸ್‌ ನಿಧಿಗೆ ಹೆಚ್ಚಿನ ಹಣ ನೀಡುವ ಮೂಲಕ ಸಮಾಜದ ಬಗ್ಗೆ ತನಗಿರುವ ಬದ್ಧತೆಯನ್ನು ತೋರಿಸಿದೆ” ಎಂದಿದ್ದಾರೆ.

ಈ ನೂರು ವರ್ಷಗಳ ಎಎಂಯು ಇತಿಹಾಸದಲ್ಲಿ ವಿವಿಧ ದೇಶಗಳೊಂದಿಗಿನ ಭಾರತದ ಸಂಬಂಧ ವೃದ್ದಿಸುವಲ್ಲಿ ಅದು ಮಹತ್ತರ ಪಾತ್ರವಹಿಸಿದೆ. ಉರ್ದು, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಬಗೆಗಿನ ಸಂಶೋಧನೆ ಮತ್ತು ಇಸ್ಲಾಮಿಕ್ ಸಾಹಿತ್ಯದ ಕುರಿತಾದ ಸಂಶೋಧನೆಗಳಿಂದ “ಇಡೀ ಇಸ್ಲಾಮಿಕ್ ಪ್ರಪಂಚದೊಂದಿಗೆ ಭಾರತದ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಶಕ್ತಿಯನ್ನು ನೀಡಿದೆ” ಎಂದು ಮೋದಿ ಹೇಳಿದರು.

ಜಾತಿ ಮತಗಳ ಬೇದವಿಲ್ಲದೆ ದೇಶದ ಎಲ್ಲರ ಒಳಿತಿಗಾಗಿ, ಎಲ್ಲರ ಸಾಂವಿಧಾನಿಕ ಹಕ್ಕುಗಳಿಗಾಗಿ ದೇಶ ಮುನ್ನಡೆಯುತ್ತಿದೆ. ಯಾವ ಸಮುದಾಯವನ್ನು ಹಿಂದೆ ಉಳಿಯಲು ನಾವು ಬಿಡುವುದಿಲ್ಲ ಎಂದು ಮೋದಿ ಘೋಷಿಸಿದ್ದಾರೆ. ಸರ್ಕಾರದ ಯೋಜನೆಗಳು ಯಾವುದೇ ಧಾರ್ಮಿಕ ಬೇಧವಿಲ್ಲದೆ ಎಲ್ಲಾ ವರ್ಗದ ಬಡವರಿಗೆ ದೊರಕುತ್ತಿವೆ. ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ದಿಯ ವಿಚಾರಕ್ಕೆ ಬಂದರೆ ನಾವು ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತುತ್ತೇವೆ ಎಂದು ಅವರು ಹೇಳಿದ್ದಾರೆ.

ನಾವು ಯಾವು ಸಮುದಾಯದಲ್ಲಿ ಹುಟ್ಟಿದರೂ ಸರಿಯೆ, ನಮ್ಮ ಆಲೋಚನೆಗಳು ರಾಷ್ಟ್ರೀಯ ಗುರಿಗೆ ಪೂರಕವಾಗಿರಬೇಕು. ನಮ್ಮಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರುವುದು ನಿಜ. ಆದರೆ ರಾಷ್ಟ್ರದ ಪ್ರಗತಿಯ ವಿಚಾರಕ್ಕೆ ಬಂದರೆ ಅವು ಎರಡನೇ ಸ್ಥಾನಕ್ಕೆ ಹೋಗುತ್ತವೆ. ರಾಷ್ಟ್ರದ ವಿಚಾರದಲ್ಲಿ ಯಾವುದೇ ಸೈದ್ದಾಂತಿಕ ಭಿನ್ನತೆಗೆ ಆಸ್ಪದವಿಲ್ಲ. ಏಕೆಂದರೆ ಎಎಂಯು ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಗಲೂ ಅವರಿಗೆ ಸೈದ್ದಾಂತಿಕ ಭಿನ್ನಾಭಿಪ್ರಾಯವಿದ್ದರೂ ಅವರ ಗುರಿ ಸ್ವಾತಂತ್ರ್ಯವಾಗಿತ್ತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಅವರು ಒಂದಾದಂತೆ ನಾವು ನವ ಭಾರತಕ್ಕಾಗಿ ಒಂದಾಗಬೇಕಿದೆ ಎಂದು ತಿಳಿಸಿದ್ದಾರೆ.

 

Please follow and like us:
error