ಅಚ್ಛೇದಿನ್ ದೀಪಾವಳಿ’ ಎಲ್ಲಿ?: ಕೇಂದ್ರ ಸರಕಾರವನ್ನು ಕುಟುಕಿದ ಶಿವಸೇನೆ

ಮುಂಬೈ,  : ದೀಪಾವಳಿ ಶನಿವಾರ ಮುಗಿಯುತ್ತದೆ. ಆದರೆ ಆರ್ಥಿಕತೆ ದಿವಾಳಿಯಾಗುವುದು ಯಾವಾಗ ಕೊನೆಗೊಳ್ಳುತ್ತದೆ. ‘ಅಚ್ಛೇದಿನ್ ದೀಪಾವಳಿ’ ಎಲ್ಲಿ ಎಂದು ಶಿವಸೇನೆ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ನೋಟು ರದ್ದತಿ ಮತ್ತು ಜಿಎಸ್‍ಟಿ ಜಾರಿಗೊಳಿಸಿದ ಕೇಂದ್ರದ ಕ್ರಮವನ್ನು ಟೀಕಿಸಿರುವ ಶಿವಸೇನೆ, ಜನರ ಭಾವನೆಗಳ ಜತೆ ಆಟವಾಡಿದ ಕೇಂದ್ರ ಸರಕಾರಕ್ಕೆ ಸರಿಯಾದ ಉಡುಗೊರೆ ನೀಡಲು ಜನರು ಸಜ್ಜಾಗಬೇಕಿದೆ ಎಂದಿದೆ.

“ದೇಶದಲ್ಲಿ ಎಲ್ಲೆಡೆ ಸುಳ್ಳನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಇಂತಹ ಸುಳ್ಳುನಿರೀಕ್ಷೆಗಳನ್ನು ಹುಟ್ಟಿಸಿ, ಭಾವನೆಗಳ ಜತೆ ಆಟವಾಡುವ ಸರ್ಕಾರಕ್ಕೆ ತಕ್ಕಶಾಸ್ತಿ ಮಾಡಲು ಜನ ತಯಾರಾಗಬೇಕು’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ ಸಂಪಾದಕೀಯ ಕರೆ ನೀಡಿದೆ.

“ನೋಟು ರದ್ದತಿ ಹಾಗೂ ಜಿಎಸ್‍ಟಿ, ಆರ್ಥಿಕತೆಯನ್ನು ದಿವಾಳಿಯಂಚಿಗೆ ತಲುಪಿಸಿದೆ. ನಿರ್ಮಾಣ ವಲಯ ಹಾಗೂ ವ್ಯಾಪಾರಿಗಳು ಹನ್ನೊಂದು ತಿಂಗಳಿಂದ ಗ್ರಾಹಕರಿಗಾಗಿ ಕಾಯುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿಪೂಜೆ ಮಾಡಲಾಗುತ್ತಿದೆ. ಮತ್ತೆ ನೋಟು ರದ್ದತಿಯ ಭೂತ ಕಾಡದಂತೆ ಮತ್ತು ಕಷ್ಟದಿಂದ ಕೂಡಿಟ್ಟ ಹಣವನ್ನು ಅದು ಒಯ್ಯದಂತೆ ಜನ ಪ್ರಾರ್ಥನೆ ಮಾಡಬೇಕು” ಎಂದು ಶಿವಸೇನೆ ಹೇಳಿದೆ.