ಅತಿಥಿ ಉಪನ್ಯಾಸಕರ ಸಂಕಷ್ಟಗಳಿಗೆ ಸ್ಪಂದಿಸಿ- ಸರಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು :  ಕೊರೋನಾ ಸೋಂಕು ದಿನದಿಂದ ದಿನಕ್ಕೆ ಸಮುದಾಯಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಇದರ ನಡುವೆ ನಾಡಿನ ಜನರ ಜೀವನ ಕೂಡ ತೀವ್ರ ಬಿಕ್ಕಟ್ಟಿನತ್ತ ಸಾಗುತ್ತಿದೆ. ಕಳೆದ ಕೆಲವು ದಿನಗಳಿಂದೀಚೆಗೆ 8 ಜನ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಬ ಅತ್ಯಂತ ಆಘಾತಕರವಾದ ಮಾಹಿತಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಕಳೆದ ಹಲವು ತಿಂಗಳುಗಳಿಂದ ಸಂಬಳ ಕೊಡುವುದನ್ನು ನಿಲ್ಲಿಸಿದೆ. ಇದರಿಂದಾಗಿ. ಸುಮಾರು 20,000 ಅತಿಥಿ ಉಪನ್ಯಾಸಕರುಗಳ ಬದುಕು ಮೂರಾಬಟ್ಟೆಯಾಗಿದೆ.  ಕೂಡಲೇ ಅತಿಥಿ ಉಪನ್ಯಾಸಕರ ಸಂಕಷ್ಟಗಳಿಗೆ ಸ್ಪಂದಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

ಸ್ನಾತಕೋತ್ತರ ಪದವಿ, ಪಿಎಚ್‌.ಡಿ ಮುಂತಾದ ಉನ್ನತ ವಿದ್ಯಾಭ್ಯಾಸ ಮಾಡಿ ಹಲವಾರು ವರ್ಷಗಳಿಂದ ಕಾಲೇಜುಗಳ ಆಧಾರ ಸ್ತಂಭವಾಗಿ ದುಡಿಯುತ್ತಿರುವ ಉಪನ್ಯಾಸಕರುಗಳಿಗೆ ಸಂಬಳ ನೀಡದೇ ಸಂಕಷ್ಟಕ್ಕೆ ದೂಡಿರುವುದು. ಅತ್ಯಂತ ಅಮಾನವೀಯ ಸಂಗತಿ. ಪ್ರಧಾನಮಂತ್ರಿಗಳೇನೊ ಉದ್ಯೋಗವಿಲ್ಲದಿದ್ದವರು ಪಕೋಡ ಮಾರಬಹುದು ಎನ್ನುವ ಮೂಲಕ ಸಂಕಷ್ಟದಲ್ಲಿರುವ ಪದವೀಧರರನ್ನು ಅವಮಾನಿಸಿದರು.

ರಾಜ್ಯ ಸರ್ಕಾರ ಕೂಡ ಇದೇ ಧೋರಣೆ ತಾಳಿರುವಂತಿದೆ. ಇದರಿಂದಾಗಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹಳ ಜನರಿಗೆ ಸರ್ಕಾರಿ ಉದ್ಯೋಗದ ವಯೋಮಿತಿ ಸಹ ಮೀರಿ ಹೋಗಿದೆ. ಇದರಲ್ಲಿ ಸುಮಾರು 5.000 ಮಹಿಳಾ ಉಪನ್ಯಾಸಕರಿದ್ದಾರೆ. ಬೇರೆಲ್ಲೂ ಉದ್ಯೋಗ ಸಿಗದೇ ಇವರುಗಳಲ್ಲಿ ಅನೇಕರು ನರೇಗಾ ಮುಂತಾದ ಯೋಜನೆಗಳಲ್ಲಿ ಕೂಲಿಕಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಸಣ್ಣ ಪುಟ್ಟ ಕಾಯಿಲೆಗಳು ಬಂದರೆ ಆಸ್ಪತ್ರೆಗಳಿಗೆ ತೋರಿಸಲಾಗದ ದಯನೀಯ ಪರಿಸ್ಥಿತಿ ಇವರಿಗೆ ಬಂದೊದಗಿದೆ. ಸರ್ಕಾರ ಇದನ್ನು ನೋಡಿಯೂ ನೋಡದ ಹಾಗೆ ಕಣ್ಣು, ಕಿವಿ, ನಾಲಿಗೆಗಳನ್ನು ಬಂದುಮಾಡಿ ಕೂತಿದೆ. ಈ ರೀತಿಯ ನಿರ್ಲಕ್ಷ್ಯದ ಧೋರಣೆಯನ್ನು ಮೊದಲು ನಿಲ್ಲಿಸಬೇಕು.

 

ಸರ್ಕಾರವು ಅತಿಥಿ ಉಪನ್ಯಾಸಕರ ಸಂಕಷ್ಟಗಳಿಗೆ ಕೂಡಲೇ ಸ್ಪಂದಿಸಬೇಕು. ಲಾಕ್‌ಡೌನ್‌ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ. ಸಂಬಳವನ್ನು ನೀಡಬೇಕು. ಖಾಯಂ ನೌಕರರಿಗೆ ಇರುವ ಉದ್ಯೋಗ ಭದ್ರತೆ, ಭವಿಷ್ಯ ನಿಧಿ. ಇ.ಎಸ್‌.ಐ. ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಯಾವುದೇ ಕಾರಣಕ್ಕೂ ಯಾವೊಬ್ಬ ಅತಿಥಿ ಉಪನ್ಯಾಸಕರನ್ನು ಉದ್ಯೋಗದಿಂದ ತೆಗೆಯಬಾರದು. ದುಡಿಮೆ ಮಾಡುತ್ತಿದ್ದ ಉದ್ಯೋಗದಾತ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಉದ್ಯೋಗ ಭದ್ರತೆಯನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ.

 

Please follow and like us:
error