ಅಂಬೇಡ್ಕರ್ ವಿಚಾರಗಳಿಂದ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ: ಸುಜಾತಾ ಕಳ್ಳಿಮನಿ

ವಿಜಯಪುರ ಜ. ೧೦- ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿಚಾರಗಳನ್ನು ಅಳವಡಿಸಿದರೆ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ ಅಭಿಪ್ರಾಯಪಟ್ಟರು.

‘ಧಮ್ಮಚಕ್ರ ಪರಿವರ್ತನ’ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಡಾ. ಅಂಬೇಡ್ಕರ್ ಅವರು ತಮ್ಮ ಜೀವಿತ ಅವಧಿಯಲ್ಲಿ ಪ್ರತಿಪಾದಿಸಿದ ಎಲ್ಲ ವಿಚಾರಗಳು ಇವತ್ತು ಪ್ರಸ್ತುತವೆನಿಸುತ್ತಿವೆ. ದೇಶದ ಇವತ್ತಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅವರ ವಿಚಾರಗಳು ವಾಸ್ತವತೆಗೆ ಎಷ್ಟು ಹತ್ತಿರವಾಗಿವೆ ಎಂಬುದರ ಅರ್ಥವಾಗುತ್ತದೆ ಎಂದು ಹೇಳಿದರು.

ದೇಶವು ಇಂದು ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟುಗಳಿಂದ ಬಳಲುತ್ತಿದೆ. ಬಡತನ, ನಿರುದ್ಯೋಗ ಹೆಚ್ಚುತ್ತಿದೆ. ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ಕಲಹಗಳು ನಿಂತಿಲ್ಲ.

ರೈತರು, ಮಹಿಳೆಯರು, ಕಾರ್ಮಿಕರು ಸೇರಿದಂತೆ ಎಲ್ಲ ಶೋಷಿತರು ತೀವ್ರ ಸಂಕಷ್ಟದ ಸಂದರ್ಭಗಳನ್ನು ಎದುರಿಸುತ್ತಿದ್ದಾರೆ. ಡಾ. ಅಂಬೇಡ್ಕರ್ ಮಾರ್ಗವೊಂದೇ ಇದಕ್ಕೆಲ್ಲ ಪರಿಹಾರ ನೀಡಬಹುದಾಗಿದೆ ಎಂದು ಪ್ರತಿಪಾದಿಸಿದರು.
ಮಹಿಳೆಯರು ಸೇರಿದಂತೆ ಎಲ್ಲ ಶೋಷಿತರು ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಬಾಬಾಸಾಹೇಬರು ಭಾರತವನ್ನು ಪ್ರಬುದ್ಧ ರಾಷ್ಟ್ರವಾಗಿ ರೂಪಿಸುವ ಕನಸು ಕಂಡಿದ್ದರು. ದೇಶದ ಪ್ರತಿಯೊಬ್ಬ ನಾಗರಿಕನೂ ನೆಮ್ಮದಿಯಿಂದ ಬದುಕಬೇಕೆಂಬುದು ಅವರ ಬಯಕೆಯಾಗಿತ್ತು. ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಕಲ್ಲಪ್ಪ ತೊರವಿ ಅವರು ಮಾತನಾಡಿ, ಜಾತಿಯೇ ಪ್ರಮುಖವಾಗಿರುವ ಭಾರತವನ್ನು ಜಾತಿಮುಕ್ತಗೊಳಿಸುವುದಕ್ಕಾಗಿ ಬುದ್ಧ-ಬಸವ-ಅಂಬೇಡ್ಕರ್ ಸೇರಿದಂತೆ ಅನೇಕ ಸಂತರು ಮಹಾಪುರುಷರು ಹೋರಾಟ ಮಾಡಿದ್ದಾರೆ. ಶೋಷಿತ ಸಮುದಾಯಗಳು ಜಾತಿಭಾವನೆಯನ್ನು ತೊರೆದು ಪರಸ್ಪರ ಸೌಹಾರ್ದಯುತವಾದ ಸಂಬಂಧವನ್ನು ಹೊಂದಿದಾಗ ಮಾತ್ರ ಡಾ. ಅಂಬೇಡ್ಕರ್ ಅವರ ಕನಸಿನ ಭಾರತ ಕಟ್ಟುವುದು ಸಾಧ್ಯ ಎಂದು ಹೇಳಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಭಾರತೀಯ ಜೈಭೀಮ ದಳದ ರಾಜ್ಯಾಧ್ಯಕ್ಷ ನಾಗರಾಜ ಲಂಬು, ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಕಾರ್ಯದರ್ಶಿ ವೆಂಕಟೇಶ ವಗ್ಯಾನವರ, ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಹೊಸಮನಿ ಮಾತನಾಡಿದರು. ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಚಲವಾದಿ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ‘ಧಮ್ಮಚಕ್ರ ಪರಿವರ್ತನ’ ದಿನದರ್ಶಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಅನಿಲ ಹೊಸಮನಿ, ಭಗವಾನ ಬುದ್ಧ, ಜ್ಯೋತಿಬಾ ಫುಲೆ, ಅಯ್ಯನ್ ಕಾಳಿ, ಸಾವಿತ್ರಿಬಾಯಿ ಫುಲೆ ಸೇರಿದಂತೆ ಬಹುಜನ ಸಮಾಜದ ಮಹಾಪುರುಷರ ಮಾಹಿತಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಡೆಸಿದ ಚಳವಳಿಯನ್ನು ಪರಿಚಯಿಸುವುದು ಈ ದಿನದರ್ಶಿಕೆಯ ಉದ್ದೇಶವಾಗಿದೆ ಎಂದು ಹೇಳಿದರು. ಕೊನೆಯಲ್ಲಿ ಪತ್ರಕರ್ತ ಸಂಘರ್ಷ ಹೊಸಮನಿ ವಂದಿಸಿದರು.
ಶ್ರೀಮತಿ ಭಾಗ್ಯಶ್ರೀ ವಗ್ಯಾನವರ, ಶ್ರೀಮತಿ ಸಿದ್ದಮ್ಮ ಚಲವಾದಿ, ಪ್ರವೀಣ ಪಾಟೀಲ್, ಶಿವು ಮ್ಯಾಗೇರಿ, ಶಿವಪ್ಪ ಕಾಂಬಳೆ, ಶ್ರೀಮತಿ ಶಾರದಾ ಹೊಸಮನಿ, ಶ್ರೀಮತಿ ಭಾಗ್ಯಶ್ರೀ ಹೊಸಮನಿ, ಶ್ರೀಮತಿ ಕಾಶಿಬಾಯಿ ಹೊತ್ತಗಿ, ಎಸ್.ಪಿ. ಯಂಭತ್ನಾಳ, ಶಿವು ಸಂದಿಮನಿ, ಅನಂತ ವರಕನಹಳ್ಳಿ, ಜಗದೀಶ ಮೂಲಿಮನಿ, ಮತ್ತಿತರರು ಉಪಸ್ಥಿತರಿದ್ದರು.

Please follow and like us:
error