ಅಣಬೆ ಮತ್ತು ಜೇನು ಸಾಕಾಣಿಕೆ ತರಬೇತಿ ಯಶಸ್ವಿ


ಕೊಪ್ಪಳ,  : ತೋಟಗಾರಿಕೆ ಇಲಾಖೆ(ಜಿ.ಪಂ.) ಕೊಪ್ಪಳ ವತಿಯಿಂದ (ಓಖಐಒ) ಅಡಿಯ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕೊಪ್ಪಳ ರವರ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗೆ ನವೆಂಬರ್.12, ಗುರುವಾರದಂದು ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರುಗಳಿಗೆ ಅಣಬೆ ಕೃಷಿ ಮತ್ತು ಜೇನು ಸಾಕಾಣಿಕೆ ಬಗ್ಗೆ ತೋಟಗಾರಿಕೆ ತರಬೇತಿ ಕೇಂದ್ರ, ಮುನಿರಾಬಾದ್ ನಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿ.ಪಂ.ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಘುನಂದನ್ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಂಘದವರಿಗೆ ಸ್ವಾವಲಂಬನೆ ಜೀವನ ನಡೆಸಲು ಸಾಕಷ್ಟು ಉದ್ಯೋಗವಕಾಶಗಳಿದ್ದು, ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಫುಲ ಉದ್ಯೋಗವಕಾಶಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಲಭ್ಯವಿದ್ದು ಮಹಿಳೆಯರು ವಿಶೇಷವಾಗಿ ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಕೊಪ್ಪಳದಲ್ಲಿ ತೋಟಗಾರಿಕೆ ಇಲಾಖೆ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯಲ್ಲಿ ಅನೇಕ ಯೋಜನೆಗಳಿದ್ದು ಮಹಿಳೆಯರು ಸ್ವಾವಲಂಬನೆ ಜೀವನೋಪಾಯ ಕಂಡುಕೊಳ್ಳಲು ಅಣಬೆ ಕೃಷಿ ಮತ್ತು ಜೇನು ಸಾಕಾಣಿಕೆ ಕೈಗೊಳ್ಳಬೇಕು. ಸಂಘಗಳನ್ನು ನಿರ್ಮಿಸಿಕೊಂಡು ಈ ಉಪಕಸುಬುಗಳನ್ನು ಮಾಡಿದ್ದೇ ಆದಲ್ಲಿ ಉತ್ತಮ ಆರ್ಥಿಕ ಸ್ವಾವಲಂಬನೆ ಹೊಂದಬಹುದೆAದು ತಿಳಿಸಿದರು.
ಜಿ.ಪಂ.ಯ ಯೋಜನಾ ನಿದೇರ್ಶಕರಾದ ಕೃಷ್ಣಮೂರ್ತಿ ರವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸ್ವ-ಸಹಾಯ ಸಂಘಗಳಿಗೆ ಸಾಕಷ್ಟು ಅನುದಾನಗಳು ಲಭ್ಯವಿದ್ದು, ಅಣಬೆ ಕೃಷಿ ಮತ್ತು ಜೇನು ಸಾಕಾಣಿಕೆಯಂತಹ ಉದ್ಯಮಗಳನ್ನು ಆರಂಭಿಸಬಹುದಾಗಿದೆ ಎಂದರು.
ಕೊಪ್ಪಳ ತಾ.ಪಂ.ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಮ್. ಮಲ್ಲಿಕಾರ್ಜುನ ಮಾತನಾಡಿ, ಮಹಿಳೆಯರು ನಮ್ಮ ಭಾರತ ದೇಶದಲ್ಲಿ ಅತ್ಯಂತ ಪೂಜ್ಯನೀಯರಾಗಿದ್ದಾರೆ. ಅವರು ಯಾವುದೇ ಕೆಲಸ ಮಾಡಿದರೆ ಇತರರಿಗೆ ಸಹಾಯವಾಗುತ್ತದೆ. ಇಂತಹ ಮಹಿಳೆಯರು ಅಣಬೆ ಕೃಷಿ ಮತ್ತು ಜೇನು ಸಾಕಾಣಿಕೆ ಮಾಡಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕಬೇಕು ಮತ್ತು ಇತರರಿಗೂ ಮಾದರಿ ಆಗಬೇಕು ಎಂದರು.
ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಂತೆ ಎಲ್ಲಾ ಮಹಿಳೆಯರು ಅಣಬೆ ಕೃಷಿ ಮತ್ತು ಜೇನು ಸಾಕಾಣಿಕೆಗಳಂತಹ ಉದ್ಯಮಗಳನ್ನು ಆಶ್ರಯಿಸಿ ಆತ್ಮನಿರ್ಭರರು ಅಂದರೆ ಸ್ವಾವಲಂಬಿಗಳಾಗಬೇಕು ಎಂದರು. ಅಣಬೆ ಒಂದು ಸಂಪೂರ್ಣ ವಿಷಮುಕ್ತ ಸಸ್ಯಾಹಾರಿ ಆಹಾರವಾಗಿದ್ದು, ಅನೇಕ ಪೌಷ್ಠಿಕಾಂಶಗಳನ್ನು ಮತ್ತು ಅಪರೂಪವಾದ ‘ಡಿ’ ಜೀವಸತ್ವವನ್ನು ಹೊಂದಿದೆ. ಯಾವುದೇ ರಾಸಾಯನಿಕ ಇಲ್ಲದೇ ಉತ್ಪಾದಿಸಬಹುದಾದ ಅಣಬೆ ಮಾಂಸಾಹಾರಕ್ಕೆ ಪರ್ಯಾಯವಾಗಿದೆ. ಅಣಬೆಯಲ್ಲಿ ನಾಲ್ಕು ಬಗೆಯ ಪ್ರಭೇದಗಳಿದ್ದು, ಚಿಪ್ಪು ಅಣಬೆ ಅತಿ ಸುಲಭವಾಗಿ ಉತ್ಪಾದಿಸಬಹುದಾಗಿದೆ. ಸ್ಪಾನ್ ಎಂದು ಕರೆಯಲ್ಪಡುವ ಅಣಬೆ ಬೀಜಗಳು ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರಗಳಲ್ಲಿ ಲಭ್ಯವಿದ್ದು, ರೈತರಿಗೆ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಖಾಸಗಿಯಾಗಿಯೂ ಕೂಡಾ ಬೀಜಗಳು ಲಭ್ಯವಿದ್ದು, ಈ ತರಬೇತಿಯಲ್ಲಿ ಪ್ರತಿಯೊಬ್ಬರಿಗೂ ಉಚಿತವಾಗಿ ಅಣಬೆ ಬೀಜಗಳನ್ನು ನೀಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದು ಅಣಬೆ ಬೆಳೆಸಿ ನಮಗೆ ಮಾಹಿತಿ ನೀಡಬೇಕು ಎಂದರು.
ಅಣಬೆಯಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದ ಅವರು, ಇದೇ ರೀತಿಯಾಗಿ ಜೇನು ಸಾಕಾಣಿಕೆ ಕೂಡಾ ಒಂದು ಲಾಭದಾಯಕ ಸ್ವ-ಉದ್ಯೋಗವಾಗಿದ್ದು ಇದರಲ್ಲಿಯೂ ಅನೇಕ ಉಪ ಉತ್ಪನ್ನಗಳು ಉದಾ: ಜೇನು ಮೇಣ, ಜೇನು ವಿಷ, ಜೇನು ಅಂಟು ಮತ್ತು ರಾಜಶಾಯಿ ರಸಗಳು ಇದ್ದು ಇವುಗಳಿಂದ ಹೆಚ್ಚಿನ ಲಾಭ ಗಳಿಸಬಹುದಾಗಿದೆ ಎಂದು ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಈರುಳ್ಳಿ ಘಟಕ ನಿರ್ಮಾಣ ಮಾಡಿಕೊಳ್ಳಲು, ನೀರು ಸಂಗ್ರಹಣ ತೊಟ್ಟಿ ನಿರ್ಮಿಸಿಕೊಳ್ಳುವ ಯೋಜನೆಗಳು ಲಭ್ಯವಿದ್ದು ರೈತರು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಅಣಬೆ ಬೇಸಾಯದ ಕುರಿತು ಸಂಪನ್ಮೂಲ ವ್ಯಕ್ತಿಗಳು ಹಾಗೂ ಪ್ರಗತಿ ಪರ ಅಣಬೆ ಬೆಳೆಗಾರರಾದ ಸತ್ಯನಾರಾಯಣ ಹುಲಗಿ ಮತ್ತು ವೀರಭದ್ರಪ್ಪ ಮಾಳಶೆಟ್ರ, ಕುಷ್ಟಗಿ ರವರು ಉಪನ್ಯಾಸ ನೀಡಿದರು ಹಾಗೂ ಅಣಬೆ ಬೇಸಾಯದ ಕುರಿತು ಸವಿವರವಾಗಿ ತಿಳಿಸಿಕೊಟ್ಟರು. ನಿಂಗಪ್ಪ ಕುಂಬಾರ ರವರು ಜೇನು ಸಾಕಾಣಿಕೆ ಕುರಿತಂತೆ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾರಟಗಿಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಪಂಪಾವನದ ಹಿ.ಸ.ತೋ.ನಿ. ಶಿವಪುತ್ರಪ್ಪ ಶಂಭು, ಸಹಾಯಕ ನಿರ್ದೇಶಕಿ ಸೌಮ್ಯ, ಮುನಿರಾಬಾದ್ ಪಿಡಿಒ ಜಯಲಕ್ಷಿö್ಮ, ತೋಟಗಾರಿಕೆ ತರಬೇತಿ ಕೇಂದ್ರದ ಸ.ತೋ.ನಿರ್ದೇಶಕರಾದ ಮಂಜುನಾಥ ಲಿಂಗಣ್ಣವರ್, ಶರಣಬಸವ ಮನ್ನಾಪೂರ ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
220 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಈ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನಂತರ ಅಣಬೆ ಕೃಷಿ ಮಾಡಲು ಉಪಯೋಗವಾಗುವ ಅಣಬೆ ಕಿಟ್ ವಿತರಿಸಲಾಯಿತು.
ಹಾರ್ಟಿಕ್ಲಿನಿಕ ವಿಷಯ ತಜ್ಞರಾದ ವಾಮನಮೂರ್ತಿ ರವರು ನಿರೂಪಿಸಿದರು. ತೋಟಗಾರಿಕೆ ತರಬೇತಿ ಕೇಂದ್ರ ಮುನಿರಾಬಾದ್‌ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಜಯಶ್ರೀ ಕಲ್ಲಿಹಾಳ ರವರು ಸ್ವಾಗತಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಹನುಮೇಶ ನಾಯಕ ರವರು ವಂದಿಸಿದರು.

Please follow and like us:
error