ಅಂಬ್ಯುಲೆನ್ಸ್ ಲೇಡಿ! Positive News @ Corona Time

ಕೋವಿಡ್-19 ಬಿಕ್ಕಟ್ಟಿನ ಈ ಸಮಯದಲ್ಲಿ ಆಸ್ಪತ್ರೆ ಬಿಲ್ಲು, ಅಂಬ್ಯುಲೆನ್ಸ್ ಚಾರ್ಜ್ ಗಳು ಆಕಾಶಕ್ಕೇರಿ ರೋಗಿಗಳು ಇನ್ನಷ್ಟು ತತ್ತರಿಸಿರುವಾಗ ದೆಹಲಿಯ ಈ ದಂಪತಿಗಳು ಉಚಿತ ಅಂಬ್ಯುಲೆನ್ಸ್ ಸೇವೆಯ ಮೂಲಕ ನೂರಾರು ಕುಟುಂಬಗಳ ಕಣ್ಣೊರೆಸುತ್ತಿರುವುದು ಆಶಾದಾಯಕ ಸಂಗತಿ.

ದೆಹಲಿಯ ಹಿಮಾಂಶು ಕಾಲಿಯಾ ಮತ್ತು ಅವರ ಪತ್ನಿ ಟ್ವಿಂಕಲ್ ಕಾಲಿಯಾ 10 ಖಾಸಗಿ ಅಂಬ್ಯುಲೆಸ್ ಗಳನ್ನು ನಡೆಸುತ್ತಿದ್ದಾರೆ. ಎರಡು ಅಂಬ್ಯುಲೆನ್ಸ್ ಗಳನ್ನು ಗಂಡ ಹೆಂಡತಿ ಸ್ವತಃ ನಡೆಸುತ್ತಾರೆ. ಕಳೆದ ನಾಲ್ಕು ತಿಂಗಳಲ್ಲಿ ಈ ದಂಪತಿಗಳು 350 ಕ್ಕೂ ಹೆಚ್ಚು ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗಳಿಗೆ ಸಾಗಿಸಿ ಅವರ ಜೀವ ಉಳಿಸುವಲ್ಲಿ ಸಹಕರಿಸಿದ್ದಾರೆ. ಅಷ್ಟೆ ಅಲ್ಲದೆ, ಕೋವಿಡ್ ಶವಗಳನ್ನೂ ಸ್ಮಶಾನಗಳಿಗೆ ಸಾಗಿಸುವ ಮೂಲಕ ದುಃಖತಪ್ತ ಕುಟುಂಬಗಳ ನೋವಿನಲ್ಲೂ ಪಾಳ್ಗೊಳ್ಳುತ್ತಿದ್ದಾರೆ. ಇವರ ಸೇವಾ ತತ್ಪರತೆ ಎಷ್ಟೆಂದರೆ ಹೀಗೆ ಕೋವಿಡ್ ರೋಗಿ ಹಾಗೂ ಶವಗಳನ್ನು ಸಾಗಿಸಿದ ಪರಿಣಾಮವಾಗಿ ಜೂನ್ ತಿಂಗಳಲ್ಲಿ ಸ್ವತಃ ಟ್ವಿಂಕಲ್ ಕಾಲಿಯಾಗೆ ಕೋವಿಡ್ ಸೋಂಕು ತಗಲಿದಾಗ ಅವರು ತಮ್ಮ ಅಂಬ್ಯುಲೆನ್ಸ್ ಗಳನ್ನು ಇತರರ ಸೇವೆಗೆ ಬಿಟ್ಟು ಬೇರೆಯವರ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಾದರು! ಇಂತಹ ಕೆಲಸಗಳಲ್ಲಿ ಇಂತಹ ಅಪಾಯಗಳು ಸಹಜ; ಹಾಗೆಂದು ಜನರ ಕಷ್ಟದ ಸಮಯದಲ್ಲಿ ನೆರವಿಗೆ ಬಾರದಿರಲಾದೀತೇ? ಎನ್ನುವ ಈ ದಂಪತಿಗಳು ಲಾಕ್ ಡೌನಿನ ಪ್ರಾರಂಭದ ದಿನಗಳಲ್ಲಿ ಸಾವಿರಾರು ಜನ ಬಡಬಗ್ಗರಿಗೆ ಆಹಾರ ಹಂಚಿ ನೆರವಾಗಿದ್ದರು. ಟ್ವಿಂಕಲ್ ಕಾಲಿಯಾರನ್ನು ಜನ ಪ್ರೀತಿಯಿಂದ ಕರೆಯುವುದೇ ‘ಅಂಬ್ಯುಲೆನ್ಸ್ ಲೇಡಿ’ ಎಂದು!

