ಬೆಂಗಳೂರು : ಹೊರದೇಶಗಳಲ್ಲಿರುವ ಕನ್ನಡಿಗರು ಭೌತಿಕವಾಗಿ ನಮ್ಮಿಂದ ದೂರವಿರಬಹುದು. ಆದರೆ ಅವರೆಲ್ಲ ಕರ್ನಾಟಕದ ಮಣ್ಣಿನಮಕ್ಕಳು, ಕನ್ನಡಮ್ಮನ ಕರುಳಬಳ್ಳಿಯ ಕುಡಿಗಳು. ದೂರದೇಶಗಳಲ್ಲಿ ಇದ್ದೂ ತಾಯ್ನಾಡಿನ ಧ್ಯಾನ ಮಾಡುವ ಅನಿವಾಸಿ ಕನ್ನಡಿಗರನ್ನು ಸರ್ಕಾರ ನಿರ್ಲಕ್ಷ್ಯ ಮಾಡಕೂಡದು. ಅವರ ಎದೆಯ ದನಿಗೆ ಕಿವಿಗೊಡಬೇಕು ಎಂದು ಕರವೇ ರಾಜ್ಯಾಧ್ಯಕ್ಷ  ಟಿ.ಎ.ನಾರಾಯಣಗೌಡ್ರ ಆಗ್ರಹಿಸಿದ್ಧಾರೆ.

ಅನಿವಾಸಿ ಕನ್ನಡಿಗರ ಈ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ‌ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಬೆಂಬಲಿಸಿದ್ದು, ಈ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರವೇ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಕರ್ನಾಟಕವೆಂದರೆ ಕೇವಲ ಒಂದು ಭೂಪಟವಲ್ಲ. ಅದು ಕಾಲ, ದೇಶ, ಗಡಿಗಳನ್ನು ಮೀರಿದ್ದು. ಅದಕ್ಕಾಗಿಯೇ ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವೆಂದರೆ ಒಂದು ಮಂತ್ರ, ಶಕ್ತಿ, ದೇವಿ, ಸಿಡಿಲು, ಬೆಂಕಿ ಎಂದು ಬಣ್ಣಿಸಿದ್ದು, ನೀ‌ ಮೆಟ್ಟುವ ನೆಲ ಅದೇ ಕರ್ನಾಟಕ ಎಂದು ಘೋಷಿಸಿದ್ದು. ಅನಿವಾಸಿ ಕನ್ನಡಿಗರು ಎಲ್ಲೆಲ್ಲಿ ಕನ್ನಡವನ್ನು ಧೇನಿಸುತ್ತ ಬದುಕುತ್ತಿದ್ದಾರೋ ಅದೆಲ್ಲವೂ ಕರ್ನಾಟಕವೇ ಆಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಹೊರನಾಡಿನ ಕನ್ನಡಿಗರ‌ ಹಕ್ಕುಗಳನ್ನು ಎತ್ತಿಹಿಡಿಯುತ್ತ ಬಂದಿದೆ. ಸರ್ಕಾರ ಪರಭಾಷೆಗಳ ಉದ್ಯಮಿಗಳನ್ನು ಓಲೈಸುವುದನ್ನು ಬಿಟ್ಟು ರಾಜ್ಯದಲ್ಲಿ ಬಂಡವಾಳ ಹೂಡಲು ಅನಿವಾಸಿ ಕನ್ನಡಿಗ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ನೀಡಬೇಕು. ಅವರಿಗೆ ರಿಯಾಯಿತಿ, ಸೌಲಭ್ಯಗಳನ್ನು ಒದಗಿಸಬೇಕು.

 

ಹೊರದೇಶಗಳಲ್ಲಿ ಉದ್ಯೋಗ ಮಾಡುತ್ತಿರುವ ಕನ್ನಡಿಗರು ಸಮಸ್ಯೆಗಳಿಗೆ ಸಿಲುಕಿಕೊಂಡಾಗ ರಾಜ್ಯ ಸರ್ಕಾರ ಕೂಡಲೇ ನೆರವಿಗೆ ನೀಡಬೇಕು. ಪ್ರತಿಯೊಬ್ಬ ಕನ್ನಡಿಗರ ಜೀವ, ಮಾನ ಅತ್ಯಂತ ಮುಖ್ಯವಾದದ್ದು. ಅದನ್ನು ಕಾಪಾಡುವ ಹೊಣೆ ಕರ್ನಾಟಕ ಸರ್ಕಾರದ್ದು. ಒಬ್ಬನೇ ಒಬ್ಬ ಕನ್ನಡಿಗ ಕಾರ್ಮಿಕನಿಗೂ ಹೊರದೇಶಗಳಲ್ಲಿ ಯಾವುದೇ ರೀತಿಯ ಅನ್ಯಾಯವಾಗಬಾರದು.  ರಾಜ್ಯ ಸರ್ಕಾರ ಮೂರು ವರ್ಷಗಳಿಂದ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ಕೂಡಲೇ ಉಪಾಧ್ಯಕ್ಷರನ್ನು ನೇಮಿಸುವ ಜತೆಗೆ, ಕನ್ನಡ ಕಾಳಜಿಯ ಕ್ರಿಯಾಶೀಲ ಅಧಿಕಾರಿಗೆ ಸಮಿತಿಯ ಜವಾಬ್ದಾರಿ ನೀಡಬೇಕು. ಅನಿವಾಸಿ ಕನ್ನಡಿಗರು ಮತ್ತು ಸರ್ಕಾರದ ನಡುವೆ ಇರುವ ಏಕೈಕ ಕೊಂಡಿ ಈ ಸಮಿತಿ ಎಂಬುದನ್ನು ಸರ್ಕಾರ ಮರೆಯಬಾರದು.  ಅನಿವಾಸಿ ಕನ್ನಡಿಗರು ಎಂದಿಗೂ ಅನ್ಯದೇಶಗಳಲ್ಲಿ ತಬ್ಬಲಿತನ ಅನುಭವಿಸಬಾರದು. ಅವರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಇರುತ್ತದೆ. ಸರ್ಕಾರ ಅನಿವಾಸಿ ಕನ್ನಡಿಗರ ಎಲ್ಲ ಬೇಡಿಕೆಗಳಿಗೂ ಸ್ಪಂದಿಸಬೇಕು. ಪರಸ್ಪರ ನಿರಂತರ ಸಂಪರ್ಕ, ಸಂವಹನ ಸಾಧ್ಯವಾಗಬೇಕು. ಕನ್ನಡಿಗರೂ ಎಲ್ಲೆ ಇದ್ದರೂ ಒಂದಾಗಿರುತ್ತೇವೆ ಎಂಬುದನ್ನು ಸಾರಬೇಕು ಎಂದು ಹೇಳಿದ್ದಾರೆ.

Please follow and like us:
error