ಅತ್ಯಾಚಾರವಾಗಿ 20 ನಿಮಿಷದಲ್ಲೇ ಪ್ಯಾಂಟಮ್ ಮಾಡಿದ್ದೇನು ಗೊತ್ತಾ?

ಲಕ್ನೋ, ನ.26: ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಹತ್ಯೆ ಮಾಡಿದ ಆರೋಪಿಯ ಜಾಡು ಹಿಡಿದು ಕೇವಲ 20 ನಿಮಿಷಗಳಲ್ಲೇ ಪೊಲೀಸರ ಮುಂದೆ ತಂದು ನಿಲ್ಲಿಸಿದ ‘ಫ್ಯಾಂಟಮ್’ ವಿಶೇಷ ಶ್ಲಾಘನೆಗೆ ಪಾತ್ರಳಾಗಿದ್ದಾಳೆ!

ನಾಲ್ಕು ವರ್ಷದ ಲ್ಯಾಬ್ರಡಾರ್ ಫ್ಯಾಂಟಮ್ ಹೆಸರಿನ ಶ್ವಾನವನ್ನು ಅಪರಾಧ ಸ್ಥಳಕ್ಕೆ ಪೊಲೀಸರು ಕರೆದೊಯ್ದರು. ಘಟನೆ ನಡೆದ ಸ್ಥಳವಾದ ಮುಬಾರಕ್‌ಪುರ ಗ್ರಾಮದ ಅಗಲ ಕಿರಿದಾದ ಓಣಿಗಳಲ್ಲಿ ಸಂಚರಿಸಿದ ಫ್ಯಾಂಟಮ್ ಕೇವಲ 20 ನಿಮಿಷದಲ್ಲಿ ಆರೋಪಿಯ ಜಾಡುಹಿಡಿಯಿತು ಎಂದು ಎಸ್‌ಎಸ್ಪಿ ತ್ರಿವೇಣಿ ಸಿಂಗ್ ಹೇಳಿದ್ದಾರೆ.

ಘಟನಾ ಸ್ಥಳದಿಂದ ಕೇವಲ 250 ಮೀಟರ್ ಅಂತರದಲ್ಲಿ ಆರೋಪಿ ವಾಸವಿದ್ದ ಕೊಠಡಿಯ ಮುಂದೆ ನಿಂತು ಬೊಗಳಿದ ಫ್ಯಾಂಟಮ್, ಆ ಬಳಿಕ ಅತ್ಯಾಚಾರ ವೇಳೆ ಆರೋಪಿ ಧರಿಸಿದ್ದ ಎನ್ನಲಾದ ಬಟ್ಟೆಯನ್ನು ಪತ್ತೆ ಮಾಡಿತು ಎಂದು ಅವರು ವಿವರಿಸಿದರು.

ಶುಕ್ರವಾರ ಮುಂಜಾನೆ ಐದು ವರ್ಷದ ಬಾಲಕಿಯ ಮೃತದೇಹ ಆಕೆಯ ಮನೆಯಿಂದ ಕೇವಲ 400 ಮೀಟರ್ ಅಂತರದಲ್ಲಿದ್ದ ಕೆರೆ ಬಳಿ ಪತ್ತೆಯಾಗಿತ್ತು. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.

“ಫ್ಯಾಂಟಮ್‌ಳನ್ನು ಕಾರ್ಯಾಚರಣೆಗೆ ಇಳಿಸಿದೆವು. ಆಕೆ ನಿರಾಸೆಗೊಳಿಸಲಿಲ್ಲ. ಘಟನಾ ಸ್ಥಳವನ್ನು ವೀಕ್ಷಿಸಿದ ಬಳಿಕ ಆರೋಪಿ ತಂಗಿದ್ದ ಬಾಡಿಗೆ ಕೊಠಡಿಯತ್ತ ನೇರವಾಗಿ ತೆರಳಿತು. ಆತ ನಾಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ನಡೆಸಿ ಸೋಮವಾರ ಮುಂಜಾನೆ ಆತನನ್ನು ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.

ಆರೋಪಿಯನ್ನು ರಾಮ್ ಪರ್ವೇಶ್ ಚೌಹಾಣ್ (25) ಎಂದು ಗುರುತಿಸಲಾಗಿದ್ದು, ಈತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ದಲಿತ ಮಗು ಮನೆಯ ಹೊರಗೆ ತಾಯಿ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅಪಹರಿಸಿ, ಅತ್ಯಾಚಾರ ನಡೆಸಿ ಬಳಿಕ ಮಗುವನ್ನು ಕೊಂದ ಘಟನಾವಳಿಯನ್ನು ಆತ ವಿವರಿಸಿದ್ದಾಗಿ ಸಿಂಗ್ ತಿಳಿಸಿದರು.

ಗಡಿಭದ್ರತಾ ಪಡೆಯ ಗ್ವಾಲಿಯರ್ ತರಬೇತಿ ಕೇಂದ್ರದಲ್ಲಿ ಫ್ಯಾಂಟಮ್‌ಗೆ ತರಬೇತಿ ನೀಡಲಾಗಿತ್ತು. ಪೂರ್ವ ಉತ್ತರ ಪ್ರದೇಶದ ಈ ಜಿಲ್ಲೆಯಲ್ಲಿ ಕಳೆದ ಮಾರ್ಚ್ 27ರಂದು ನಡೆದ ಹದಿಹರೆಯದ ಯುವಕನ ಹತ್ಯೆ ಆರೋಪಿಯನ್ನೂ ಫ್ಯಾಂಟಮ್ ಪತ್ತೆ ಮಾಡಿದ್ದಳು.

Please follow and like us:
error