ಹಿಮಾಂಶು ಕಾಲಿಯಾರ ಉಚಿತ ಅಂಬ್ಯುಲೆನ್ಸ್ ಸೇವೆ ಶುರುವಾದುದೇ ಅವರ ಕುಟುಂಬದ ಒಂದು ದುರಂತದ ಹಿನ್ನೆಲೆಯಲ್ಲಿ. 25 ವರ್ಷಗಳ ಹಿಂದೆ ಹಿಮಾಂಶುರವರ ತಂದೆ ಅಪಘಾತವೊಂದರಲ್ಲಿ ಸಿಕ್ಕಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲು ಅಂಬ್ಯುಲೆನ್ಸ್ ಸಿಗದ ಕಾರಣ ಅವರು ಮೂರು ವರ್ಷ ಕೋಮಾದಲ್ಲಿರಬೇಕಾಯಿತು. ಆಗ 14 ವರ್ಷ ಪ್ರಾಯದ ಹಿಂಮಾಂಶು ಕುಟುಂಬ ನಡೆಸಲು ಶಾಲೆ ಬಿಟ್ಟು ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಿದರು. ತನ್ನ ಕುಟುಂಬಕ್ಕಾದ ಗತಿ ಬೇರೆಯವರಿಗೆ ಆಗದಿರಲಿ ಎಂದು ತಾನು ಗಳಿಸಿದರಲ್ಲೇ ಉಳಿತಾಯ ಮಾಡಿ 2000 ದಲ್ಲಿ ಒಂದು ಬಾಡಿಗೆ ಕಾರಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದರು. 2002 ರಲ್ಲಿ ಇವರು ಟ್ವಿಂಕಲ್ ರನ್ನು ಮದುವೆಯಾದಾಗ ಆಕೆಯ ಮನೆಯವರಿಂದ ಯಾವುದೇ ಉಡುಗೊರೆಯನ್ನು ಪಡೆಯಲು ನಿರಾಕರಿಸಿ, ಅವರು ಒತ್ತಾಯಿಸಿದಾಗ ಅವರಿಂದ ಒಂದು ವಾಹನವನ್ನು ಕಾಣಿಕೆಯಾಗಿ ಪಡೆದರು. ಮುಂದೆ ಅದನ್ನೇ ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿ ಮೊತ್ತ ಮೊದಲ ಬಾರಿಗೆ ತನ್ನ ಸ್ವಂತದ ಅಂಬ್ಯುಲೆನ್ಸನ್ನು ಹೊಂದಿದರು. ಈಗ ಇವರ ಬಳಿ 10 ಅಂಬ್ಯುಲೆನ್ಸ್ ಗಳಿವೆ. ಟ್ವಿಂಕಲ್ ತಾನೂ ಒಂದು ಅಂಬ್ಯುಲೆನ್ಸ್ ಚಲಾಯಿಸುವ ಮೂಲಕ ಗಂಡನ ಕೆಲಸದಲ್ಲಿ ಆಸರೆಯಾಗಿದ್ದಾರೆ. ಇಬ್ಬರೂ ಈವರೆಗೆ 6000 ಕ್ಕೂ ಹೆಚ್ಚು ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗಳಿಗೆ ಸೇರಿಸಿ ಸಮಾಜಕ್ಕೆ ಆಪತ್ಬಾಂಧವರಾಗಿ ನೆರವಾಗುತ್ತಿದ್ದಾರೆ.

Panju Gangolli

Please follow and like us:
error